ಸೋಮವಾರಪೇಟೆ, ಜು. ೨೯: ಜಂಬೂರಿನ ಖಾಸಗಿ ಸೇರಿದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಒಣಗಿದ ಮರ ಬಿದ್ದು ಅಸ್ಸಾಂ ಮೂಲದ ಈರ್ವರು ಮಹಿಳಾ ಕಾರ್ಮಿಕರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿರುವ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.

ಜAಬೂರು ತೋಟದ ಲೈನ್‌ಮನೆಯಲ್ಲಿ ವಾಸವಿದ್ದ ಅಸ್ಸಾಂ ರಾಜ್ಯದ ದರಾಂಗ್ ಜಿಲ್ಲೆ, ಚಲನಕುಚಿ ತಾಲೂಕು, ಬಗರ್‌ಕಾಶ್ ಗ್ರಾಮದ ಕಸ್ಮತ್ ಆಲಿ ಎಂಬವರ ಪತ್ನಿ ಆಲಿಮನ್ (೪೭) ಹಾಗೂ ಬೋರ್ಜಾರ್ ಗ್ರಾಮದ ಅಜ್ಗರ್ ಆಲಿ ಎಂಬವರ ಪತ್ನಿ ಫರ್ಬಿನಾ ಖತುನ್ (೨೯) ಎಂಬವರುಗಳೇ ದುರ್ಮರಣಕ್ಕೀಡದವರು.

ಇಂದು ಮಧ್ಯಾಹ್ನದ ಸಮಯದಲ್ಲಿ ಸಹ ಕಾರ್ಮಿಕರೊಂದಿಗೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಭಾರೀ ಗಾತ್ರದ ಗೋಣಿ ಮರವೊಂದು ಹಠಾತ್ತನೇ ಉರುಳಿ ಬಿದ್ದಿದ್ದು ಕೆಳಭಾಗದಲ್ಲಿದ್ದ ಆಲಿಮನ್ ಹಾಗೂ ಫರ್ಬಿನಾ ಅವರುಗಳು ಮರದ ಕೆಳಗೆ ಸಿಲುಕಿ ಗಂಭೀರ ಗಾಯಗೊಂಡು ಅಸುನೀಗಿದ್ದಾರೆ. ಇವರೊಂದಿಗೆ ಕೆಲಸ ಮಾಡುತ್ತಿದ್ದ ಮತ್ತೋರ್ವ ಕಾರ್ಮಿಕರಾದ ಅಲೀಸಾ ಕಸುಮ್‌ಗೆ ಗಂಭೀರ ಗಾಯಗಳಾಗಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಘಟನಾ ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಮುದ್ದುಮಹದೇವ ಸೇರಿದಂತೆ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಶವಾಗಾರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.

ಸ್ಥಳಕ್ಕೆ ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.