ಸೋಮವಾರಪೇಟೆ, ಜು. ೨೬: ಕೊಡಗು ಪತ್ರಕರ್ತರ ಸಂಘದ ತಾಲೂಕು ಘಟಕ, ಸಂತ ಜೋಸೆಫರ ಪದವಿ ಕಾಲೇಜು ಹಾಗೂ ಮಡಿಕೇರಿಯ ರಕ್ತನಿಧಿ ಕೇಂದ್ರಗಳ ಆಶ್ರಯದಲ್ಲಿ ಸಂತ ಜೋಸೆಫರ ಪದವಿ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಮತ್ತು ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವ ಉದ್ಘಾಟಿಸಿದರು. ನಂತರ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಎನಿಸಿಕೊಂಡಿರುವ ಪತ್ರಿಕಾರಂಗ ಸಮಾಜದಲ್ಲಿ ಪ್ರಮುಖ ಅಂಗವಾಗಿದೆ. ದೇಶದ ಆಡಳಿತದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಹೆಚ್ಚಿನ ಜನರು ಇಂದಿಗೂ ಪ್ರತಿದಿನ ಪತ್ರಿಕೆಯೊಂದಿಗೆ ದಿನಚರಿಯನ್ನು ಪಾರಂಭಿಸುತ್ತಿದ್ದಾರೆ. ನಮ್ಮ ಜೀವನದ ಮಾರ್ಗದರ್ಶಕವಾಗಿ ಕೆಲಸ ಮಾಡುತ್ತಿರುವ ಪತ್ರಿಕೆಯನ್ನು ಎಲ್ಲರೂ ಓದಬೇಕು. ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವುದರಿಂದ ಸಾಮಾನ್ಯ ಜ್ಞಾನ ಹೆಚ್ಚುತ್ತದೆ. ಇದರೊಂದಿಗೆ ದೈನಂದಿನ ವಿದ್ಯಮಾನಗಳನ್ನು ಗಮನಿಸಬಹುದು. ಇದು ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ರಕ್ತನಿಧಿ ಕೇಂದ್ರದ ಮುಖ್ಯಸ್ಥರಾದ ಡಾ. ರವಿ ಕರುಂಬಯ್ಯ ಮಾತನಾಡಿ, ರಕ್ತಕ್ಕೆ ಪರ್ಯಾಯವನ್ನು ಇಂದಿಗೂ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಮಾನವನ ರಕ್ತವೇ ಪ್ರಮುಖವಾಗಿದೆ. ಒಮ್ಮೆ ನೀಡಿದ ರಕ್ತ ವಾರದಲ್ಲಿಯೇ ಮರುಪೂರಣವಾಗುವುದು. ಒಬ್ಬರು ನೀಡಿದ ರಕ್ತದಿಂದ ಕನಿಷ್ಟ ಮೂರು ಜೀವ ಉಳಿಸಲು ಸಾಧ್ಯ. ಜಿಲ್ಲೆಯಲ್ಲಿ ರಕ್ತಕ್ಕೆ ಕೊರತೆಯಿದ್ದು, ಸಂಘ ಸಂಸ್ಥೆಗಳು ಶಿಬಿರಗಳನ್ನು ಆಯೋಜಿಸುವ ಮೂಲಕ ರಕ್ತ ಸಂಗ್ರಹಮಾಡಿ ರಕ್ತದ ಕೊರತೆಯನ್ನು ನೀಗಿಸಬೇಕಿದೆ ಎಂದು ಮನವಿ ಮಾಡಿದರು.
ರಕ್ತದಾನ ಶಿಬಿರಕ್ಕೆ ಸಂತ ಜೋಸೆಫರ ಶಿಕ್ಷಣ ಸಂಸ್ಥೆಯ ಕರೆಸ್ಪಾಂಡೆAಟ್ ಅವಿನಾಶ್ ಚಾಲನೆ ನೀಡಿ ಮಾತನಾಡಿ, ದಿನಪತ್ರಿಕೆಗಳು ಸಮಾಜದ ಕಣ್ಣು-ಕಿವಿ ಇದ್ದ ಹಾಗೆ. ಅದು ಸಮಾಜದ ಅಂಕುಡೊAಕುಗಳನ್ನು ತಿದ್ದುವ ಮೂಲಕ ಸರಿದಾರಿಯಲ್ಲಿ ಮುನ್ನಡೆಯಲು ಜಾಗೃತಿ ಮೂಡಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಚ್.ಆರ್. ಹರೀಶ್ ಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಜನಪದ ಪರಿಷತ್ ಅಧ್ಯಕ್ಷ ಕೆ.ಎ. ಪ್ರಕಾಶ್, ಕೊಡಗು ಪತ್ರಕರ್ತರ ಸಂಘದ ಉಪಾಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ, ಜಿಲ್ಲಾ ಕ್ಷೇಮ ನಿಧಿ ಅಧ್ಯಕ್ಷ ಜಿ.ವಿ. ರವಿಕುಮಾರ್, ಕೊಡಗು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಎಸ್.ಎ. ಮುರಳೀಧರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಸಯ್ಯದ್ ಇರ್ಫಾನ್, ಕನ್ನಡ ಸಿರಿ ಸ್ನೇಹಬಳಗದ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತ ಡಿ.ಪಿ. ಲೋಕೇಶ್ ಅವರುಗಳನ್ನು ಸನ್ಮಾನಿಸಲಾಯಿತು.