ಕಣಿವೆ, ಜು. ೩೦: ಈ ಬಾರಿಯ ಮುಂಗಾರಿನ ಕಣ್ಣಾಮುಚ್ಚಾಲೆ ಆಟದ ನಡುವೆಯೂ ಹಾರಂಗಿ ಜಲಾಶಯ ಭರ್ತಿಯಾಗಿದೆ. ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಇನ್ನೊಂದೆಡೆ ಪುಷ್ಯ ಮಳೆಗೆ ಜಲಾಶಯ ಭರ್ತಿಯಾಗುತ್ತದೆ.
ಕಾಲುವೆಗಳಲ್ಲಿ ನೀರೂ ಹರಿಯುತ್ತದೆ ಎಂಬ ಆಶಾಭಾವದೊಂದಿಗೆ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಬಹುತೇಕ ಅನ್ನದಾತರು ಭತ್ತದ ಸಸಿ ಮಡಿಗಳನ್ನು ಸಿದ್ಧಗೊಳಿಸಿ ಭತ್ತದ ನಾಟಿಗೆ ಕಾಲುವೆಯ ನೀರನ್ನೇ ಎದುರು ನೋಡುತ್ತಿದ್ದಾರೆ.
ಈ ಬಾರಿಯ ಮುಂಗಾರಿನಲ್ಲಿ ಮಳೆ ಸುರಿಸಬೇಕಿದ್ದ ಪ್ರಮುಖ ಮಳೆಗಳಾದ ಮೃಗಶಿರಾ, ಆರಿದ್ರಾ, ಪುನರ್ವಸು ಕೈ ಕೊಟ್ಟ ಪರಿಣಾಮ ರಾಜ್ಯ ಸರ್ಕಾರ ಈ ಬಾರಿ ಭತ್ತದ ಬೆಳೆಗೆ ನೀರು ಹರಿಸಲು ಆಗಲ್ಲ. ಕೆರೆ ಕಟ್ಟೆಗಳನ್ನು ತುಂಬಿಸಿ ಜಾನುವಾರುಗಳಿಗೆ ಕುಡಿಯುವ ನೀರನ್ನು ಮಾತ್ರ ಹರಿಸಲಾಗುತ್ತದೆ ಎಂಬ ರಾಜ್ಯ ಸರ್ಕಾರದ ಸ್ಪಷ್ಟ ಸೂಚನೆಯಿಂದ ಭತ್ತದ ಸಸಿಮಡಿಗಳನ್ನು ಸಿದ್ದಪಡಿಸಿ ನಾಟಿಗೆ ನೀರನ್ನು ಎದುರುನೋಡುತ್ತಿರುವ ರೈತಾಪಿಗಳಿಗೆ ನಿರಾಸೆ ಮೂಡಿಸಿದೆ.
೮ ಟಿಎಂಸಿ ಒಟ್ಟು ಸಾಮರ್ಥ್ಯವಿರುವ ಹಾರಂಗಿ ಜಲಾಶಯದಲ್ಲಿ ಪ್ರಸಕ್ತ ೭.೩ ಟಿಎಂಸಿ ನೀರು ಸಂಗ್ರಹಗೊAಡಿದೆ.
ಈ ಬಾರಿಯ ಖಾರೀಫ್ ಬೆಳೆಗೆ ೧೩೫ ದಿನಗಳ ಅವಧಿಗೆ ೧೫ ಟಿಎಂಸಿ ನೀರನ್ನು ಹರಿಸಬೇಕಿರುವ ಕಾರಣ ಮಳೆಯ ಕೊರತೆಯಿಂದಾಗಿ ಅಷ್ಟು ಪ್ರಮಾಣದ ನೀರನ್ನು ಹರಿಸಲು ಅಸಾಧ್ಯವಿರುವ ಕಾರಣ ಬೆಳೆಗೆ ನೀರು ಕೊಡುತ್ತಿಲ್ಲ. ಆದಾಗ್ಯೂ ಲಭ್ಯವಿರುವ ನೀರನ್ನು ಕೆರೆ ಕಟ್ಟೆಗಳನ್ನು ತುಂಬಿಸಲು ಬಳಸಬಹುದಾಗಿದೆ.
ಜೊತೆಗೆ ರಾಜ್ಯ ರಾಜಧಾನಿ ಬೆಂಗಳೂರಿನ ಮಹಾಮಂದಿಗೆ ಕುಡಿವ ನೀರೊದಗಿಸುವ ಕೃಷ್ಣರಾಜಸಾಗರ ಅಣೆಕಟ್ಟೆಯ ಹಿತದೃಷ್ಟಿಯನ್ನು ಗಮನಿಸಬೇಕಾಗುತ್ತದೆ.
ಏಕೆಂದರೆ ಈ ಜಲಾಶಯಕ್ಕೆ ನೀರಾವರಿ ಸಂಗ್ರಹದ ಮಾರ್ಗಗಳೆಂದರೆ ಅದು ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳಾಗಿವೆ.
ಈ ಬಾರಿ ಇನ್ನೂ ಕೂಡ ಹೇಮಾವತಿ ಜಲಾಶಯ ಭರ್ತಿಯಾಗದ ಹಿನ್ನೆಲೆಯಲ್ಲಿ ಕೆಆರ್ಎಸ್ಗೆ ಹಾರಂಗಿ ಹಾಗೂ ಕಾವೇರಿ ನದಿಗಳ ನೀರೇ ಮೂಲವಾಗಿದೆ. ಅಷ್ಟಕ್ಕೂ ಈ ತೀರ್ಮಾನ ನೀರಾವರಿ ಸಲಹಾ ಸಮಿತಿ ಸಭೆಗೆ ಬಿಟ್ಟದ್ದು ಎಂದು ಹಾರಂಗಿ ಯೋಜನಾ ವೃತ್ತದ ಅಭಿಯಂತರರೊಬ್ಬರು ‘ಶಕ್ತಿ’ ಗೆ ಮಾಹಿತಿ ನೀಡಿದ್ದಾರೆ.
ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಸಂಬAಧಿಸಿದ ಸರಹದ್ದುಗಳ ಶಾಸಕರುಗಳನ್ನು ಹೊರತುಪಡಿಸಿ ಕೊಡಗು, ಮೈಸೂರು ಹಾಗೂ ಹಾಸನ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು, ಮೂವರು ಕಾರ್ಯಪಾಲಕ ಅಭಿಯಂತರರು, ಓರ್ವ ಪೋಲೀಸ್ ಅಧಿಕಾರಿ ಸಭೆಯಲ್ಲಿ ಭಾಗವಹಿಸುತ್ತಾರೆ.
ಈ ಮಹತ್ವದ ಸಭೆ ತಾ.೩೧ ರಂದು ಶುಕ್ರವಾರ ಮೈಸೂರಿನಲ್ಲಿ ಮಧ್ಯಾಹ್ನ ೧೨ ಗಂಟೆಗೆ ಜರುಗಲಿದೆ ಎಂದು ಅಭಿಯಂತರರು ಮಾಹಿತಿ ನೀಡಿದ್ದಾರೆ. ಒಟ್ಟಾರೆ ಈ ಬಾರಿ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಭತ್ತ ಬೆಳೆಯಲು ನೀರು ಹರಿಸುವುದು ಬಹುತೇಕ ಅಸಾಧ್ಯ ಎಂಬುದು ಅಧಿಕಾರಿಗಳ ಲೆಕ್ಕಾಚಾರವಾಗಿದೆ. ವರದಿ : ಕೆ.ಎಸ್. ಮೂರ್ತಿ