ಸೋಮವಾರಪೇಟೆ, ಜು. ೩೧: ಇತಿಹಾಸದಲ್ಲಿ ಮೊದಲ ಬಾರಿಗೆ ಬಹುಜನರಿಗೆ ಮೀಸಲಾತಿ ನೀಡಿದ ಕೀರ್ತಿ ಕೊಲ್ಲಪುರ ಸಂಸ್ಥಾನದ ಛತ್ರಪತಿ ಶಾಹು ಮಹಾರಾಜರಿಗೆ ಸಲ್ಲುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಮತ್ತು ಸಾಹಿತಿ ಡಾ. ಜೆ.ಸೋಮಣ್ಣ ಅಭಿಪ್ರಾಯಿಸಿದರು.

ಜಿಲ್ಲಾ ಮಹಾಬೋಧಿ ಪತ್ತಿನ ಸಹಕಾರ ಸಂಘದ ವತಿಯಿಂದ ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ಛತ್ರಪತಿ ಶಾಹುಮಹಾರಾಜರ ೧೫೨ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶತ-ಶತಮಾನಗಳಿಂದ ಅಕ್ಷರ, ಅಧಿಕಾರ, ಸಂಪತ್ತು ಮತ್ತು ಆಯುಧಗಳಿಂದ ವಂಚಿತರಾದ ಬಹುಜನರಿಗೆ ೧೯೦೨ರಂದು ಮೊದಲು ಮಿಸಲಾತಿಯನ್ನು ಜಾರಿ ಮಾಡಿದರು. ಅಲ್ಲಿಯವರೆಗೆ ಒಂದೇ ವರ್ಗದ ಜನರು ಆಡಳಿತದ ಅಧಿಕಾರವನ್ನು ಅನುಭವಿಸುತ್ತಿದ್ದರು. ಇದರಿಂದಾಗಿ ಸಾವಿರಾರು ವರ್ಷಗಳಿಂದ ಶಿಕ್ಷಣದಿಂದ ವಂಚಿತರಾದ ಬಹುಜನರು ಶಿಕ್ಷಣ ಪಡೆದು ಅವರ ಆಡಳಿತದಲ್ಲಿ ಪಾಲುಗೊಳ್ಳುವಂತಾಯಿತು ಎಂದರು.

ಅಸ್ಪೃಶ್ಯತೆ ನಿಷೇಧ, ದೇವದಾಸಿ ಪದ್ಧತಿ ನಿಷೇಧ, ವಿಧವಾ ವಿವಾಹ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ಮತ್ತು ಶಾಲೆಗಳನ್ನು ಪ್ರಾರಂಭಿಸಿದರು. ಹಲವಾರು ಜನಪರ ಕಾಳಜಿಯುಳ್ಳ ಕಾನೂನುಗಳನ್ನು ಜಾರಿಗೊಳಿಸಿ ಇತಿಹಾಸದ ಪುಟದಲ್ಲಿ ದಾಖಲಾಗಿ ದ್ದಾರೆ ಎಂದು ಬಣ್ಣಿಸಿದರು.

ಕೇರಳದಲ್ಲಿ ಶ್ರೀನಾರಾಯಣ ಗುರು, ತಮಿಳುನಾಡಿನಲ್ಲಿ ಪೆರಿಯಾರ್, ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್, ೧೨ನೇ ಶತಮಾನದ ಬಸವಣ್ಣ ಅವರುಗಳ ಸಾಲಿನಲ್ಲಿ ಶಾಹು ಮಹಾರಾಜರು ನಿಂತಿದ್ದು, ಸಮಾಜ ಪರಿವರ್ತನೆಗೆ ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು.

ತಹಸೀಲ್ದಾರ್ ಕೃಷ್ಣಮೂರ್ತಿ ಮಾತನಾಡಿ, ಶಾಹುಮಹಾರಾಜರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಕಾಲದ ಶೈಕ್ಷಣಿಕ ಸಾಧನೆ ಅಮೂಲ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಅಧ್ಯಕ್ಷ ಎಸ್.ಸಿ.ಸತೀಶ್, ಉಪಾಧ್ಯಕ್ಷ ಗಣಪತಿ, ಪರಿಶಿಷ್ಟಜಾತಿ-ಪಂಗಡ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿದ್ದಪ್ಪ, ಉಪಾಧ್ಯಕ್ಷರಾದ ಬಿ.ಡಿ.ಸರೋಜ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ದಿವಾಕರ್, ವಕೀಲ ಜಯೇಂದ್ರ ಸಂಘದ ನಿರ್ದೇಶಕರುಗಳಾದ ಜಯಪ್ಪ ಹಾನಗಲ್, ಪ್ರೇಮ್ ಕುಮಾರ್ ಇದ್ದರು.