ಮಡಿಕೇರಿ, ಜು. ೩: ರಾಜ್ಯದ ಪುಟ್ಟ ಜಿಲ್ಲೆಯಾದರೂ ರಾಜ್ಯಕ್ಕೆ, ದೇಶಕ್ಕೆ ದೊಡ್ಡಮಟ್ಟದ ಕೊಡುಗೆ ನೀಡಿರುವ, ನೀಡುತ್ತಾ ಬಂದಿರುವ ಕೊಡಗು ಜಿಲ್ಲೆ ಇದೀಗ ಮತ್ತೆ ಸಚಿವ ಸ್ಥಾನದಿಂದ ವಂಚಿತಗೊAಡಿದೆ. ೨೦೦೪ರ ಸಂದರ್ಭ ಮೂವರು ಸಚಿವರಾಗಿದ್ದ ಬಳಿಕ ಕೊಡಗು ಜಿಲ್ಲೆ ಸತತವಾಗಿ ಸುದೀರ್ಘ ೨೨ ವರ್ಷಗಳಿಂದ ಜಿಲ್ಲೆಯ ಶಾಸಕರನ್ನು ರಾಜ್ಯ ಸರಕಾರದಲ್ಲಿ ಸಚಿವರನ್ನಾಗಿ ಕಂಡಿಲ್ಲ. (೨೦೧೨-೧೩ರ ಅವಧಿಯಲ್ಲಿ ಬಿಜೆಪಿ ಸರಕಾರದಲ್ಲಿ ಕೇವಲ ೮ ತಿಂಗಳಿಗೆ ಅಪ್ಪಚ್ಚು ರಂಜನ್ ಅವರು ಸಚಿವರಾಗಿದ್ದರು) ಈ ಬಾರಿ ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಕೊಡಗಿನವರು ಸಚಿವರಾಗುವುದು ಖಚಿತ ಎಂಬ ಭಾರೀ ನಿರೀಕ್ಷೆ-ವಿಶ್ವಾಸ ಹೊಂದಲಾಗಿತ್ತು.

೨೦೨೩ರಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗಲೇ ಕೊಡಗಿಗೆ ಸಚಿವ ಸ್ಥಾನದ ನಿರೀಕ್ಷೆ ಮಾಡಲಾಗಿತ್ತಾದರೂ ಈಡೇರಿರಲಿಲ್ಲ. ಇದೀಗ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಖಡಾಖಂಡಿತವಾಗಿ ಸಚಿವ ಸ್ಥಾನ ಸಿಕ್ಕೇಸಿಗುತ್ತದೆ ಎಂಬ ಭಾರೀ ಭರವಸೆ ಮೂಡಿತ್ತು. ಅದರಲ್ಲೂ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಖಚಿತ ಎಂಬ ಮಾತು-ಚರ್ಚೆ, ಕೊಡಗಿನಲ್ಲಿ ಮಾತ್ರವಲ್ಲದೆ ರಾಜ್ಯ, ರಾಷ್ಟçಮಟ್ಟದಲ್ಲೂ ಭಾರೀ ಸುದ್ದಿಯಲ್ಲಿತ್ತು. ನಿನ್ನೆ ರಾತ್ರಿಯ ತನಕವೂ ಪೊನ್ನಣ್ಣ ಸಚಿವರಾಗಲಿದ್ದಾರೆ ಎಂಬುದು ಖಚಿತ ಎಂಬAತಹ ಪರಿಸ್ಥಿತಿಯಿತ್ತು. ಆದರೆ, ಸೋಮವಾರ ನೂತನ ಸಚಿವರ ಪಟ್ಟಿ ಪ್ರಕಟಗೊಂಡಾಗ ಪೊನ್ನಣ್ಣ ಅವರ ಹೆಸರು ಇಲ್ಲದಂತಾಗಿ ಕೊಡಗು ಮತ್ತೊಮ್ಮೆ ಸಚಿವ ಸ್ಥಾನದಿಂದ ವಂಚಿತವಾಗಿದೆ.

ಕೊಡಗಿನ ಮತ್ತೋರ್ವ ಶಾಸಕ ಡಾ. ಮಂತರ್ ಗೌಡ ಅವರೂ ಆಕಾಂಕ್ಷಿಯಾಗಿದ್ದರು. ಇದೀಗ ಇಬ್ಬರೂ ವಂಚಿತರಾಗಿದ್ದಾರೆ. ಕೇವಲ ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಮಾತ್ರವಲ್ಲ ರಾಜ್ಯದಲ್ಲಿ ೨೦೦೪ರ ಬಳಿಕ ಆಡಳಿತ ನಡೆಸಿದ ಎಲ್ಲಾ ಸರಕಾರಗಳೂ ಕೊಡಗಿಗೆ ಸಚಿವ ಸ್ಥಾನ ನೀಡದೇ ವಂಚಿಸುತ್ತಾ ಬಂದಿರುವುದು ಕೊಡಗಿನ ದೌರ್ಭಾಗ್ಯ. ೧೯೯೯ರಿಂದ ೨೦೦೪ರ ತನಕ ಅವಧಿಯಲ್ಲಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಂ.ಎA. ನಾಣಯ್ಯ, ಸುಮಾವಸಂತ್ ಹಾಗೂ ಟಿ. ಜಾನ್ ಅವರು ರಾಜ್ಯ ಸಚಿವ ಸಂಪುಟದಲ್ಲಿದ್ದರು. ಇದಾದ ಬಳಿಕ ಕೊಡಗಿಗೆ ಪೂರ್ಣ ಪ್ರಮಾಣದ ಸಚಿವ ಸ್ಥಾನದ ಭಾಗ್ಯವೇ ಸಿಗುತ್ತಿಲ್ಲ.

ಕಾಂಗ್ರೆಸ್-ಜೆಡಿಎಸ್, ಮೈತ್ರಿ ಸರಕಾರ, ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ, ಬಿಜೆಪಿಯದ್ದೆ ಪೂರ್ಣ ಪ್ರಮಾಣದ ಸರಕಾರ, ಕಾಂಗ್ರೆಸ್‌ನದ್ದೇ ಪೂರ್ಣ ಸರಕಾರ, ಇದೀಗ ಮತ್ತೊಮ್ಮೆ ಕಾಂಗ್ರೆಸ್‌ನದ್ದೆ ಬಹುಮತದ ಸರಕಾರ ಬಂದರೂ ಕೊಡಗು ಪರಿಗಣಿಸಲ್ಪಡುತ್ತಿಲ್ಲ ಎಂಬುದು ವಿಷಾದಕರ. ಅದರಲ್ಲೂ ಈ ಬಾರಿ ಕಳೆದ ಹಲವು ವರ್ಷಗಳ ಸುದೀರ್ಘ ಅಂತರದ ಬಳಿಕ ಕೊಡಗಿನಲ್ಲಿ ಕಾಂಗ್ರೆಸ್‌ನ ಇಬ್ಬರು ಶಾಸಕರು ಚುನಾಯಿತರಾಗಿದ್ದರು. ರಾಜ್ಯದಲ್ಲೂ ಕಾಂಗ್ರೆಸ್ ಸರಕಾರ, ಕೊಡಗಿನಲ್ಲೂ ಕಾಂಗ್ರೆಸ್ ಶಾಸಕರುಗಳು ಇದ್ದ ಕಾರಣ ಸಚಿವ ಸ್ಥಾನದ ನಿರೀಕ್ಷೆ ಸಹಜವಾಗಿಯೇ ಮಾಡಲಾಗಿತ್ತು. ಆದರೆ ಪುಟ್ಟ ಕೊಡಗು ಹಲವು ರೀತಿಯ ಸೇವೆ-ಸಾಧನೆಗಳಿಗೆ, ರಾಜ್ಯದ ಆರ್ಥಿಕತೆಗೆ, ರಾಜ್ಯದ ಜನತೆಗೆ ನೀರುಣಿಸಲು ಮಾತ್ರ ಸಾಕು. ಬೇರೆ ಯಾವದಕ್ಕೂ ಬೇಡ ಎಂಬ ತಾತ್ಸಾರದ ಮನೋಭಾವನೆ ಮತ್ತೆ ಸಾಬೀತಾಗುವ ಮೂಲಕ ಕೊಡಗಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ ಆಡಳಿತಾರೂಢ ಕಾಂಗ್ರೆಸ್ ಪಕ್ಷದವರಲ್ಲಿ ಮಾತ್ರ ಸಚಿವ ಸ್ಥಾನದ ಆಶಾಭಾವನೆ ಇರಲಿಲ್ಲ. ವಿಪಕ್ಷ ಬಿಜೆಪಿ ಸೇರಿದಂತೆ ಎಲ್ಲರ ಮನದಲ್ಲೂ ಕೊಡಗಿನ ಸಮಸ್ಯೆಗಳ ಪರಿಹಾರದ ಹಿತದೃಷ್ಟಿಯಿಂದ ಕೊಡಗಿಗೆ ಸಚಿವ ಸ್ಥಾನ ಬೇಕೆಂಬ ಅಭಿಲಾಷೆ ಇದ್ದುದಂತೂ ಸತ್ಯ. (ಶಶಿ ಸೋಮಯ್ಯ)