ಭಾರತದ ಹೆಮ್ಮೆಯ ಅಧ್ಯಾಯಗಳಲ್ಲಿ ಒಂದಾದ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರು ತೋರಿದ ಶೌರ್ಯ, ಸಾಹಸ ಮತ್ತು ದೇಶಭಕ್ತಿಯನ್ನು ಸ್ಮರಿಸುವ ಕಾರ್ಗಿಲ್ ವಿಜಯೋತ್ಸವವನ್ನು ಜುಲೈ ೨೬ ರಂದು ದೇಶಾದ್ಯಂತ ಆಚರಿಸಲಾಗುತ್ತದೆ.

ದೇಶದ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಅಧಿಕಾರದ ಅವಧಿಯಲ್ಲಿ ಜನರಲ್ ವೇದ್ ಪ್ರಕಾಶ್ ಮಲ್ಲಿಕ್ ಅವರ ನೇತೃತ್ವದಲ್ಲಿ ೧೯೯೯ ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತ ಐತಿಹಾಸಿಕ ವಿಜಯ ಸಾಧಿಸಿತು.

೧೯೯೯ರ ಮೇ ತಿಂಗಳಿನಲ್ಲಿ ಪಾಕಿಸ್ತಾನದ ಸೇನೆ ಹಾಗೂ ಉಗ್ರರು ಜಮ್ಮು ಕಾಶ್ಮೀರದ ಕಾರ್ಗಿಲ್, ದ್ರಾಸ್, ಬಟಾಲಿಕ್ ಸೇರಿದಂತೆ ಗಡಿ ಪ್ರದೇಶಗಳ ಎತ್ತರದ ಶಿಖರಗಳನ್ನು ಆಕ್ರಮಿಸಿ ವಶಪಡಿಸಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಆಪರೇಷನ್ ವಿಜಯ್ ಎಂಬ ಹೆಸರಿನಲ್ಲಿ ಸೇನಾ ಕಾರ್ಯಾಚರಣೆಯನ್ನು ನಡೆಸಿದರೆ ಭಾರತೀಯ ವಾಯುಪಡೆಯು ಆಪರೇಷನ್ ಸಫೇದ್ ಸಾಗರ್ ಮೂಲಕ ಸೇನೆಗೆ ಬೆಂಬಲ ನೀಡಿತು.

ಸುಮಾರು ಎರಡು ತಿಂಗಳು ನಡೆದ ತೀವ್ರ ಹೋರಾಟದ ಬಳಿಕ ೧೯೯೯ರ ಜುಲೈ ೨೬ ರಂದು ಭಾರತೀಯ ಸೇನೆ ಶತ್ರುಗಳನ್ನು ಹಿಮ್ಮೆಟ್ಟಿಸಿ ಎಲ್ಲಾ ಪ್ರಮುಖ ಶಿಖರಗಳನ್ನು ಮರಳಿ ತನ್ನ ವಶಕ್ಕೆ ಪಡೆದುಕೊಂಡಿತು. ಈ ವಿಜಯದ ನೆನಪಿಗಾಗಿ ಪ್ರತಿ ವರ್ಷ ಜುಲೈ ೨೬ ರಂದು ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಗುತ್ತದೆ.

ಕಾರ್ಗಿಲ್ ಯುದ್ಧದಲ್ಲಿ ಭಾರತದ ಅನೇಕ ಯೋಧರು ಹುತಾತ್ಮರಾದರೆ ಅನೇಕರು ಗಾಯಗೊಂಡಿದ್ದರು. ಪ್ರತಿಕೂಲ ಹವಾಮಾನ, ಎತ್ತರದ ಪರ್ವತಗಳು ಹಾಗೂ ಶತ್ರುಗಳ ಗುಂಡಿನ ದಾಳಿಯನ್ನು ಲೆಕ್ಕಿಸದೇ ಭಾರತೀಯ ಯೋಧರು ತೋರಿದ ಸಾಹಸ ಇಂದಿಗೂ ದೇಶಕ್ಕೆ ಸ್ಪೂರ್ತಿಯಾಗಿದೆ.

ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ದೇಶಾದ್ಯಂತ ಹುತಾತ್ಮ ಯೋಧರಿಗೆ ಪುಷ್ಪ ನಮನ ಸಲ್ಲಿಸಲಾಗುತ್ತದೆ. ಮಾಜಿ ಸೈನಿಕರನ್ನು ಸನ್ಮಾನಿಸುವ ಮೂಲಕ ಯುವಜನರಲ್ಲಿ ದೇಶ ಸೇವೆಯ ಮನೋಭಾವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಕೊಡಗಿನ ಯೋಧ ಸುಬೇದಾರ್ ಸಿಂಗೂರು ಮೇದಪ್ಪ ಅವರ ಪಾರ್ಥಿವ ಶರೀರ ಜಿಲ್ಲೆಗೆ ಆಗಮಿಸಿದಾಗ ಕೇಂದ್ರ ಸರ್ಕಾರದ ಮಾಜಿ ರಾಜ್ಯ ಹಣಕಾಸು ಸಚಿವರಾದ ದಿ. ಧನಂಜಯ ಕುಮಾರ್, ಮಾಜಿ ಸಚಿವ ಅಪ್ಪಚ್ಚು ರಂಜನ್, ಕೊಡಗು ಜಿಲ್ಲಾಡಳಿತ ಸಕಲ ಸೇನಾ ಗೌರವಗಳೊಂದಿಗೆ ಸ್ವಗೃಹ ಐಗೂರಿನಲ್ಲಿ ಅಂತಿಮ ನಮನ ಸಲ್ಲಿಸಲಾಗಿತ್ತು.

ಕಾರ್ಗಿಲ್ ವಿಜಯೋತ್ಸವವು ಕೇವಲ ಒಂದು ದಿನದ ಆಚರಣೆಯಲ್ಲ, ದೇಶದ ಗಡಿಯನ್ನು ಕಾಪಾಡಲು ತಮ್ಮ ಜೀವವನ್ನೇ ಅರ್ಪಿಸಿದ ವೀರಯೋಧರ ತ್ಯಾಗ, ಧೈರ್ಯ ಮತ್ತು ದೇಶಪ್ರೇಮವನ್ನು ಸದಾ ಸ್ಮರಿಸುವ ರಾಷ್ಟಿçÃಯ ಗೌರವದ ದಿನವಾಗಿದೆ.

- ಸುಕುಮಾರ್ ಐಗೂರು.