ಮಡಿಕೇರಿ, ಜು. ೨೬ : ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಗೆಲವು ಸಾಧಿಸಿದ ಸಂಕೇತವಾಗಿ ಕಾರ್ಗಿಲ್ ವಿಜಯೋತ್ಸವವನ್ನು ಇಂದು ನಾಡಿನಾದ್ಯಂತ ಹುತಾತ್ಮ ವೀರಯೋಧರ ಸ್ಮರಣೆಯೊಂದಿಗೆ ಆಚರಿಸಲಾಯಿತು. ಮಾಜಿ ಸೈನಿಕರು, ದೇಶಭಕ್ತಿ ಸಂಘಟನೆಗಳು ಸೇರಿದಂತೆ ವಿವಿಧ ಸಂಘ - ಸಂಸ್ಥೆಗಳ ವತಿಯಿಂದ ದೇಶಕ್ಕಾಗಿ ಹೋರಾಡಿದವರನ್ನು ಶ್ಲಾಘಿಸುವುದರೊಂದಿಗೆ ವೀರಮರಣವನ್ನಪ್ಪಿ ಹುತಾತ್ಮರಾದವರನ್ನು ಸ್ಮರಿಸಿಕೊಳ್ಳುವ ಮೂಲಕ ವಿಜಯೋತ್ಸವ ಆಚರಿಸಲಾಯಿತು.

ಮಡಿಕೇರಿ

ಮಡಿಕೇರಿ ನಗರಸಭೆ ಬಳಿಯ ಯುದ್ಧ ಸ್ಮಾರಕದಲ್ಲಿ ಭಜರಂಗ ದಳ ಹಾಗೂ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಕಾರ್ಗಿಲ್ ವಿಜಯ್ ದಿವಸ ಆಚರಿಸಲಾಯಿತು. ಯುದ್ಧ ಸ್ಮಾರಕವನ್ನು ಹೂಗಳಿಂದ ಅಲಂಕರಿಸಲಾಗಿದ್ದು, ಗಣ್ಯರು ಹಾಗೂ ಕಾರ್ಯಕರ್ತರು ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಗೌರವ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಧನಂಜಯ ಅಗೋಳಿಕಜೆ, ಭಾರತೀಯ ಯೋಧರು ಜೀವಪಣಕ್ಕಿಟ್ಟು ದೇಶ ರಕ್ಷಣೆಯಲ್ಲಿ ತೊಡಗಿದ್ದಾರೆ. ಗಡಿ ಕಾಯುವ ಯೋಧರಿಂದ ನಾವಿಲ್ಲಿ ನೆಮ್ಮದಿಯ ಬದುಕು ನಡೆಸುತ್ತಿದ್ದೇವೆ. ಸೈನಿಕರನ್ನು ಸದಾ ಸ್ಮರಿಸಬೇಕು. ಅವರ ತ್ಯಾಗ, ಬಲಿದಾನವನ್ನು ನೆನೆದರೆ ಹೋರಾಟದ ನೆಪದಲ್ಲಿ ಪೊಲೀಸರ ಹಲ್ಲೆ ಮಾಡಲು ಮನಸ್ಸು ಬರುವುದಿಲ್ಲ. ದೇಶವಿರೋಧಿ ಘೋಷಣೆಗಳನ್ನು ಕೂಗಲಾಗುವುದಿಲ್ಲ ಎಂದರು.

ಪಾಕ್ ವಿರುದ್ಧ ಹೋರಾಡಿ ಕಾರ್ಗಿಲ್ ಪ್ರದೇಶವನ್ನು ಭಾರತೀಯ ಯೋಧರು ಉಳಿಸಿಕೊಟ್ಟಿದ್ದಾರೆ. ಈ ಯುದ್ಧದಲ್ಲಿ ೫೨೭ ಯೋಧರು ಹುತಾತ್ಮರಾಗಿದ್ದು, ನೂರಾರು ಮಂದಿ ಅಂಗವಿಕಲರಾದರು. ಸೈನಿಕರ ಸಾಧನೆಯನ್ನು ಯುವಸಮುದಾಯಕ್ಕೆ ತಿಳಿಸುವ ಕೆಲಸÀವಾಗಬೇಕು. ಶಾಲೆಗಳಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆಯಾಗಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ದೇಶಭಕ್ತಿ, ಮಾನವೀಯತೆ ಮೂಡಿಸುವಂತಾಗಬೇಕೆAದು ಅಭಿಮತ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮೇ ಕುಶ್ವಂತ್ ಕೋಳಿಬೈಲು ಮಾತನಾಡಿ, ಕೊಡಗು ಜಿಲ್ಲೆ ಯೋಧ ಪರಂಪರೆಯ ನಾಡಾಗಿದೆ. ಕಾರ್ಗಿಲ್‌ನಂತಹ ಪ್ರದೇಶದಲ್ಲಿ ಬದುಕುವುದೇ ಸಾಹಸವಾಗಿದ್ದು, ಇಂತಹ ಜಾಗದಲ್ಲಿ ಹೋರಾಡಿ ಕಾರ್ಗಿಲ್ ಪ್ರದೇಶ ಶತ್ರುಮುಕ್ತ ಮಾಡಿದ ಹೆಮ್ಮೆ ಭಾರತೀಯ ಯೋಧರಿಗೆ ಸಲ್ಲಬೇಕು. ಯುವಪೀಳಿಗೆ ದೇಶಭಕ್ತಿ, ವೀರಪರಂಪರೆಯ ಬಗ್ಗೆ ತಿಳಿದುಕೊಳ್ಳಬೇಕು. ಸತ್ಪçಜೆಯಾಗಿ ದೇಶಕಟ್ಟಿ ಸದೃಢಭಾರತ ನಿರ್ಮಾಣ ಮಾಡಲು ಕೈಜೋಡಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆ ಪ್ರಾಂತ ಕಾರ್ಯಕಾರಿಣಿ ಸದಸ್ಯ ಕುಕ್ಕೇರ ಅಜಿತ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪುದಿಯೊಕ್ಕಡ ರಮೇಶ್, ಭಜರಂಗದಳ ಜಿಲ್ಲಾ ಸಂಯೋಜಕ ವಿನಯ್, ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿ, ಮಡಿಕೇರಿ ಬಿಜೆಪಿ ನಗರಾಧ್ಯಕ್ಷ ಉಮೇಶ್ ಸುಬ್ರಮಣಿ, ಹಿಂದೂ ಜಾಗರಣಾ ವೇದಿಕೆ ತಾಲೂಕು ಸಂಯೋಜಕ ಬಾಲಕೃಷ್ಣ ರೈ, ಹಿಂದೂ ಜಾಗರಣಾ ವೇದಿಕೆಯ ಕುಮಾರ್, ಭಜರಂಗದಳದ ಚರಣ್ ಸೇರಿದಂತೆ ಪ್ರಮುಖರಾದ ಎಡಿಕೇರಿ ಪ್ರಸನ್ನ, ಅನಿತಾ ಪೂವಯ್ಯ, ಬೊಳ್ಳಜಿರ ಅಯ್ಯಪ್ಪ, ನಿವೃತ್ತ ಯೋಧರು, ವಿವಿಧ ಸಂಘಸAಸ್ಥೆ ಪ್ರಮುಖರು ಉಪಸ್ಥಿತರಿದ್ದರು.