ಮಡಿಕೇರಿ, ಜು. ೩೧: ಇಲ್ಲೊಬ್ಬರು ಸಾರಿಗೆ ಸಂಸ್ಥೆ ಡ್ರೆöÊವರ್ ಹಾಗೂ ಕಂಡಕ್ಟರ್ ಬಸ್ ಚಾಲನೆ ಮಾಡುತ್ತಿದ್ದ ಸಂದರ್ಭ ರಸ್ತೆ ಮೇಲೆ ರಾಶಿ ರಾಶಿ ಬಿದ್ದಿದ್ದ ಬಿದಿರ ಮೆಳೆಯನ್ನು ಸ್ವತಃ ಜೆಸಿಬಿ ಯಂತ್ರ ಚಲಾಯಿಸಿ ತೆರವುಗೊಳಿಸುವ ಮೂಲಕ ಪ್ರಯಾಣಿಕರ ಮತ್ತು ಸ್ಥಳೀಯರ ಚಪ್ಪಾಳೆಗೆ ಪಾತ್ರರಾಗಿ ಭೇಷ್ ಎನಿಸಿಕೊಂಡಿದ್ದಾರೆ.

ಮಡಿಕೇರಿ ಡಿಪೋದಲ್ಲಿ ಡ್ರೆöÊವರ್ ಹಾಗೂ ಕಂಡೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಸನ್ನಕುಮಾರ್ ಎಂಬುವವರೇ ಕರ್ತವ್ಯದ ನಡುವೆ ಈ ಸಮಾಜಮುಖಿ ಸೇವೆ ನಡೆಸಿ ಶ್ಲಾಘನೆಗೆ ಪಾತ್ರರಾದವರಾಗಿದ್ದಾರೆ.

ಮಡಿಕೇರಿ ಡಿಪೋಕ್ಕೆ ಸೇರಿದ ಬಸ್ ಸಂಜೆ ೪ ಗಂಟೆಗೆ ಮಡಿಕೇರಿಯಿಂದ ಹೊರಟು ಭಾಗಮಂಡಲ ಮಾರ್ಗವಾಗಿ ಕರಿಕೆಗೆ ತೆರಳುತ್ತದೆ. ಮರು ದಿನ ಬೆಳಿಗ್ಗೆ ೭ ಗಂಟೆಗೆ ಕರಿಕೆಯಿಂದ ಇದೇ ಮಾರ್ಗವಾಗಿ ಮಡಿಕೇರಿಗೆ ಬರುತ್ತದೆ. ಎಂದಿನAತೆ ಮೊನ್ನೆಬೆಳಿಗ್ಗೆ ೭ ಗಂಟೆಗೆ ಕರಿಕೆಯಿಂದ ಹೊರಡಲು ಸಿದ್ದರಾದಾಗ ಚೆತ್ತುಕಾಯ ಎಂಬಲ್ಲಿ ರಸ್ತೆಗೆ ಅಡ್ಡವಾಗಿ ಬಿದಿರ ಮೆಳೆ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಮಾಹಿತಿ ಅರಿತವರು ಪ್ರಸನ್ನಕುಮಾರ್ ಅವರಿಗೆ ತಿಳಿಸಿದ್ದಾರೆ. ಆದರೆ ಅದಾಗಲೇ ಬಸ್ ವಿದ್ಯಾರ್ಥಿಗಳು, ನೌಕರರು ಹಾಗೂ ಇತರ ಪ್ರಯಾಣಿಕರಿಂದ ಭರ್ತಿಯಾಗಿತ್ತು. ಬಸ್ ಹೋಗದಿದ್ದರೆ ಇವರಿಗೆಲ್ಲರಿಗೂ ಸಮಸ್ಯೆ ಆಗುತ್ತದೆ ಎಂದು ಯೋಚಿಸಿದ ಪ್ರಸನ್ನಕುಮಾರ್ ಭಾಗಮಂಡಲದತ್ತ ಬಸ್ ಚಲಾಯಿಸತೊಡಗಿದರು. ೧೫ ಕಿ.ಮೀ. ಕ್ರಮಿಸುವಷ್ಟರಲ್ಲಿ ಚೆತ್ತುಕಾಯ ಎಂಬಲ್ಲಿ ರಾಶಿ ರಾಶಿ ಬಿದಿರ ಮೆಳೆ ರಸ್ತೆ ಮೇಲೆ ಬಿದ್ದಿರುವುದು ಗೋಚರಿಸಿದೆ.

ಬಸ್ ನಿಲ್ಲಿಸಿದ ಪ್ರಸನ್ನಕುಮಾರ್ ಅವರಿಗೆ ರಸ್ತೆ ಬದಿಯಲ್ಲಿ ಎರಡು ಜೆಸಿಬಿ ನಿಂತಿರುವುದು ಕಂಡಿದೆ. ಕೂಡಲೇ ಅದರ ಮಾಲೀಕರ ಬಳಿ ತೆರಳಿ ವಿಚಾರಿಸಿದಾಗ ಆಪರೇಟರ್ ಇಲ್ಲ ಎಂದು ಹೇಳಿದ್ದಾರೆ. ಅವರ ಮನವೊಲಿಸಿ ಜೆಸಿಬಿ ಯಂತ್ರ ಪಡೆದುಕೊಂಡರಲ್ಲದೆ, ಒಂದೂವರೆ ಗಂಟೆ ಪಕ್ಕಾ ಜೆಸಿಬಿ ಆಪರೇಟರ್‌ರಂತೆ ಕಾರ್ಯಾಚರಣೆ ನಡೆಸಿ ಬಿದಿರ ಮೆಳೆಯನ್ನು ಬದಿಗೆ ಸರಿಸಿ ವಾಹನಗಳು ಸುಗಮವಾಗಿ ಸಂಚರಿಸುವAತೆ ಮಾಡುವಲ್ಲಿ ಯಶಸ್ವಿಯಾದರು. ಇವರ ಈ ಸಮಯೋಚಿತ ಕಾರ್ಯಕ್ಕೆ ಬಸ್ಸಿನಲ್ಲಿದ್ದವರು ಮತ್ತು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಯಾರಿವರು ಪ್ರಸನ್ನಕುಮಾರ್ ?

ಮೂಲತಃ ಹೊಳೆನರಸಿಪುರದವರಾಗಿರುವ ಪ್ರಸನ್ನಕುಮಾರ್ ಡ್ರೆöÊವರ್ ಹಾಗೂ ಕಂಡೆಕ್ಟರ್ ಹುದ್ದೆಗೆ ಬರುವ ಮುನ್ನ ಅಲ್ಲಿನ ಕಟ್ಟೆಬಿಳಿಯಾಲ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಸಾಲಿನ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿದ್ದವರು. ಇವರ ಅಧ್ಯಕ್ಷರಾವಧಿ ಮುಗಿಯಲು ೪ ತಿಂಗಳು ಇರುವಾಗ ಕೆಎಸ್‌ಆರ್‌ಟಿಸಿಯಲ್ಲಿ ಡ್ರೆöÊವರ್ ಹಾಗೂ ಕಂಡೆಕ್ಟರ್ ಹುದ್ದೆಗೆ ನೇಮಕಗೊಂಡಿದ್ದರು. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಮಡಿಕೇರಿ ಡಿಪೋಕ್ಕೆ ನಿಯುಕ್ತಿಗೊಂಡರು.

ಅಂದಹಾಗೇ ಪ್ರಸನ್ನಕುಮಾರ್ ಅವರು ಜೆಸಿಬಿ ಆಪರೇಟರ್ ಆಗಿಯೂ ೧೦ ವರ್ಷ ಅನುಭವ ಪಡೆದಿದ್ದಾರೆ. ಈ ವಿಷಯವನ್ನು ಚೆತ್ತುಕಾಯದಲ್ಲಿ ಜೆಸಿಬಿ ಮಾಲೀಕರಿಗೆ ತಿಳಿಸಿ ಜೆಸಿಬಿ ಕಾರ್ಯಾಚರಣೆಗೆ ಅವರನ್ನು ಒಪ್ಪಿಸಿದ್ದರು. ಈ ಕಾರ್ಯಾಚರಣೆ ಕುರಿತು ಪ್ರತಿಕ್ರಿಯಿಸಿರುವ ಪ್ರಸನ್ನಕುಮಾರ್, ತಾನು ಮೊದಲಿನಿಂದಲೂ ಜನ ಸೇವೆ ಮಾಡುತ್ತಿದ್ದು, ಗ್ರಾಮ ಪಂಚಾಯಿತಿ ಸದಸ್ಯನಾಗಿ ತದನಂತರ ಅಧ್ಯಕ್ಷನಾಗಿ ಸೇವೆ ಸಲ್ಲಿಸಿರುವುದರಿಂದ ಜನರ ಸಮಸ್ಯೆಗಳು ಅರಿವಾಗುತ್ತದೆ. ಈ ನಿಟ್ಟಿನಲ್ಲಿ ಬಸ್ಸಿನಲ್ಲಿದ್ದವರಿಗೆ ಮತ್ತು ಬೇರೆ ವಾಹನದವರಿಗೆ ಸಮಸ್ಯೆ ಆಗಬಾರದೆಂದು ಜೆಸಿಬಿ ಆಪರೇಟರ್ ಆಗಿ ಕಾರ್ಯ ನಿರ್ವಹಿಸಿದ್ದೇನೆ ಎಂದು ತಿಳಿಸಿದ್ದಾರೆ.

- ಕೃಪೆ : ಕ್ಯೂಟ್ ಕೂರ್ಗ್ ನ್ಯೂಸ್