ಮಡಿಕೇರಿ, ಜು. ೩: ರಾಜ್ಯ ಸಚಿವ ಸಂಪುಟ ರಚನೆ ಇಂದು ನಡೆಯಿತಾದರೂ ಸಚಿವ ಸ್ಥಾನ ಬಹುನಿರೀಕ್ಷೆ ಹೊಂದಲಾಗಿದ್ದ ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರಿಗೆ ಈ ಭಾಗ್ಯ ಸಿಗಲಿಲ್ಲ. ಬದಲಿಗೆ ಪೊನ್ನಣ್ಣ ಅವರಿಗೆ ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನವನ್ನು ನೀಡಲಾಗಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ಪ್ರಭಾವಿಯಾಗಿದ್ದ ಪೊನ್ನಣ್ಣ ಅವರು ಈ ಬಾರಿ ಸಚಿವರಾಗುವ ಬಗ್ಗೆ ವ್ಯಾಪಕ ಮಾತು ಕೊನೆ ಕ್ಷಣದವರೆಗೂ ಕೇಳಿಬಂದಿತ್ತು. ಆದರೆ, ಇದೀಗ ಸಚಿವ ಸ್ಥಾನದ ಬದಲಾಗಿ ಉಪಸಭಾಧ್ಯಕ್ಷ ಸ್ಥಾನ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಕೊಡವ ಪ್ರಾತಿನಿಧ್ಯದಂತೆಯೂ ಪೊನ್ನಣ್ಣರಿಗೆ ಸಚಿವ ಸ್ಥಾನ ಖಚಿತ ಎಂಬ ಭರವಸೆಯಿತ್ತಾದರೂ ಪಕ್ಷ ಬೇರೆಯೇ ತೀರ್ಮಾನ ಕೈಗೊಂಡಿದೆ.
ಇದಲ್ಲದೆ ಗೌಡ ಪ್ರಾತಿನಿಧ್ಯದಂತೆ ಹಾಗೂ ಯುವ ಸಾರಥ್ಯದಂತೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅಥವಾ ಶರತ್ ಬಚ್ಚೇಗೌಡ ಅವರಿಗೂ ಸ್ಥಾನ ಸಿಗುವ ನಿರೀಕ್ಷೆ ಇತ್ತಾದರೂ ಇದು ಹುಸಿಯಾಗಿದೆ.