ವಿರೋಧ-ಶಿಕ್ಷಣ ವ್ಯವಸ್ಥೆಯ ದ್ವಂದ್ವ ನೀತಿ ಏಕೆ ?
ಒಂದೆಡೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುವ ನವೋದಯ, ಸೈನಿಕ್, ಮಿಲಿಟರಿ ಹಾಗೂ ವಿವಿಧ ವಸತಿ ಶಾಲೆಗಳು ಪ್ರವೇಶ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಿವೆ. ಮತ್ತೊಂದೆಡೆ, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ೫ನೇ ಅಥವಾ ೭ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಪರೀಕ್ಷಿಸುವ ಕುರಿತು ಪ್ರಸ್ತಾಪ ಬಂದಾಗ ಮಾತ್ರ ಅದನ್ನು ಮಕ್ಕಳ ಹಕ್ಕಿನ ಉಲ್ಲಂಘನೆ ಎಂದು ವಿರೋಧಿಸಲಾಗುತ್ತದೆ. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಈ ವಿರೋಧಾಭಾಸ ಏಕೆ?
ಈ ಎರಡು ನಿಲುವುಗಳ ನಡುವಿನ ವ್ಯತ್ಯಾಸವನ್ನು ಗಂಭೀರವಾಗಿ ಪರಿಶೀಲಿಸಬೇಕಿದೆ. ಪ್ರವೇಶ ಪರೀಕ್ಷೆಯ ಉದ್ದೇಶ ಸೀಮಿತ ಆಸನಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವುದು. ಆದರೆ ಕಲಿಕಾ ಮಟ್ಟದ ಮೌಲ್ಯಮಾಪನದ ಉದ್ದೇಶ ಮಕ್ಕಳನ್ನು ಹೊರಗಿಡುವುದಲ್ಲ; ಅವರು ನಿರೀಕ್ಷಿತ ಕಲಿಕಾ ಸಾಮರ್ಥ್ಯವನ್ನು ಗಳಿಸಿದ್ದಾರೆಯೇ ಎಂಬುದನ್ನು ತಿಳಿದು, ಅಗತ್ಯವಿದ್ದರೆ ಹೆಚ್ಚುವರಿ ಶೈಕ್ಷಣಿಕ ನೆರವು ಒದಗಿಸುವುದು. ಒಬ್ಬ ವಿದ್ಯಾರ್ಥಿ ೮ನೇ ತರಗತಿಗೆ ಬಂದಾಗಲೂ ಸರಿಯಾಗಿ ಓದಲು, ಬರೆಯಲು ಅಥವಾ ಮೂಲಭೂತ ಗಣಿತ ಮಾಡಲು ಸಾಧ್ಯವಾಗದಿದ್ದರೆ, ಅದು ಕೇವಲ ವಿದ್ಯಾರ್ಥಿಯ ವೈಫಲ್ಯವಲ್ಲ; ಅದು ಸಂಪೂರ್ಣ ಶಿಕ್ಷಣ ವ್ಯವಸ್ಥೆಯ ಮುಂದೆ ನಿಂತಿರುವ ಪ್ರಶ್ನೆಯಾಗಿದೆ.
ಈ ಹಿನ್ನೆಲೆಯಲ್ಲಿ ೫ನೇ ಅಥವಾ ೭ನೇ ತರಗತಿಯಲ್ಲಿ ನಡೆಯುವ ಕಲಿಕಾ ಮೌಲ್ಯಮಾಪನವನ್ನು "ಪಾಸ್ - ಫೇಲ್ ಪರೀಕ್ಷೆ" ಎಂದು ನೋಡುವ ಬದಲು, ಕ್ಷಣದ ಗುಣಮಟ್ಟದ ಆರೋಗ್ಯ ತಪಾಸಣೆ ಎಂದು ನೋಡಬೇಕಾಗಿದೆ.
ಇಂತಹ ಮೌಲ್ಯಮಾಪನದಿಂದ ಕೇವಲ ವಿದ್ಯಾರ್ಥಿಗಳ ಕಲಿಕೆಯ ಮಟ್ಟವೇ ತಿಳಿಯುವುದಲ್ಲ; ಪ್ರಾಥಮಿಕ ಶಾಲಾ ಶಿಕ್ಷಕರ ಬೋಧನಾ ಪರಿಣಾಮಕಾರಿತ್ವ, ತರಗತಿ ನಿರ್ವಹಣೆ ಮತ್ತು ಬೋಧನಾ ನೈಪುಣ್ಯತೆಯೂ ಪರೋಕ್ಷವಾಗಿ ಅಳೆಯಲ್ಪಡುತ್ತದೆ. ಉತ್ತಮ ಶಿಕ್ಷಕರಿಗೆ ಇದು ತಮ್ಮ ಶ್ರಮದ ಫಲಿತಾಂಶವನ್ನು ತೋರಿಸುವ ಅವಕಾಶವಾಗಬಹುದು; ಇನ್ನಷ್ಟು ಬೆಂಬಲ ಅಗತ್ಯವಿರುವ ಶಾಲೆಗಳಿಗೆ ಇದು ಸುಧಾರಣೆಯ ದಿಕ್ಕು ತೋರಿಸಬಹುದು.
ಸರ್ಕಾರ ಪ್ರತಿ ವರ್ಷ ಶಿಕ್ಷಕರಿಗೆ ವಿವಿಧ ವಿಷಯಗಳಲ್ಲಿ ತರಬೇತಿ ನೀಡುತ್ತದೆ. ಈಐಓ (ಈouಟಿಜಚಿಣioಟಿಚಿಟ ಐiಣeಡಿಚಿಛಿಥಿ ಚಿಟಿಜ ಓumeಡಿಚಿಛಿಥಿ), ಹೊಸ ಪಠ್ಯಕ್ರಮ, ಸಾಮರ್ಥ್ಯಾಧಾರಿತ ಶಿಕ್ಷಣ, ನಿರಂತರ ಮೌಲ್ಯಮಾಪನ, ಡಿಜಿಟಲ್ ಬೋಧನೆ, ಸಮಗ್ರ ಶಿಕ್ಷಣ - ಹೀಗೆ ಅನೇಕ ತರಬೇತಿಗಳಿಗೆ ಶಿಕ್ಷಕರು ಶಾಲಾ ಮಕ್ಕಳ ಅಮೂಲ್ಯ ಸಮಯವನ್ನು ಮೀಸಲಿಡುತ್ತಾರೆ. ಈ ತರಬೇತಿಗಳಿಗಾಗಿ ಶಿಕ್ಷಣ ಇಲಾಖೆಯೂ ಸಾಕಷ್ಟು ಮಾನವ ಸಂಪನ್ಮೂಲ, ಸಮಯ ಮತ್ತು ಸಾರ್ವಜನಿಕ ಹಣವನ್ನು ವೆಚ್ಚ ಮಾಡುತ್ತದೆ.
ಈ ತರಬೇತಿಗಳ ಪರಿಣಾಮ ಮಕ್ಕಳ ಕಲಿಕೆಯಲ್ಲಿ ಕಾಣಿಸುತ್ತಿದೆಯೇ? ಶಿಕ್ಷಕರಿಗೆ ನೀಡಿದ ತರಬೇತಿಯ ಫಲವಾಗಿ ಮಕ್ಕಳ ಓದು, ಬರವಣಿಗೆ, ಗಣಿತ ಹಾಗೂ ಅರ್ಥೈಸುವ ಸಾಮರ್ಥ್ಯ ಹೆಚ್ಚಿದೆಯೇ? ಅಥವಾ ತರಬೇತಿ ಕೇವಲ ಹಾಜರಾತಿ ಮತ್ತು ಪ್ರಮಾಣಪತ್ರಕ್ಕೆ ಮಾತ್ರ ಸೀಮಿತವಾಗಿದೆಯೇ? ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಯಾವುದಾದರೂ ವಸ್ತುನಿಷ್ಠ ಕಲಿಕಾ ಮೌಲ್ಯಮಾಪನ ಅಗತ್ಯ. ಅಂತಹ ಮೌಲ್ಯಮಾಪನವಿಲ್ಲದೆ ತರಬೇತಿಗಳ ಪರಿಣಾಮ ವನ್ನು ವೈಜ್ಞಾನಿಕವಾಗಿ ಅಳೆಯುವುದು ಕಷ್ಟ.ಇಂತಹ ಪರೀಕ್ಷೆಗಳು ಇಲಾಖೆಗೂ ಕನ್ನಡಿಯಂತಾಗಬಹುದು. ಶಿಕ್ಷಣ ಇಲಾಖೆ ರೂಪಿಸುವ ನೀತಿಗಳು, ಪಠ್ಯಕ್ರಮಗಳು, ತರಬೇತಿ ಗಳು, ಮೇಲ್ವಿಚಾರಣೆ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳು ನಿಜವಾಗಿಯೂ ಮಕ್ಕಳಿಗೆ ತಲುಪುತ್ತಿವೆಯೇ ಎಂಬುದನ್ನು ತಿಳಿಯಲು ಇದು ಒಂದು ಪ್ರಮುಖ ಸೂಚ್ಯಂಕವಾಗಬಹುದು.
ಅದೇ ರೀತಿ, ಶಾಲಾ ಮುಖ್ಯಶಿಕ್ಷಕರು, ಬಿಇಓ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶೈಕ್ಷಣಿಕ ಸಂಯೋಜಕರು ಹಾಗೂ ಇತರ ಆಡಳಿತಾತ್ಮಕ ಹಂತಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹ ಇಂತಹ ಮಾಹಿತಿಯು ಸಹಕಾರಿಯಾಗುತ್ತದೆ. ಸಮಸ್ಯೆ ಎಲ್ಲಿದೆ ಎಂಬುದು ಸ್ಪಷ್ಟವಾದಾಗ ಮಾತ್ರ ಸೂಕ್ತ ಪರಿಹಾರವನ್ನು ರೂಪಿಸಲು ಸಾಧ್ಯ. ಆದರೆ ಒಂದು ಎಚ್ಚರಿಕೆ ಇರಬೇಕಾದದ್ದು, ಈ ಮೌಲ್ಯಮಾಪನವನ್ನು ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಲು, ಶಿಕ್ಷಕರನ್ನು ಅವಮಾನಿಸಲು ಅಥವಾ ಕೇವಲ ಶಿಕ್ಷಾತ್ಮಕ ಕ್ರಮಕ್ಕೆ ಬಳಸಬಾರದು. ಬದಲಾಗಿ ಇದು ಸುಧಾರಣೆ, ಬೆಂಬಲ ಮತ್ತು ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸುವ ಸಾಧನವಾಗಬೇಕು.
ನವೋದಯ ಮತ್ತು ಇತರ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳಲ್ಲಿ ವಿಫಲರಾದ ಮಕ್ಕಳಿಗೆ ಸಮಾಜ "ಇದು ಆಯ್ಕೆ ಪ್ರಕ್ರಿಯೆ" ಎಂದು ಹೇಳುತ್ತದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಯ ಮಟ್ಟವನ್ನೇ ಅಳೆಯಬಾರದು ಎನ್ನುವುದು ತಾರ್ಕಿಕವಾಗಿ ಪ್ರಶ್ನೆ ಹುಟ್ಟಿಸುತ್ತದೆ.
ಶಿಕ್ಷಣದ ಹಕ್ಕು ಎಂದರೆ ಕೇವಲ ಶಾಲೆಗೆ ದಾಖಲಾತಿ ಅಥವಾ ಮುಂದಿನ ತರಗತಿಗೆ ಬಡ್ತಿ ಅಲ್ಲ. ನಿಜವಾದ ಶಿಕ್ಷಣದ ಹಕ್ಕು ಎಂದರೆ ಪ್ರತಿಯೊಬ್ಬ ಮಗುವೂ ಗುಣಮಟ್ಟದ ಶಿಕ್ಷಣವನ್ನು ಪಡೆದು, ಓದಲು, ಬರೆಯಲು, ಅರ್ಥಮಾಡಿಕೊಳ್ಳಲು ಮತ್ತು ಆತ್ಮವಿಶ್ವಾಸದಿಂದ ಮುಂದಿನ ಹಂತದ ಶಿಕ್ಷಣಕ್ಕೆ ಸಿದ್ಧವಾಗುವುದು.ಆದ್ದರಿಂದ ಈಗ ನಡೆಯಬೇಕಾದ ಚರ್ಚೆ "ಮೌಲ್ಯಮಾಪನ ಇರಬೇಕೇ ಬೇಡವೇ?" ಎಂಬುದಲ್ಲ; "ಮೌಲ್ಯಮಾಪನವನ್ನು ಮಕ್ಕಳ ಹಿತಕ್ಕಾಗಿ, ಶಿಕ್ಷಕರ ವೃತ್ತಿಪರ ಬೆಳವಣಿಗೆಗಾಗಿ ಮತ್ತು ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಹೆಚ್ಚಿಸಲು ಹೇಗೆ ಬಳಸಬಹುದು?" ಎಂಬುದಾಗಿರಬೇಕು.
ಏಕೆAದರೆ ಅಳೆಯಲಾಗದ ಗುಣಮಟ್ಟವನ್ನು ಸುಧಾರಿಸುವುದು ಕಷ್ಟ. ಮಕ್ಕಳ ಕಲಿಕೆಯನ್ನು ಪ್ರಾಮಾಣಿಕವಾಗಿ ಅಳೆಯುವ ಶಿಕ್ಷಣ ವ್ಯವಸ್ಥೆಯೇ ಭವಿಷ್ಯದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಲು ಸಾಧ್ಯ. ಇನ್ನಾದರೂ ಶಿಕ್ಷಣ ಇಲಾಖೆ ಪ್ರಾಮಾಣಿಕವಾಗಿ ಮಕ್ಕಳ ಗುಣಾತ್ಮಕ ಕಲಿಕೆಗೆ ಪ್ರಾಶಸ್ತ್ಯ ಕೊಡಬಹುದೇ?
ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯು ಮಕ್ಕಳ ಕಲಿಕಾ ಗುಣಮಟ್ಟದ ಮಾಪನದ ಉದ್ದೇಶದಿಂದ ನಡೆಸುವ ಯಾವುದೇ ಪರೀಕ್ಷೆಗಳಿದ್ದರೂ ಅದಕ್ಕೆ ಪೂರ್ಣ ಬೆಂಬಲವನ್ನು ಕೊಡಲಿದೆ, ಯಾಕೆಂದರೆ ಈ ವಿರೋಧ ವ್ಯಕ್ತಪಡಿಸುವ ಮಕ್ಕಳ ಹಕ್ಕು, ಶಿಕ್ಷಣ ತಜ್ಞರುಗಳ ಮಕ್ಕಳೂ ಎಲ್ಲೂ ಅವರ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿದ ಉದಾಹರಣೆಯೇ ಇಲ್ಲ.
- ಧನಂಜಯ್, ಕೊಡಗು ಜಿಲ್ಲಾ ನಿರ್ದೇಶಕ, ರಾಜ್ಯ ಎಸ್.ಡಿ.ಎಂ.ಸಿ. ಸಮನ್ವಯ ಕೇಂದ್ರ ವೇದಿಕೆ.