ಕುಶಾಲನಗರ/ಕೂಡಿಗೆ ಜು. ೩೧: ಹಾರಂಗಿ ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆ ಜಲಾಶಯದಿಂದ ನದಿಗೆ ೧೩ ಸಾವಿರ ಕ್ಯೂಸೆಕ್ಸ್ ಪ್ರಮಾಣದ ನೀರು ಕ್ರೆಸ್ಟ್ಗೇಟ್ ಮೂಲಕ ಹರಿಸಲಾಗುತ್ತಿದೆ ಎಂದು ಅಣೆಕಟ್ಟು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆ ಬೀಳುತ್ತಿದ್ದು, ಜಲಾಶಯಕ್ಕೆ ಶುಕ್ರವಾರ ಸಂಜೆ ವೇಳೆಗೆ ೧೧,೮೦೦ ಕ್ಯೂಸೆಕ್ಸ್ ಪ್ರಮಾಣದ ನೀರು ಒಳಹರಿವು ಬರುತ್ತಿದ್ದು, ಜಲಾಶಯದ ನೀರಿನ ಸಂಗ್ರಹ ಮಟ್ಟ ೨೮ ೫೭.೯೬ ಆಡಿಗಳಷ್ಟಾಗಿದ್ದು ಜಲಾಶಯದಲ್ಲಿ ೮.೧ ಟಿಎಂಸಿ ನೀರಿನ ಸಂಗ್ರಹ ಇರುವುದಾಗಿ ಹಾರಂಗಿ ಅಣೆಕಟ್ಟು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಅವರು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಪ್ರಮಾಣದ ಒಳಹರಿವು ಬರುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ನೀರಿನ ಮಟ್ಟ ಕಾಯ್ದುಕೊಂಡು ಇನ್ನೂ ಹೆಚ್ಚಿನ ಪ್ರಮಾಣದ ನೀರು ನದಿಗೆ ಹರಿಸುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಇನ್ನೊಂದೆಡೆ ಭಾಗಮಂಡಲ ಮತ್ತು ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಅಧಿಕ ಪ್ರಮಾಣದ ಮಳೆ ಸುರಿಯುತ್ತಿದ್ದು ಹೀಗೆ ಮಳೆ ಮುಂದುವರೆದರೆ ಇನ್ನೂ ಎರಡು ದಿನಗಳಲ್ಲಿ ಕಾವೇರಿ ತುಂಬಿ ಪ್ರವಾಹದ ಭೀತಿ ಎದುರಾಗುವ ಸಾಧ್ಯತೆ ಇದೆ. ಹಾರಂಗಿ ಅಣೆಕಟ್ಟಿನ ಆವರಣದಲ್ಲಿರುವ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರ ಮೂಲಕ ಎರಡು ಘಟಕಗಳಿಗೆ ಒಟ್ಟು ೨ ಸಾವಿರ ಕ್ಯೂಸೆಕ್ಸ್ ಪ್ರಮಾಣದ ನೀರು ಹರಿಸಿ ಮುಖ್ಯಘಟಕದಲ್ಲಿ ೯ ಮೆಗಾ ವ್ಯಾಟ್ ಮತ್ತು ಇನ್ನೊಂದು ಘಟಕದಲ್ಲಿ ೬ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ ಎಂದು ಘಟಕದ ಮುಖ್ಯಸ್ಥರಾದ ಸುಬ್ರಮಣ್ಯಂ ತಿಳಿಸಿದ್ದಾರೆ.

-ಚಂದ್ರಮೋಹನ್/ನಾಗರಾಜ ಶೆಟ್ಟಿ