ಮಡಿಕೇರಿ, ಆ. ೩: ರಾಜ್ಯ ಸಚಿವ ಸಂಪುಟ ರಚನೆಯ ಕಸರತ್ತು ಕೊನೆಗೂ ಕೆಲವಾರು ಗೊಂದಲಮಯ ರೀತಿಯ ಸನ್ನಿವೇಶದ ನಡುವೆ ಇಂದು ನಡೆಯಿತು.

೨೦ ಸಚಿವ ಸ್ಥಾನದ ಆಯ್ಕೆಯಾಗಬೇಕಿದ್ದು, ಒಂದು ಸ್ಥಾನ ಹೊರತುಪಡಿಸಿದಂತೆ ೧೯ ಸಚಿವರು ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರಕಾರದಲ್ಲಿ ಸ್ಥಾನ ಪಡೆದಿದ್ದಾರೆ. ಡಿಕೆಶಿ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸುದೀರ್ಘ ಎರಡು ತಿಂಗಳ ಅವಧಿಯ ಬಳಿಕ ಸಚಿವ ಸಂಪುಟ ರಚನೆ ಪ್ರಕ್ರಿಯೆ ನಡೆದಿದೆ. ಆದರೂ ಒಂದು ಸ್ಥಾನ ಮತ್ತೆ ಬಾಕಿ ಉಳಿದಿದ್ದು, ಇತರ ಸಚಿವ ಸ್ಥಾನ ಭರ್ತಿಯಾದಂತಾಗಿದೆ. ಸಿದ್ದರಾಮಯ್ಯ ರಾಜೀನಾಮೆ ಬಳಿಕ ಜೂನ್ ೩ ರಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿಯಾಗಿ ಡಾ. ಜಿ. ಪರಮೇಶ್ವರ್ ಸೇರಿದಂತೆ ಇತರ ೧೨ ಮಂದಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಈ ಸಚಿವರುಗಳಿಗೆ ಖಾತೆ ಹಂಚಿಕೆಯೂ ಆಗಿತ್ತು. ಬಾಕಿ ಇದ್ದ ೨೦ ಸಚಿವ ಸ್ಥಾನದ ಆಯ್ಕೆಗಾಗಿ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಭಾರೀ ಪೈಪೋಟಿ ಉಂಟಾಗಿತ್ತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಗಳ ಬೆಂಬಲಿಗರ ಪಟ್ಟಿಯನ್ನು ಈ ಇಬ್ಬರು ನಾಯಕರು ಮುಂದಿಟ್ಟಿದ್ದರೆ, ಹೈಕಮಾಂಡ್ ಕೂಡ ಮಧ್ಯಪ್ರವೇಶಿಸಿದ್ದ ಹಿನ್ನೆಲೆ ೨೦ ಸಚಿವ ಸ್ಥಾನದ ಭರ್ತಿ ಪ್ರಕ್ರಿಯೆ ತೀವ್ರ ಕುತೂಹಲಕ್ಕೆ ಎಡೆಯಾಗಿತ್ತು.

ಅಂತೂ ಎರಡು ತಿಂಗಳ ಅವಧಿಯ ಬಳಿಕ ಹೈಕಮಾಂಡ್ ಅಳೆದೂ - ತೂಗಿ ಇದೀಗ ೧೯ ಸಚಿವ ಸ್ಥಾನದ ಅಭ್ಯರ್ಥಿಗಳನ್ನು ಅಚಿತಿಮಗೊಳಿಸಿದ್ದು, ಇನ್ನೊಂದು ಸಚಿವ ಸ್ಥಾನವನ್ನು ಬಾಕಿಯಿರಿಸಿ ಈ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದ್ದು, ಸಂಜೆ ೧೯ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.

ನೂತನ ಸಚಿವರು ಯರ‍್ಯಾರು?

ಕಾಂಗ್ರೆಸ್ ಹೈಕಮಾಂಡ್‌ನ ಅಂತಿಮ ತೀರ್ಮಾನದ ಬಳಿಕ ನೂತನ ಸಚಿವರುಗಳಾಗಿ ಆಯ್ಕೆಯಾದವರ ಪಟ್ಟಿ ಇಂದು ಬೆಳಿಗ್ಗೆ ೧೧ರ ಸುಮಾರಿಗೆ ಪ್ರಕಟಗೊಂಡಿತು. ನೂತನ ಸಚಿವರುಗಳಾಗಿ ಪಿ.ಎಂ. ನರೇಂದ್ರ ಸ್ವಾಮಿ (ಮಳವಳ್ಳಿ ಕ್ಷೇತ್ರ), ಶಿವರಾಜ್ ತಂಗಡಗಿ (ಕನಕಗಿರಿ), ರುದ್ರಪ್ಪ ಲಮಾಣಿ (ಹಾವೇರಿ), ಕೆ.ಎಸ್. ಬಸವಂತಪ್ಪ (ಮಾಯಕೊಂಡ), ಬಿ. ನಾಗೇಂದ್ರ (ಬಳ್ಳಾರಿ ಗ್ರಾಮಾಂತರ), ಟಿ. ರಘುಮೂರ್ತಿ (ಚಳ್ಳಕೆರೆ), ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ), ರಿಜ್ವಾನ್ ಹರ್ಷದ್ (ಶಿವಾಜಿನಗರ), ಸಂತೋಷ್ ಲಾಡ್ (ಕಲಘಟಗಿ), ಮಧು ಬಂಗಾರಪ್ಪ (ಸೊರಬ), ಪುಟ್ಟರಂಗಶೆಟ್ಟಿ (ಚಾಮರಾಜನಗರ), ಎಸ್.ಎಸ್. ಮಲ್ಲಿಕಾರ್ಜುನ (ದಾವಣಗೆರೆ ಉತ್ತರ), ಅಜಯ್ ಸಿಂಗ್ (ಜೇವರ್ಗಿ), ಎನ್. ಚೆಲುವರಾಯಸ್ವಾಮಿ (ನಾಗಮಂಗಲ), ಕೆ.ಎಂ. ಶಿವಲಿಂಗೇಗೌಡ (ಅರಸಿಕೆರೆ), ಬಸವರಾಜ ರಾಯರೆಡ್ಡಿ (ಎಲಬುರ್ಗ), ವಿಜಯಾನಂದ ಕಾಶಪ್ಪನವರ್ (ಹುನಗುಂದ) ಹಾಗೂ ಲಕ್ಷö್ಮಣ್ ಸವದಿ (ಅಥಣಿ), ಹೆಚ್.ಸಿ. ಬಾಲಕೃಷ್ಣ (ಮಾಗಡಿ) ಅವರುಗಳು ನೂತನ ಸಚಿವರುಗಳಾಗಿ ನೇಮಕಗೊಂಡಿದ್ದಾರೆ.

೧೧ ಗಂಟೆ ತನಕವೂ ಕೌತುಕ

ಭಾನುವಾರ ಸಂಜೆಯೇ ನೂತನ ಸಚಿವರ ಪಟ್ಟಿ ಹೊರಬೀಳಲಿದೆ ಎಂಬ ಭಾರೀ ನಿರೀಕ್ಷೆ ಇತ್ತು. ಅಲ್ಲದೆ ಸೋಮವಾರ ಸಂಜೆಯೇ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭವೂ ನಿಗದಿಯಾಗಿತ್ತು. ಆದರೆ ಸಚಿವಾಕಾಂಕ್ಷಿಗಳ ತೀವ್ರ ಒತ್ತಡ ಪಕ್ಷ ಪ್ರಮುಖರೊಳಗಿನ ಬೇಡಿಕೆ ಹೈಕಮಾಂಡ್‌ನ ಕಸರತ್ತು ಮತ್ತೆ ಮತ್ತೆ ಮುಂದುವರಿದಿದ್ದು, ಪಟ್ಟಿ ಹೊರಬೀಳಲು ಬೆಳಿಗ್ಗೆ ೧೧ರ ತನಕವೂ ಕಾಯುವಂತಾಗಿತ್ತು. ಕೊನೆಗೂ ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ನೂತನ ಸಚಿವರ ಪಟ್ಟಿಯನ್ನು ಹೈಕಮಾಂಡ್‌ನ ಒಪ್ಪಿಗೆಯಂತೆ ಪ್ರಕಟಿಸಿದ ಬಳಿಕ ಸಚಿವ ಸಂಪುಟದ ಕಸರತ್ತಿಗೆ ತೆರೆ ಬಿದ್ದಂತಾಗಿತ್ತು.

ಆದರೆ ಹೊಸ ಸಚಿವರ ಹೆಸರು ಬಹಿರಂಗದ ಬೆನ್ನಲ್ಲೇ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದವರ ಪಾಳಯದಲ್ಲಿ ಆಕ್ರೋಶವೂ ಸ್ಫೋಟಗೊಂಡಿತು. ನಂತರದಲ್ಲಿ ೨೦ ಸಚಿವ ಸ್ಥಾನದ ಹೆಸರಿನಲ್ಲಿ ಒಂದು ಸ್ಥಾನದ ಬದಲಾವಣೆಯಾಗಿ ಹೊಸಬರ ಹೆಸರು ಸೇರ್ಪಡೆಗೊಂಡ ಬೆಳವಣಿಗೆಯೂ ನಡೆಯಿತು. ನಂತರದಲ್ಲಿ ಮಹಿಳಾ ಸಚಿವರಾಗಿ ಪಟ್ಟಿಯಲ್ಲಿದ್ದ ಗಾಯತ್ರಿ ಶಾಂತೇಗೌಡ ಅವರು ಪ್ರಮಾಣವಚನ ಸ್ವೀಕರಿಸದಂತೆ ತಡೆಹಿಡಿದ ಪ್ರಸಂಗವೂ ಸಚಿವ ಸಂಪುಟ ರಚನೆಯ ಭಾಗವಾಗಿ ಪರಿಣಮಿಸಿದ್ದು, ಇಡೀ ದಿನ ನಡೆದ ಬೆಳವಣಿಗೆಗೆ ಸಾಕ್ಷಿಯಾದಂತಾಗಿತ್ತು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಸಂಜೆಯೇ ಪ್ರಮಾಣ ವಚನ

ಈ ಎಲ್ಲಾ ಏಳು ಬೀಳುಗಳ ನಡುವೆಯೇ ಇಂದು ಸಂಜೆ ಪ್ರಮಾಣವಚನ ಸ್ವೀಕಾರ ಸಮಾರಂಭವೂ ಲೋಕಭವನದಲ್ಲಿ ಜರುಗುವ ಮೂಲಕ ಸದ್ಯಕ್ಕೆ ಸಚಿವ ಸಂಪುಟ ರಚನೆಯ ಕಸರತ್ತು ಒಂದು ಹಂತಕ್ಕೆ ಬಂದAತಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ೧೯ ಮಂದಿ ನೂತನ ಸಚಿವರುಗಳಿಗೆ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಂಪುಟ ದರ್ಜೆ ಸಚಿವರುಗಳು ಮತ್ತಿರರರು ಹಾಜರಿದ್ದರು. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿರಲಿಲ್ಲ.