ವೀರಾಜಪೇಟೆ:, ಜು. ೨೬ ಬಿಡದಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಬೆಂಬಲ ಸೂಚಿಸಲು ಕೊಡಗಿನಿಂದ ಬಿಡದಿಗೆ ತೆರಳುತ್ತಿದ್ದ ರೈತರನ್ನು ತಿತಿಮತಿಯಲ್ಲಿ ಪೊಲೀಸರು ತಡೆದು ಬಂಧಿಸಿರುವುದನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುವುದಲ್ಲದೆ ರೈತರ ಹೊರಾಟಕ್ಕೆ ಭಾರತೀಯ ಜನತಾ ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಮಾಚಿಮಾಡ ರವೀಂದ್ರ ಹೇಳಿದರು.
ವೀರಾಜಪೇಟೆ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗಳು ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಅವರ ಪಕ್ಷದ ಪ್ರಮುಖರುಗಳು ಕೂಡ ವಿವಿಧ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ರೈತರ ಭೂಮಿಯ ಹಕ್ಕಿನ ಪರವಾಗಿ ಹೋರಾಟ ನಡೆಸುತ್ತಿರುವವರ ಪರವಾಗಿ ಬೆಂಬಲ ವ್ಯಕ್ತಪಡಿಸಲು ತೆರಳುವವರನ್ನು ಬಂಧಿಸುವ ಕ್ರಮ ನ್ಯಾಯ ಸಮ್ಮತವÀಲ್ಲ.
ಬೆಂಗಳೂರಿನಿAದ - ಬಿಡದಿವರೆಗೆ ನಡೆಯುವ ಬಿಜೆಪಿಯ ಪಾದಯಾತ್ರೆಗೆ ಕೊಡಗಿನಿಂದ ಸಾಕಷ್ಟು ಸಂಖ್ಯೆಯಲ್ಲಿ ತೆರಳಿ ಬೆಂಬಲ ವ್ಯಕ್ತಪಡಿಸುತ್ತೇವೆ. ಕಳೆದ ಮೂರು ವರ್ಷದಿಂದ ರೈತರು ನಷ್ಟ ಅನುಭವಿಸಿದರೂ ಸರ್ಕಾರದಿಂದ ಚಿಕ್ಕಾಸು ಪರಿಹಾರ ನೀಡಿಲ್ಲ. ಭಾಜಪದ ಆಡಳಿತ ಅವಧಿಯಲ್ಲಿ ಕನಿಷ್ಟ ೫೨ ಸಾವಿರದಷ್ಟು ಪರಿಹಾರ ನೀಡಲಾಗಿದೆ. ಈ ರೀತಿ ಕಾಫಿ ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡಲು ಸಾಧ್ಯವಾಗದವರು ಇಂದು ರೈತರನ್ನು ಬಂಧಿಸಿ ಶೋಷಣೆ ಮಾಡುವುದು ಎಷ್ಟು ಸರಿ ಎಂದು ಅವರು ಪಶ್ನಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುಮ್ಮಟಿರ ಕಿಲನ್ ಮಾತನಾಡಿ, ರೈತರು ಉಳಿದರೆ ಮಾತ್ರ ದೇಶ ಉಳಿಯುತ್ತದೆ. ಆದರೆ ರೈತರಿಂದ ಸುಮಾರು ೯೬೦೦ ಎಕರೆ ಕೃಷಿ ಭೂಮಿಯನ್ನು ನೋಟಿಫಿಕೇಷನ್ ಮಾಡಿ ರೈತರ ಭೂಮಿಯನ್ನು ಕಿತ್ತುಕೊಳ್ಳುವ ಯತ್ನವನ್ನು ನಾವು ಖಂಡಿಸುತ್ತೇವೆ. ಅಭಿವೃದ್ಧಿಗೆ ನಾವು ವಿರೋಧ ಮಾಡುವುದಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ರೈತರ ಭೂಮಿಯ ಮೇಲೆ ಕಣ್ಣು ಹಾಕಿ ನೋಟಿಫಿಕೇಷನ್ ಮಾಡಿರುವುದು ಕೃಷಿಗೆ ಮಾತ್ರವಲ್ಲದೆ ಪರಿಸರಕ್ಕೂ ಪೆಟ್ಟು ನೀಡಿದಂತಾಗುತ್ತದೆ ಎಂದರು.
ವೀರಾಜಪೇಟೆ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ಪ್ರತಿಭಟಿಸುವ ಹಕ್ಕಿದೆ. ರೈತರನ್ನು ತಡೆದು ಅವರನ್ನು ಕೂಡಿಗೆಗೆ ಕರೆದುಕೊಂಡು ಹೋಗಿರುವ ಪೋಲಿಸರ ನಡೆಯನ್ನು ತೀವ್ರವಾಗಿ ಖಂಡಿಸುವುದಲ್ಲದೆ ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಮಂಡಲ ಉಪಾಧ್ಯಕ್ಷ ಬಿ.ಎಂ. ಗಣೇಶ್, ವೀರಾಜಪೇಟೆ ಮಂಡಲ ಪ್ರಧಾನ ಕಾರ್ಯದರ್ಶಿ ಮುದ್ದಿಯಡ ಮಂಜು ಗಣಪತಿ ಉಪಸ್ಥಿತರಿದ್ದರು.