ವೀರಾಜಪೇಟೆ, ಜು. ೩೧: ಪಕ್ಷಕ್ಕಿಂತ ಪದವಿ ದೊಡ್ಡದಲ್ಲ. ಪಕ್ಷ ಮೊದಲು, ಪದವಿ ನಂತರ ಎಂಬ ಮನೋಭಾವ ಪ್ರತಿಯೊಬ್ಬ ಕಾರ್ಯಕರ್ತರಲ್ಲೂ ಮೂಡಬೇಕು. ತಳಮಟ್ಟದಿಂದ ಪಕ್ಷ ಸಂಘಟನೆ ಬಲಗೊಂಡಾಗ ಮಾತ್ರ ಪಕ್ಷದ ಬೆಳವಣಿಗೆ ಸಾಧ್ಯ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಹೇಳಿದರು.
ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶಾಸಕರ ಗೃಹ ಕಚೇರಿಯಲ್ಲಿ ವಿವಿಧ ಘಟಕಗಳ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಆಯ್ಕೆಯ ಸಂದರ್ಭದಲ್ಲೂ ಭಿನ್ನಾಭಿಪ್ರಾಯ, ಅಧಿಕಾರದ ಸ್ಪರ್ಧೆ ಹಾಗೂ ಆಂತರಿಕ ರಾಜಕೀಯ ಸಾಮಾನ್ಯ. ಆದರೆ ಕಾರ್ಯಕರ್ತರು ಪಕ್ಷ ಸಂಘಟನೆಯೇ ಮೊದಲ ಆದ್ಯತೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಪಕ್ಷಕ್ಕಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದವರಿಗೆ ಪದವಿ ತಾನಾಗಿಯೇ ದೊರೆಯುತ್ತದೆ ಎಂದು ಹೇಳಿದರು. ಜಾತಿ, ಮತ, ಪಂಥ ಬೇಧವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ಮತ್ತು ಗೌರವ ನೀಡಲಾಗುತ್ತದೆ. ಆಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷದ ಸಂಘಟನೆಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.
ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಮಾತನಾಡಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಜನರಿಂದ ಉತ್ತಮ ಸ್ಪಂದನ ದೊರೆತಿದೆ. ಪಕ್ಷಕ್ಕೆ ಮುಜುಗರ ಉಂಟಾಗುವ ಬೆಳವಣಿಗೆಗಳಿಗೆ ಅವಕಾಶ ನೀಡದೆ ಪಕ್ಷದ ಬೆಳವಣಿಗೆ ಹಾಗೂ ಸಂಘಟನೆ ಬಲಪಡಿಸುವ ಕಾರ್ಯದಲ್ಲಿ ಎಲ್ಲ ಕಾರ್ಯಕರ್ತರೂ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಆಯ್ಕೆಯಾದ ಪದಾಧಿಕಾರಿಗಳು ಸ್ಥಳೀಯ ಮುಖಂಡರು, ಹಿರಿಯ-ಕಿರಿಯ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.
ಈ ಸಂದರ್ಭ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಮಂಡೇಟಿರ ಅನೀಲ್ ಅಯ್ಯಪ್ಪ, ಜೋಕೀಂ ರೋಡ್ರಿಗಸ್ ಹಾಗೂ ರವೀಂದ್ರ ಭಾವೆ, ಪ್ರಧಾನ ಕಾರ್ಯದರ್ಶಿಯಾಗಿ ಎ.ವಿ. ಮಂಜುನಾಥ್, ನಗರ ಅಧ್ಯಕ್ಷರಾಗಿ ಮಾಳೇಟಿರ ಬೋಪಣ್ಣ, ಕಾಕೋಟುಪರಂಬು ವಲಯ ಅಧ್ಯಕ್ಷರಾಗಿ ಬಟ್ಟಕಾಳಂಡ ರಾಜ ದಿನೇಶ್ ಹಾಗೂ ಅಮ್ಮತ್ತಿ ವಲಯ ಅಧ್ಯಕ್ಷರಾಗಿ ಕೆ.ಎನ್. ರಾಜನ್ ಅವರಿಗೆ ನೇಮಕಾತಿ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ವೀರಾಜಪೇಟೆ ಬ್ಲಾಕ್ ಪ್ರಚಾರ ಸಮಿತಿಯ ಅಧ್ಯಕ್ಷ ಎಸ್.ಹೆಚ್. ಮತೀನ್, ಬ್ಲಾಕ್ ಎಸ್‌ಸಿ ಘಟಕದ ಅಧ್ಯಕ್ಷ ಮಹದೇವ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ಶಭೀರ್, ಉಪಾಧ್ಯಕ್ಷ ಸಫ್ವಾನ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.