ಸೋಮವಾರಪೇಟೆ, ಆ. ೧: ಜಿಲ್ಲೆಯ ರೈತರನ್ನು ಕಾಡುತ್ತಿರುವ ಸಿ ಮತ್ತು ಡಿ ಜಾಗದ ಸಮಸ್ಯೆಗೆ ಸಂಬAಧಿಸಿದAತೆ ಸರ್ಕಾರ ನಿಯೋಜಿಸಿರುವ ವಿಶೇಷ ಸಮಿತಿ ಹಾಗೂ ರೈತ ಸಂಘಟನೆಗಳ ಮುಖಂಡರುಗಳೊAದಿಗೆ ಉನ್ನತ ಮಟ್ಟದ ಸಭೆ ಇಲ್ಲಿನ ತಾಲೂಕು ಕಚೇರಿಯಲ್ಲಿ ನಡೆಯಿತು.

ಸಮಿತಿಯ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ರೈತರ ಅಹವಾಲುಗಳನ್ನು ಆಲಿಸಿದರು. ಸಮಸ್ಯೆಗಳ ಬಗ್ಗೆ ಖುದ್ದು ಭೇಟಿ ನೀಡಿ ವಾಸ್ತವಾಂಶದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ಅಧ್ಯಯನ ಸಮಿತಿಯ ಪ್ರಮುಖರು ರೈತರಿಗೆ ಭರವಸೆ ನೀಡಿದರು.

ಆರಂಭದಲ್ಲಿ ಮಾತನಾಡಿದ ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಅವರು, ಕೊಡಗಿನ ಜ್ವಲಂತ ಸಮಸ್ಯೆಯಾಗಿರುವ ಸಿ ಮತ್ತು ಡಿ ಲ್ಯಾಂಡ್ ಸಮಸ್ಯೆ ಈ ಹಿಂದಿನಿAದಲೂ ಇದೆ. ಭೂಮಿಯ ವರ್ಗೀಕರಣ ಸಂದರ್ಭ ಕಂದಾಯ ಇಲಾಖೆಯಲ್ಲಿದ್ದ ಜಾಗವನ್ನು ಅರಣ್ಯಕ್ಕೆ ನೀಡುವ ಪ್ರಕ್ರಿಯೆ ನಡೆದಿದೆ. ಅಂದಿನ ಅಧಿಕಾರಿಗಳು ಸರ್ಕಾರಕ್ಕೆ ವಾಸ್ತವ ವರದಿ ನೀಡದೇ ಇದ್ದುದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಇದೀಗ ರೈತ ಸಂಘಟನೆಗಳ ಹೋರಾಟದಿಂದಾಗಿ ವಾಸ್ತವ ಅರಿಯಲು ಕೊಡಗು ಜಿಲ್ಲೆಯಲ್ಲಿ ಅಧ್ಯಯನ ಸಮಿತಿ ರಚಿಸಿದ್ದು, ಸಮಿತಿಯ ಪ್ರಮುಖರು ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದರು.

ತಾಲೂಕು ರೈತ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ್ ಚಕ್ರವರ್ತಿ ಮಾತನಾಡಿ, ಕಳೆದ ೨ ವರ್ಷದಿಂದ ನಾವುಗಳು ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ. ಈವರೆಗೆ ೩೧ ಸಭೆ, ೪ ಹೋರಾಟ, ಸೋಮವಾರಪೇಟೆ ತಾಲೂಕು ಬಂದ್ ಮಾಡಿದ್ದೇವೆ. ಹಿಂದಿನ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಕೊಡಗಿನಲ್ಲಿ ಸಿ ಮತ್ತು ಡಿ ಜಾಗ ಇಲ್ಲದಿದ್ದರೂ ಅವೈಜ್ಞಾನಿಕ ವರದಿ ನೀಡಿದ್ದರ ಫಲವಾಗಿ ರೈತರು ಇಂದಿಗೂ ಸಮಸ್ಯೆ ಎದುರಿಸುವಂತಾಗಿದೆ ಎಂದರು.

ಮುಕ್ಕೋಡ್ಲಿನಲ್ಲಿ ಅರಣ್ಯ ಇಲಾಖೆಯವರು ಕಾಫಿ ತೋಟ ಕಡಿದಿದ್ದಾರೆ. ಕೂತಿಯಲ್ಲಿ ನೂತನವಾಗಿ ಬಿದಿರಿನ ಗಿಡ ನೆಡಲು ಅರಣ್ಯ ಇಲಾಖೆ ಮುಂದಾಗಿದೆ. ಕಳೆದ ೧೮೩೦ ರಲ್ಲಿ ಭೂಮಿ ಸರ್ವೆ ಆಗಿದೆ. ಆ ನಂತರ ಈವರೆಗೆ ಸರ್ವೆ ಆಗಿಲ್ಲ. ಬ್ರಿಟಿಷರ ನಂತರ ರಾಜರ ಆಳ್ವಿಕೆ, ಇದೀಗ ಸ್ವಾತಂತ್ರö್ಯ ಭಾರತದಲ್ಲಿ ನಾವಿದ್ದೇವೆ. ಆದರೂ ಬ್ರಿಟಿಷರ ಕಾಲದ ಸರ್ವೆಯನ್ನು ಇಟ್ಟುಕೊಂಡು ಅರಣ್ಯ ಇಲಾಖೆ ರೈತರಿಗೆ ಪ್ರತಿದಿನ ಸಮಸ್ಯೆ ನೀಡುತ್ತಿದೆ ಎಂದು ಸಮಿತಿಯ ಪ್ರಮುಖರ ಗಮನಕ್ಕೆ ತಂದರು.

ರೈತ ಸಂಘದ ಅಧ್ಯಕ್ಷ ದಿನೇಶ್ ಮಾತನಾಡಿ, ಮುತ್ತಾತನ ಕಾಲದಿಂದಲೂ ತೋಟ ಮಾಡಿಕೊಂಡು ಬಂದಿರುವ ಜಾಗವನ್ನು ಅಧಿಕಾರಿಗಳು ಸಿ ಮತ್ತು ಡಿ ಎಂದು ಘೋಷಣೆ ಮಾಡಿದ್ದಾರೆ. ೧೯೯೪-೯೫ ರಲ್ಲಿ ಹಕ್ಕುಪತ್ರ ಪಡೆಯಲು ಹೋದಾಗ ಸಮಸ್ಯೆ ಅರಿವಿಗೆ ಬಂದಿದೆ. ಎಲ್ಲಾ ವ್ಯವಸಾಯ ಯೋಗ್ಯ ಜಾಗವನ್ನು ಸಿ ಮತ್ತು ಡಿ ಮಾಡಿದ್ದಾರೆ. ರೈತರೆಲ್ಲರೂ ಕಾಡು ಬೆಳೆಸಿದ್ದಾರೆ. ೧ ಎಕರೆಯಲ್ಲಿ ೭೦ಕ್ಕೂ ಅಧಿಕ ಮರಗಳನ್ನು ಬೆಳೆಸಿದ್ದಾರೆ. ಕಾಡು ಉಳಿಸಿಕೊಂಡಿದ್ದೇವೆ. ವಾಸ್ತವಾಂಶದ ಪರಿಶೀಲನೆ ನಡೆಸಿ ಸರ್ಕಾರಕ್ಕೆ ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ವರದಿ ನೀಡುವ ಮೂಲಕ ರೈತರ ಪರವಾಗಿ ನಿಲ್ಲಬೇಕೆಂದು ಮನವಿ ಮಾಡಿದರು.

ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಮಾತನಾಡಿ, ರೈತರ ಜಾಗದ ದಾಖಲಾತಿಗಳ ಸಮಸ್ಯೆಯಿಂದಾಗಿ ತಾಲೂಕು ಕಚೇರಿಯಲ್ಲಿ ರೈತರ ದುರಸ್ತಿ ಕಡತಗಳು ವಿಲೇವಾರಿ ಆಗುತ್ತಿಲ್ಲ. ಕಂದಾಯ ಇಲಾಖೆಯಿಂದ ಮರು ಭೂಮಾಪನ ಆಗಬೇಕು. ಅರಣ್ಯ, ಕಂದಾಯ, ಪೈಸಾರಿ, ೫೦-೫೩ ಅರ್ಜಿ ಸಲ್ಲಿಕೆಯಾಗಿರುವ ಭೂ ವಿಸ್ತೀರ್ಣ, ಸರ್ಕಾರಿ ಉದ್ದೇಶಕ್ಕೆ ಮಿಸಲಿಟ್ಟಿರುವ ಜಾಗ ಎಷ್ಟು ಎಂಬ ಬಗ್ಗೆ ವರದಿ ತಯಾರಾಗಬೇಕು. ಹಾಗಾದಾಗ ಎಷ್ಟೋ ಸಮಸ್ಯೆ ಬಗೆಹರಿಯುತ್ತದೆ. ಈ ಬಗ್ಗೆ ಸಮಿತಿ ವತಿಯಿಂದ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ಮಾತನಾಡಿ, ಕೊಡಗಿನಲ್ಲಿ ಬರಡು ಭೂಮಿಎಂಬುದು ಎಲ್ಲೂ ಇಲ್ಲ. ತಾಕೇರಿಯಲ್ಲಿ ೧೯೭೯ರ ಹಿಂದೆಯೂ ಸಾಗುವಳಿ ಚೀಟಿ ವಿತರಿಸಿದ್ದಾರೆ. ಆ ಜಾಗದ ಮೇಲೆ ಬ್ಯಾಂಕ್‌ನವರು ಸಾಲ ಕೊಟ್ಟಿದ್ದಾರೆ. ತೋಟದಲ್ಲಿ ಮರಗಳು ಬೆಳೆದಿವೆ. ಆದರೂ ಸಿ ಮತ್ತು ಡಿ ಎಂದು ದಾಖಲಾತಿಯಲ್ಲಿ ನಮೂದಾಗಿದೆ. ಹೀಗಾಗಿ ಸಮಿತಿಯಿಂದ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಬೇಕು ಎಂದರು.

ಹರಗ ಗ್ರಾಮದ ಮಿಥುನ್ ಮಾತನಾಡಿ, ಹರಗ ಗ್ರಾಮದಲ್ಲಿ ಒಟ್ಟಾರೆ ಭೂಮಿ ೨೫೦೦ ಎಕರೆ ಇದ್ದು, ಇದರಲ್ಲಿ ಸಿ ಮತ್ತು ಡಿ, ಅರಣ್ಯ, ಜಮ್ಮಾ, ಹಾರಂಗಿ ಮುಳುಗಡೆ ನಿರಾಶ್ರಿತರಿಗೆ ಹಂಚಿಕೆ ಮಾಡಲೆಂದು ಒಟ್ಟಾರೆಯಾಗಿ ದಾಖಲೆಗಳಲ್ಲಿ ೫೭೦೦ ಎಕರೆ ನಮೂದಿಸಿದ್ದಾರೆ. ಅಸಲಿಗೆ ಗ್ರಾಮದಲ್ಲಿ ಇರುವುದೇ ೨೫೦೦ ಏಕರೆ ಜಾಗ. ಇಂತಹ ಅವೈಜ್ಞಾನಿಕ ಕ್ರಮಗಳ ಬಗ್ಗೆ ಸಮಿತಿ ಗಮನ ಹರಿಸಬೇಕೆಂದರು.

ಯAಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಮಾತನಾಡಿ, ಹಾರಂಗಿ ಆಣೆಕಟ್ಟೆ ನಿರ್ಮಾಣದಿಂದ ೯೦೦ ಕುಟುಂಬ ಮುಳುಗಡೆ ಸಂತ್ರಸ್ಥರಾಗಿದ್ದೇವೆ. ಹಾರಂಗಿ ಮುಳುಗಡೆ ಜಾಗಕ್ಕೆ ಪರ್ಯಾಯವಾಗಿ ಅರಣ್ಯ ಇಲಾಖೆಗೆ ಇಲ್ಲೇ ಯಾಕೆ ಜಾಗ ನೀಡಬೇಕು? ಹಾರಂಗಿ ನೀರನ್ನು ಬಳಕೆ ಮಾಡಿಕೊಳ್ಳುತ್ತಿರುವ ನೆರೆಯ ಜಿಲ್ಲೆಯಲ್ಲಿ ಅರಣ್ಯ ಇಲಾಖೆಗೆ ಜಾಗ ನೀಡಲಿ ಎಂಬ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದರು.

ಬಗ್ಗನ ಅನಿಲ್ ಮಾತನಾಡಿ, ಗೋಧವರ್ಮನ್ ಪ್ರಕರಣದಿಂದಾಗಿ ಸಿ ಮತ್ತು ಡಿ ಜಾಗದ ಸಮಸ್ಯೆಯ ಗಂಭೀರತೆ ಅರಿವಿಗೆ ಬಂದಿದೆ. ಸರ್ಕಾರಿ ಆದೇಶದ ಪ್ರಕಾರ ಒಮ್ಮೆ ಜಾಗ ಅರಣ್ಯ ಇಲಾಖೆಗೆ ಹೋದರೆ ಮತ್ತೆ ವಾಪಸ್ ಪಡೆಯಲು ಸ್ಥಳೀಯವಾಗಿ ಅವಕಾಶವಿಲ್ಲ. ಈಗಾಗಲೇ ಪ್ರಕರಣ ಸುಪ್ರೀಂ ಕೋರ್ಟ್ಗೆ ಹೋಗಿದ್ದು, ಸಮಿತಿಯು ಸ್ಥಳೀಯವಾಗಿ ಸರ್ಕಾರಕ್ಕೆ ವಾಸ್ತವ ವರದಿ ನೀಡಿದರೆ ಮಾತ್ರ, ಸರ್ಕಾರ ನ್ಯಾಯಾಲಯದ ಗಮನಕ್ಕೆ ತಂದು ಆದೇಶಗಳ ಪುನರ್ ಪರಿಶೀಲನೆಗೆ ಅವಕಾಶ ನೀಡಬಹುದು ಎಂದರು.

ಕಾAಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ಸಮಿತಿಯಿಂದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ, ಸರ್ಕಾರದ ಅಧಿಕೃತ ಆದೇಶ ಬರುವವರೆಗೂ ಅರಣ್ಯ ಇಲಾಖೆಯವರು ರೈತರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಬಾರದು ಎಂದು ಆಗ್ರಹಿಸಿದರು.

ಸಭೆಯಲ್ಲಿ ಸಮಿತಿಯ ಸದಸ್ಯರುಗಳಾದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಭಾನುಪ್ರಕಾಶ್, ನಿವೃತ್ತ ತಹಶೀಲ್ದಾರ್ ಜಯರಾಂ, ನಿವೃತ್ತ ಡಿಸಿಎಫ್ ಪೂವಯ್ಯ ಅವರುಗಳು ಮಾತನಾಡಿ, ಸಮಿತಿಯ ಸದಸ್ಯರು ಖುದ್ದು ಸ್ಥಳ ಪರಿಶೀಲನೆ ನಡೆಸಿ ವಾಸ್ತವಾಂಶದ ಬಗ್ಗೆ ಸರ್ಕಾರಕ್ಕೆ ವರದಿ ನೀಡುತ್ತೇವೆ. ಮುಂದಿನ ಕ್ರಮವನ್ನು ಸರ್ಕಾರ ಕೈಗೊಳ್ಳಲಿದೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ವೇದಿಕೆಯಲ್ಲಿ ಜಿಲ್ಲಾ ಉಪ ವಿಭಾಗಾಧಿಕಾರಿ, ಸಮಿತಿಯ ಸದಸ್ಯ ಕಾರ್ಯದರ್ಶಿ ನಿತಿನ್ ಚಕ್ಕಿ, ಎ.ಸಿ.ಎಫ್. ನವೀನ್, ಆರ್‌ಎಫ್‌ಓ ಮಲ್ಲೇಶ್, ಕಂದಾಯ ಇಲಾಖಾ ಸಿಬ್ಬಂದಿಗಳು ಇದ್ದರು. ತಾಲೂಕು ರೈತ ಹೋರಾಟ ಸಮಿತಿ, ರೈತ ಸಂಘ, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ, ಯಂಗ್ ಇಂಡಿಯನ್ ಫಾಮರ‍್ಸ್ ಅಸೋಸಿಯೇಷನ್ ಪದಾಧಿಕಾರಿಗಳು, ವಿವಿಧ ಭಾಗಗಳ ರೈತ ಮುಖಂಡರುಗಳು ಭಾಗಿಯಾಗಿದ್ದರು. ಇದೇ ಸಂದರ್ಭ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಯಿತು.