ಗೋಣಿಕೊಪ್ಪಲು, ಜು. ೩೧: ಕೊಡಗು ಜಿಲ್ಲಾ ಮದ್ಯ ಮಾರಾಟಗಾರರ ಒಕ್ಕೂಟದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಮಡಿಕೇರಿಯ ಗೌಡ ಸಮಾಜ ಸಭಾಂಗಣದಲ್ಲಿ ನಡೆಯಿತು.

ಸಮಾರಂಭಗಳಲ್ಲಿ ನಕಲಿ ಮದ್ಯ ಸರಬರಾಜು ಹೆಚ್ಚುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ, ಈ ಕೃತ್ಯವನ್ನು ತಡೆಗಟ್ಟಲು ಅಬಕಾರಿ ಇಲಾಖೆಯ ಉಪ ಆಯುಕ್ತರಿಗೆ ನಿಯೋಗ ತೆರಳಿ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು. ಜೊತೆಗೆ ವೈನ್ ಮಾರಾಟದ ಮೇಲಿನ ನಿಯಂತ್ರಣ, ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಸಂಘಕ್ಕೆ ಸರ್ಕಾರದಿಂದ ಸ್ವಂತ ಕಚೇರಿ ಒದಗಿಸುವಂತೆ ಒತ್ತಾಯಿಸುವ ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಗುಮ್ಮಟ್ಟಿರ ಕಿಲನ್ ಗಣಪತಿ ಮಾತನಾಡಿ, ಮದ್ಯ ಮಾರಾಟಗಾರರು ಸರ್ಕಾರದ ನಿಯಮಗಳನ್ನು ಪಾಲಿಸುತ್ತ ರಾಜ್ಯದ ಅಬಕಾರಿ ಆದಾಯಕ್ಕೆ ಮಹತ್ವದ ಕೊಡುಗೆ ನೀಡುವ ಜವಾಬ್ದಾರಿಯುತ ಉದ್ಯಮಿಗಳಾಗಿದ್ದು, ಪ್ರತಿಯೊಬ್ಬ ಸನ್ನದುದಾರರು ಎಂಆರ್‌ಪಿ ನಿಯಮ, ಪರವಾನಗಿ ಷರತ್ತು ಹಾಗೂ ಗ್ರಾಹಕರೊಂದಿಗೆ ಸೌಜನ್ಯಯುತ ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕರೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಸಮಾರಂಭಗಳಲ್ಲಿ ನಕಲಿ ಮದ್ಯ ಮಾರಾಟ ಹೆಚ್ಚಾಗಿರುವುದರಿಂದ ಕಾನೂನುಬದ್ಧವಾಗಿ ವ್ಯಾಪಾರ ನಡೆಸುವ ಸನ್ನದುದಾರರಿಗೆ ಆರ್ಥಿಕ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯ ಉಪ ಆಯುಕ್ತರನ್ನು ಭೇಟಿ ಮಾಡಿ ನಕಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಲು ಸಭೆ ತೀರ್ಮಾನಿಸಿತು.

ಸಂಘಟನೆ ವಿಸ್ತರಣೆಯ ಭಾಗವಾಗಿ ಸೋಮವಾರಪೇಟೆ ತಾಲೂಕು ಘಟಕವನ್ನು ಆರಂಭಿಸುವ ಕುರಿತು ಸದಸ್ಯರು ಸಲಹೆ ನೀಡಿದ್ದು, ಸಭೆಯು ಅದಕ್ಕೆ ಒಪ್ಪಿಗೆ ಸೂಚಿಸಿತು. ಈಗಾಗಲೇ ವೀರಾಜಪೇಟೆ ಮತ್ತು ಮಡಿಕೇರಿ ತಾಲೂಕು ಘಟಕಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ಹಿರಿಯ ನಿರ್ದೇಶಕ ಕೊಕ್ಕಲೆಮಾಡ ಸುಜು ತಿಮ್ಮಯ್ಯ ಮಾತನಾಡಿ, ಸನ್ನದುದಾರರು ಕಾನೂನುಬದ್ಧವಾಗಿ ವ್ಯಾಪಾರ ನಡೆಸುವ ಜೊತೆಗೆ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು ಎಂದು ಸಲಹೆ ನೀಡಿದರು. ನಿರ್ದೇಶಕ ಮಂಜುನಾಥ್ ಗುಂಡೂರಾವ್, ಸಂಘದ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಕಟ್ಟಡದಲ್ಲಿ ಕಚೇರಿ ಮಂಜೂರು ಮಾಡುವಂತೆ ಸಂಬAಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುವ ಪ್ರಸ್ತಾವನೆ ಮಂಡಿಸಿದರು. ಸಭೆಯು ಇದಕ್ಕೂ ಒಮ್ಮತದ ಬೆಂಬಲ ಸೂಚಿಸಿತು.

ಈ ಸಂದರ್ಭ ಜಿಲ್ಲೆಯ ೨೦೨ ಸನ್ನದುದಾರರಿಗೆ ಸದಸ್ಯತ್ವ ಪ್ರಮಾಣಪತ್ರ ವಿತರಿಸಲಾಯಿತು. ಸೋಮವಾರಪೇಟೆ ರೋಟರಿ ಕ್ಲಬ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಸಂಘದ ಕಾರ್ಯದರ್ಶಿ ಬಿ.ಎಸ್. ಸುಂದರ್ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಸಂಘದ ಅಧಿಕೃತ ಲೋಗೋ ಅನಾವರಣಗೊಳಿಸಲಾಯಿತು.

ಬಿ.ಎ. ಮಹಾಬಲ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಎನ್. ಮಹೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಿ.ಎಸ್. ಸುಂದರ್ ಸ್ವಾಗತಿಸಿದರು. ಎನ್. ಮಹೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಹೆಚ್. ಪ್ರದೀಪ್ ಪ್ರಾರ್ಥಿಸಿದರು. ಬಾಬುನಾಯ್ಡು ವಂದಿಸಿದರು. ಜಿಲ್ಲೆಯ ಮೂರು ಅಬಕಾರಿ ವಲಯಗಳ ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಮಹಾಸಭೆಯಲ್ಲಿ ಭಾಗವಹಿಸಿದ್ದರು.