ಸಿದ್ದಾಪುರ, ಜು. ೨೬: ಕಾಡಾನೆಗಳ ಗುಂಪಿನಲ್ಲಿದ್ದ ಹೆಣ್ಣಾನೆಯೊಂದು ಶನಿವಾರ ರಾತ್ರಿ ಕಾಫಿ ತೋಟದೊಳಗೆ ಮೃತಪಟ್ಟಿದೆ.

ಅಮ್ಮತ್ತಿ ಸಮೀಪದ ಆನಂದಪುರದ ಬಳಿಯ ಖಾಸಗಿ ಕಾಫಿ ತೋಟದೊಳಗೆ ಘಟನೆ ನಡೆದಿದೆ. ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಅಮ್ಮತ್ತಿ ಶಾಖೆ ವ್ಯಾಪ್ತಿಯ ಪುಲಿಯೇರಿ ಗ್ರಾಮದ ಆನಂದಪುರ ಭಾಗದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಗುಂಪಿನ ಪೈಕಿ ಅಂದಾಜು ೩೦ವರ್ಷ ಪ್ರಾಯದ ಹೆಣ್ಣಾನೆಯೊಂದು ಶನಿವಾರ ರಾತ್ರಿ ಸಾವನ್ನಪ್ಪಿದ್ದು, ಇದರಿಂದಾಗಿ ಅದರೊಂದಿಗಿದ್ದ ಮರಿಯಾನೆಯೊಂದು ತನ್ನ ತಾಯಿಯನ್ನು ಕಳೆದುಕೊಂಡು ದುಃಖದಿಂದ ಸ್ಥಳದಲ್ಲಿ ರೋಧಿಸುತ್ತಾ ಚಿರಾಡುತ್ತಿದ್ದ ಶಬ್ದವನ್ನು ಕೇಳಿದ ಸ್ಥಳೀಯರು ಸ್ಥಳಕ್ಕೆ ತೆರಳಿ ಕಾಡಾನೆ ಸತ್ತಿರುವ ವಿಚಾರದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಕೂಡಲೆ ಸ್ಥಳಕ್ಕೆ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ಉಪವಲಯ ಅರಣ್ಯ ಅಧಿಕಾರಿ ಮನೋಜ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಿರುಬನಾಥನ್ ಮತ್ತು ಎ.ಸಿ.ಎಫ್. ತಾಸೀನಬಾನು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಯಿಯನ್ನು ಬಿಟ್ಟು ಕದಲದ ಮರಿಯಾನೆ

ಸಾವನ್ನಪ್ಪಿದ ಹೆಣ್ಣಾನೆಗೆ ಒಂದು ವರ್ಷ ಪ್ರಾಯದ ಮರಿ ಇದ್ದು ಅದು ತನ್ನ ತಾಯಿ ಮಲಗಿದ್ದಲ್ಲಿಂದ ಎದ್ದೇಳದೆ ಇರುವುದನ್ನು ಗಮನಿಸಿ ರಾತ್ರಿಪೂರ್ತಿ ಚಿರಾಡುತ್ತಿತ್ತು. ಬೆಳಗ್ಗಿನ ಜಾವ ಕೂಡ ಇದು ಕಿರುಚುತ್ತಿರುವ ಶಬ್ದದಿಂದ ಸ್ಥಳೀಯರು ಸ್ಥಳಕ್ಕೆ ತೆರಳಿದರು. ಇವರೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮೃತಪಟ್ಟ ಆನೆಯ ಸಮೀಪಕ್ಕೆ ತೆರಳುವ ಸಂದರ್ಭ ಮರಿಯಾನೆಯು ಸ್ಥಳಕ್ಕೆ ತೆರಳಲು ಬಿಡದೆ ಅಡ್ಡಿಪಡಿಸುತ್ತಿತ್ತು. ಬಳಿಕ ಬೆಳಗ್ಗಿನಿಂದ ಸಂಜೆವರೆಗೂ ಮರಿಯಾನೆ ತನ್ನ ತಾಯಿಯ ಬಳಿಯಿಂದ ಕದಲದೆ ಅಲ್ಲೇ ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಎಷ್ಟೇ ಪ್ರಯತ್ನಪಟ್ಟರೂ ಕೂಡ ಮರಿಯಾನೆ ತಾಯಿಯನ್ನು ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಬಿಟ್ಟು ಬರಲು ಹಿಂದೇಟು ಹಾಕಿತು. ಕೊನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳೀಯರ ನೆರವಿನಿಂದ ಬಲೆಯನ್ನು ಬಳಸಿ ಮರಿಯಾನೆಯನ್ನು ಸೆರೆಹಿಡಿದು ಸ್ಥಳೀಯ ನಿವಾಸಿಯೊಬ್ಬರ ಮನೆಯಲ್ಲಿ ಕಟ್ಟಿ ಹಾಕಿದರು. ನಂತರ ಮೃತಪಟ್ಟ ಕಾಡಾನೆಯ ಮೃತ ದೇಹವನ್ನು ವನ್ಯಜೀವಿ ವೈದ್ಯಾಧಿಕಾರಿ ಡಾ.ಮುಜೀಬ್ ಮತ್ತು ಪಶು ವೈದ್ಯಾಧಿಕಾರಿ ಡಾ. ನವೀನ್ ಕುಮಾರ್ ಅವರು ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಕಾಡಾನೆ ಮೃತಪಟ್ಟ ಕಾಫಿ ತೋಟದ ಒಳಗೆ ಜೆ.ಸಿ.ಬಿ.ಯನ್ನು ಬಳಸಿ ಅಂತ್ಯಕ್ರಿಯೆ ಮಾಡಲಾಯಿತು. ನೆಲಕ್ಕೆ ಬಿದ್ದ ಕಾರಣ ದೇಹದೊಳಗೆ ಬಲವಾದ ಪೆಟ್ಟಾಗಿ ಆನೆ ಸಾವನ್ನಪ್ಪಿರುವುದಾಗಿ ಮರಣೋತ್ತರ ಪರೀಕ್ಷೆಯಲ್ಲಿ ಖಚಿತಗೊಂಡಿದೆ.

ಮೃತಪಟ್ಟ ಕಾಡಾನೆಯ ಮರಿಯನ್ನು ಈ ಭಾಗದಲ್ಲಿ ಸಂಚರಿಸುತ್ತಿರುವ ಕಾಡಾನೆಗಳ ಗುಂಪಿಗೆ ಸೇರಿಸಿ ಬಿಡಲಾಗುವುದು ಅಥವಾ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರ್ಯಾಯ ವ್ಯವಸ್ಥೆ ಮಾಡಲಾಗುವುದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

- ವಾಸು ಎ.ಎನ್.