ಸಿದ್ದಾಪುರ, ಜು. ೨೮: ಮಾಲ್ದಾರೆ ಸಮೀಪದ ಗದ್ದಿಗೆ ಬೆಟ್ಟದಲ್ಲಿರುವ ಶ್ರೀ ಸಿದ್ಧೇಶ್ವರ ದೇವಾಲಯ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ ಅಕ್ರಮ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪದ ಅಡಿಯಲ್ಲಿ ಕುಶಾಲನಗರ ವಲಯ ಅರಣ್ಯ ಅಧಿಕಾರಿ ಅವರು ನ್ಯಾಯಾಲಯದಿಂದ ಅನುಮತಿ ಪಡೆದು ಅಕ್ರಮ ಪ್ರವೇಶ ಮಾಡಿದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ದುಬಾರೆ ಮೀಸಲು ಅರಣ್ಯದ ಗದ್ದಿಗೆ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಅಕ್ರಮ ಚಟುವಟಿಕೆ ಮಾಡಿರುವ ಆರೋಪದಡಿಯಲ್ಲಿ ಕರ್ನಾಟಕ ಅರಣ್ಯ ಕಾಯ್ದೆ ೧೯೬೩ ರ ಸೆಕ್ಷನ್ ೨೪ ಹಾಗೂ ಕರ್ನಾಟಕ ಅರಣ್ಯ ನಿಯಮ ೧೯೬೯ರ ಸೆಕ್ಷನ್ ೧೬೫ರ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪದಡಿಯಲ್ಲಿ ಪಿರಿಯಾಪಟ್ಟಣ ತಾಲೂಕಿನ ಆಯಾರು ಬೀಡು ಗ್ರಾಮದ ನಿವಾಸಿ ಮಿಜಾಮಿಲ್ ಹಾಗೂ ಇತರರ ಮೇಲೆ ಕುಶಾಲನಗರ ವಲಯ ಅರಣ್ಯ ಅಧಿಕಾರಿ ರಕ್ಷಿತ್. ಆರ್. ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಭಾನುವಾರದಂದು ಮಾಲ್ದಾರೆ ಸಮೀಪದಲ್ಲಿರುವ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಅನ್ಯಕೋಮಿನ ಯಾರೋ ಕಿಡಿಗೇಡಿಗಳು ದೇವಾಲಯದ ಅವರಣದಲ್ಲಿ ಗೋರಿ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳು ದೇವಾಲಯದ ಆವರಣದಲ್ಲಿ ಸೋಮವಾರದಂದು ಪ್ರತಿಭಟನೆ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಬಂಧಿಸಬೇಕೆAದು ಒತ್ತಾಯಿಸಿದ್ದರು. ಘಟನೆಯ ಸಂಬAಧ ದೇವಾಲಯದ ಆಡಳಿತ ಮಂಡಳಿಯ ಉಪಾಧ್ಯಕ್ಷರು ಸಿದ್ದಾಪುರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಓರ್ವನನ್ನು ಸಿದ್ದಾಪುರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.