ಮಡಿಕೇರಿ, ಜು. ೨೮: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಪ್ರತ್ಯಕ್ಷಗೊಂಡ ಹುಲಿಯನ್ನು ಕಂಡ ಕಾರ್ಮಿಕರು ಹೆೆದರಿ ಓಡಿ ಪ್ರಾಣಾಪಾಯದಿಂದ ಪಾರಾದ ಘಟನೆ ಸಂಭವಿಸಿದೆ.
ಇಲ್ಲಿಗೆ ಸಮೀಪದ ಬಲಮುರಿಯ ನೆಬ್ಬೂರು-ಕೋರಬಾಣೆಯ ಕೊಟ್ಟಕೇರಿಯನ ಪೂಣಚ್ಚ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿಂದು ಕಾರ್ಮಿಕರು ಕಳೆ ಕಡಿಯುವ ಕೆಲಸದಲ್ಲಿ ತೊಡಗಿದ್ದರು. ಈ ಸಂದರ್ಭ ಹುಲಿಯೊಂದು ತೋಟದ ಮೂಲೆಯಲ್ಲಿ ಪ್ರತ್ಯಕ್ಷಗೊಂಡು ಪಕ್ಕದ ತೋಟಕ್ಕೆ ತೆರಳುತ್ತಿದ್ದುದನ್ನು ಕಂಡು ಸದ್ದು ಮಾಡದೆ ಕಾರ್ಮಿಕರು ಅಲ್ಲಿಂದ ಓಡಿ ಮನೆ ಸೇರಿ ವಿಷಯವನ್ನು ಮಾಲೀಕರಿಗೆ ತಿಳಿಸಿದ್ದಾರೆ. ಮಾಲೀಕರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖಾ ಸಿಬ್ಬಂದಿ ಪಟಾಕಿ ಸಿಡಿಸಿ ತೆರಳಿದ್ದಾರೆ.
ತೋಟದಲ್ಲಿ ಹುಲಿ ಬೇಟೆಯಾಡಿರುವ ಪ್ರಾಣಿಯ ರಕ್ತದ ಕಲೆಗಳು ಕಂಡು ಬಂದಿವೆ. ಇದಲ್ಲದೆ ಇತ್ತೀಚೆಗಷ್ಟೇ ಗ್ರಾಮದ ನಿವಾಸಿಯೋರ್ವರಿಗೆ ಸೇರಿದ ಕರುವೊಂದನ್ನು ಹೊತ್ತೊಯ್ದಿದೆ. ಇತ್ತೀಚೆಗೆ ಈ ವ್ಯಾಪ್ತಿಯಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆ ಹಚ್ಚಿದ ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಟಾಕಿ ಸಿಡಿಸಿ ತೆರಳಿದ್ದರು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಇಂದೂ ಕೂಡ ಪಟಾಕಿ ಸಿಡಿಸಿ ತೆರಳಿದ್ದಾರೆ. ಆದರೆ ಬೇರೆ ಯಾವದೇ ಕ್ರಮ ಕೈಗೊಂಡಿರುಲ್ಲ್ಲ. ಈ ವ್ಯಾಪ್ತಿಯಲ್ಲಿ ಕಾಲೋನಿ ಕೂಡ ಇದ್ದು ಶಾಲೆಗೆ ತೆರಳುವ ಮಕ್ಕಳಿದ್ದಾರೆ, ಕೆಲಸಕ್ಕೆ ತೆರಳುವವರಿದ್ದಾರೆ, ತೋಟ ಕೆಲಸಕ್ಕೆ ಹೋಗುವವರೂ ಇದ್ದು ರಸ್ತೆಗಿಳಿಯಲು ಭಯಪಡುವಂತಾಗಿದೆ. ಹಾಗಾಗಿ ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಗಸ್ತು ಸಿಬ್ಬಂದಿಗಳನ್ನು ನೇಮಕ ಮಾಡುವದರೊಂದಿಗೆ ಹುಲಿ ಸೆರೆಹಿಡಿಯಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮನೆಯ ಬಳಿ ಜಿಂಕೆ..!
ಗ್ರಾಮದ ತೋಟಗಳಲ್ಲಿ ಹುಲಿ ಸಂಚಾರ ಇರುವುದರಿಂದ ಹೆದರಿರುವ ಜಿಂಕೆ ಮರಿಗಳು ಕೊಟ್ಟಕೇರಿಯನ ಕುಟುಂಬಸ್ಥರ ಮನೆಯ ಬಳಿಯೇ ಬೀಡು ಬಿಟ್ಟಿವೆ. ಓಡಿಸಿದರೂ ಆ ಜಿಂಕೆಗಳು ತೋಟಕ್ಕಾಗಲೀ ಕಾಡಿಗೆ ಹೋಗುತ್ತಿಲ್ಲ ಎನ್ನಲಾಗಿದ್ದು, ಅರಣ್ಯ ಇಲಾಖೆ ಈ ಬಗ್ಗೆಯೂ ಗಮನಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.