ಚಂದ್ರಮೋಹನ್
ಕುಶಾಲನಗರ, ಜು. ೨೮: ಈ ಸಾಲಿನಲ್ಲಿ ವರುಣನ ಅವಕೃಪೆಯಿಂದ ಕೆರೆಗಳು ಒಣಗಿ ನಿಂತಿದ್ದು ರೈತಾಪಿ ವರ್ಗ ತಮ್ಮ ಬೆಳೆಗಳನ್ನು ರಕ್ಷಿಸುವಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದು, ಆಕಾಶದತ್ತ ಮುಖ ಮಾಡುವ ಪರಿಸ್ಥಿತಿ ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬAದಿದೆ.
ಪಟ್ಟಣ ವ್ಯಾಪ್ತಿಯ ಐತಿಹಾಸಿಕ ತಾವರೆಕೆರೆ ಸೇರಿದಂತೆ ಬಹುತೇಕ ಕೆರೆಗಳು ನೀರಿಲ್ಲದೆ ಸೊರಗಿ ನಿಂತಿರುವ ದೃಶ್ಯ ಒಂದೆಡೆಯಾದರೆ ಕೃಷಿ ಚಟುವಟಿಕೆಗಳಿಗೆ ಆಸರೆಯಾಗಿರುವ ಗ್ರಾಮಾಂತರ ಪ್ರದೇಶದ ಕೆರೆಗಳು ಸಂಪೂರ್ಣ ಬತ್ತಿ ಹೋಗಿವೆ. ಈ ಕಾರಣದಿಂದ ಕೆರೆಯ ನೀರನ್ನು ನಂಬಿ ಕೃಷಿ ಚಟುವಟಿಕೆಗಳನ್ನು ನಡೆಸಿರುವ ರೈತರು ಕಂಗಾಲಾಗಿದ್ದಾರೆ.
ಕಳೆದ ವರ್ಷ ಅಧಿಕ ಪ್ರಮಾಣದ ಮಳೆ ಸುರಿದ ಕಾರಣ ಹಾರಂಗಿ ಜಲಾಶಯ ಮೇ ಅಂತ್ಯದಲ್ಲಿ ತುಂಬಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗಿತ್ತು(ಈ ಬಾರಿ ಜುಲೈ ಅಂತ್ಯದಲ್ಲಿ, ೨ ತಿಂಗಳು ತಡವಾಗಿ ನೀರು ಬಿಡಲಾಗಿದೆ) ಮತ್ತು ಕೆರೆಕಟ್ಟೆಗಳು ತುಂಬಿ ಆ ಸಂದರ್ಭ ರೈತಾಪಿ ವರ್ಗಕ್ಕೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗಿರಲಿಲ್ಲ.
ಈ ಬಾರಿ ವರುಣ ಕೈ ಕೊಟ್ಟ ಕಾರಣ ತಮ್ಮ ಬೆಳೆಗಳನ್ನು ಸಂರಕ್ಷಿಸಲು ಕೊಳವೆಬಾವಿ ನೀರನ್ನು ಬಳಸಿ ಹೊಲಗಳಲ್ಲಿ ಸ್ಪಿçಂಕ್ಲರ್ ಮಾಡಲಾಗುತ್ತಿರುವ ದೃಶ್ಯ ಅಲ್ಲಲ್ಲಿ ಗೋಚರಿಸಿದೆ.
ಹಾರಂಗಿ ಅಣೆಕಟ್ಟು ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಈಗಾಗಲೇ ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರಾದ ಸತೀಶ್ ಅವರು ಪ್ರಕಟಣೆ ಒಂದರ ಮೂಲಕ ಮಾಹಿತಿ ನೀಡಿದ್ದು ಜಲಾಶಯದ ನೀರನ್ನು ಅವಲಂಬಿಸಿ ಯಾವುದೇ ಕೃಷಿ ಚಟುವಟಿಕೆಗಳನ್ನು ಮಾಡುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿದ್ದಾರೆ.
ಇದರಿಂದ ಆತಂಕಕ್ಕೆ ಒಳಗಾಗಿರುವ ರೈತರು ತಮ್ಮ ಬೆಳೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಹೆಣಗಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಕಳೆದ ವರ್ಷ ಇದೇ ಅವಧಿಯ ನಡುವೆ ಮೂರು ಬಾರಿ ಹಾರಂಗಿ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗಿತ್ತು. ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿದ್ದವು. ಜಲಾಶಯದ ನೀರನ್ನು ನಂಬಿ ಹಾರಂಗಿ ಯೋಜನಾ ವ್ಯಾಪ್ತಿಯ ಅಚ್ಚುಕಟ್ಟು ವ್ಯಾಪ್ತಿಯ ರೈತಾಪಿ ವರ್ಗ ಭತ್ತದ ಕೃಷಿ ಸೇರಿದಂತೆ ತರಕಾರಿ ಬೆಳೆಗಳು ಹಾಗೂ ವಾಣಿಜ್ಯ ಬೆಳೆಯಾದ ಶುಂಠಿಯನ್ನು ಕೂಡ ತಮ್ಮ ಭೂಮಿಯಲ್ಲಿ ಬೆಳೆದಿದ್ದು ಇದೀಗ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಇನ್ನೊಂದೆಡೆ ಮಳೆಯನ್ನು ನಂಬಿ ಕಾದು ಇದುವರೆಗೆ ತಮ್ಮ ಭೂಮಿಯಲ್ಲಿ ಯಾವುದೇ ಕೃಷಿಯನ್ನು ಮಾಡದೆ ಬರಡಾಗಿ ಬಿಟ್ಟಿರುವ ದೃಶ್ಯಗಳು ಅಲ್ಲಲ್ಲಿ ಕಂಡು ಬಂದಿದೆ. ಹಾರಂಗಿ ಅಣೆಕಟ್ಟೆಯಿಂದ ಕಾಲುವೆಗಳ ಮೂಲಕ ತಮ್ಮ ಜಮೀನಿಗೆ ನೀರನ್ನು ಹರಿಸುವ ನಿಟ್ಟಿನಲ್ಲಿ ಅಣೆಕಟ್ಟು ಅಧಿಕಾರಿಗಳು ತಕ್ಷಣ ಗಮನಹರಿಸಬೇಕು ಎಂದು ಅಚ್ಚುಕಟ್ಟು ವ್ಯಾಪ್ತಿಯ ರೈತರು ‘ಶಕ್ತಿ’ಯ ಮೂಲಕ ಮನವಿ ಮಾಡಿದ್ದಾರೆ.