ದೇಶದ ಗಡಿಯಲ್ಲಿ ದಿಟ್ಟವಾಗಿ ನಿಂತ ಸೈನಿಕನ ತ್ಯಾಗವೇ ದೇಶದೊಳಗಿನ ಜನರ ನೆಮ್ಮದಿಯ ಬದುಕಿನ ಭದ್ರ ಬುನಾದಿ. ನಾವು ಇಲ್ಲಿ ಪ್ರತಿನಿತ್ಯವೂ ನಿರಾತಂಕವಾಗಿ ಬದುಕುತ್ತಿದ್ದೇವೆ ಎಂದರೆ ಅದರ ಹಿಂದೆ ಸಾವಿರಾರು ಸೈನಿಕರ ತ್ಯಾಗ, ಬೆವರು, ಪರಿಶ್ರಮ ಮತ್ತು ಬಲಿದಾನ ಅಡಗಿದೆ.

ಒಬ್ಬ ಸೈನಿಕನ ಕಾಯಕದ ಜೀವನವನ್ನು ಕೇವಲ ಅದು ಅವನ ಉದ್ಯೋಗ ಎಂದು ಕರೆಯಲು ಸಾಧ್ಯವಿಲ್ಲ, ಅದು ದೇಶಸೇವೆಯ ಶ್ರೇಷ್ಠ ಕೆಲಸ. ಸೇವಾ ಮನೋಭಾವ ಹೊಂದಿದವರು ಮಾತ್ರವೇ ಸೈನಿಕರಾಗಲು ಸಾಧ್ಯ, ನಾವು ಇಲ್ಲಿ ಕುಟುಂಬದೊAದಿಗೆ ಹಬ್ಬ ಆಚರಿಸುತ್ತಿರುವಾಗ, ಅವರು ಗಡಿಯಲ್ಲಿ ಬಂದೂಕು ಹಿಡಿದು ಶತ್ರುಗಳಿಗೆ ಎದೆಕೊಟ್ಟು ನಿಂತಿರುತ್ತಾರೆ. ನಾವು ಇಲ್ಲಿ ರಾತ್ರಿ ಕನಸು ಕಾಣುತ್ತ ನೆಮ್ಮದಿಯಿಂದ ನಿದ್ರಿಸುತ್ತಿರುವಾಗ, ಅವರು ಗಡಿಯಲ್ಲಿ ರಾಷ್ಟçದ ಭದ್ರತೆಗಾಗಿ ಕಣ್ಣು ಮುಚ್ಚದೆ ಚಳಿ ಮಳೆಯೆನ್ನದೆ ಕಾವಲು ಕಾಯುತ್ತಿರುತ್ತಾರೆ. ದೇಶದ ಗಡಿಗಳನ್ನು ಕಾಪಾಡುವ ಪ್ರತಿ ಯೋಧರು ತಮ್ಮ ಕುಟುಂಬ, ಸುಖ, ಸಂತೋಷ, ನಿದ್ರೆ, ಊಟ, ಉಪಚಾರ ಅಷ್ಟೇ ಏಕೆ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ದೇಶಕ್ಕೆ ಭದ್ರತೆ ಕೊಟ್ಟಿರುತ್ತಾರೆ, ಅಂತಹ ಸಾವಿರಾರು ಅಮರ ಯೋಧರು ತಮ್ಮ ತ್ಯಾಗ ಸಾಹಸಗಾಥೆಯ ಮೂಲಕ ದೇಶದ ಹೆಮ್ಮೆಯ ಪುತ್ರರಾಗಿ ಯುದ್ಧದಲ್ಲಿ ಶತ್ರುಗಳೊಡನೆ ಹೋರಾಡುವಾಗ ‘ವೀರ ಮರಣ'ವನ್ನು ಅಪ್ಪುತ್ತಾರೆ. ಯುದ್ಧದ ಸಂದರ್ಭದಲ್ಲಿ ಸೈನಿಕನಿಕರಿಗೆ ತಮ್ಮ ಪ್ರಾಣಕ್ಕಿಂತ ದೇಶವೇ ದೊಡ್ಡದಾಗಿ ಕಾಣುತ್ತದೆ, ತಮ್ಮ ತಮ್ಮ ಕುಟುಂಬಕ್ಕಿAತ ಮಾತೃಭೂಮಿಯೇ ಮುಖ್ಯವಾಗಿ ಕಾಣುತ್ತದೆ, ಆದ್ದರಿಂದಲೇ ಅವರು ಮರಣದ ಸುಳಿಯಲ್ಲಿ ದೇಶವೇ ಮುಖ್ಯವೆಂದು ಗುಂಡಿನ ದಾಳಿಯ ನಡುವೆಯೂ ತಮ್ಮ ಗುಂಡಿಗೆಯನ್ನು ಕೊಟ್ಟು ನಿಲ್ಲುತ್ತಾರೆ. ಹಿಮಗಡ್ಡೆಗಳೇ ಇರಲಿ, ಉರಿಯುವ ಮರುಭೂಮಿಯೇ ಇರಲಿ, ದಟ್ಟ ಕಾಡುಗಳಲ್ಲಿಯೇ ಇರಲಿ ದೇಶದ ರಕ್ಷಣೆಯ ಪ್ರಶ್ನೆ ಬಂದಾಗ ಅವರ ಹೆಜ್ಜೆ ಎಂದಿಗೂ ಹಿಂದೆ ಸರಿಯುವುದಿಲ್ಲ. ಇಂಥಹ ಸವಾಲಿನ ಸನ್ನಿವೇಶಕ್ಕೆ ಪ್ರತ್ಯಕ್ಷ ಸಾಕ್ಷಿ ಈ ಕಾರ್ಗಿಲ್ ಯುದ್ಧ, ಈ ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನು ಹೊಂದಿದ ಆ ವೀರರ ನೆನಪಿಸಿಕೊಳ್ಳುವ ದಿನವೇ ‘ಕಾರ್ಗಿಲ್ ವಿಜಯ ದಿವಸ.' ಯುದ್ಧ ನೆಡೆಯಲು ಮುಖ್ಯ ಕಾರಣ ಪಾಕಿಸ್ತಾನದ ಮೋಸದಾಟ. ಕಾರ್ಗಿಲ್ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ಲೈನ್ ಆಫ್ ಕಂಟ್ರೋಲ್ (ಎಲ್‌ಒಸಿ) ಇದೆ. ಸಮುದ್ರ ಮಟ್ಟದಿಂದ ಸಾವಿರಾರು ಅಡಿ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಚಳಿಗಾಲದ ಸಂದರ್ಭದಲ್ಲಿ ತಾಪಮಾನವು ಮೈನಸ್ ಡಿಗ್ರಿಗೆ ಇಳಿಯುವುದರಿಂದ ಅಲ್ಲಿನ ಪರಿಸ್ಥಿತಿಗಳು ಅತ್ಯಂತ ಕಠಿಣವಾಗಿರುತ್ತವೆ. ಆದ್ದರಿಂದ ಇಲ್ಲಿ ಗಡಿ ಕಾಯುವುದು ಸೈನಿಕರಿಗೆ ಸವಾಲಿನ ಕೆಲಸವಾಗಿರುತ್ತದೆ, ಹಾಗಾಗಿ ಚಳಿಗಾಲದಲ್ಲಿ ಭಾರತೀಯ ಮತ್ತು ಪಾಕ್ ಎರಡೂ ದೇಶದ ಸೈನಿಕರು ಇಲ್ಲಿಂದ ಸ್ಥಳಾಂತರಗೊಳ್ಳುತ್ತಾರೆ.

ಚಳಿಗಾಲ ಮುಗಿದ ಬಳಿಕ ಮತ್ತೆ ಗಡಿಯನ್ನು ಕಾಯವುದಕ್ಕೆ ಸೈನಿಕರು ಇಲ್ಲಿಗೆ ಹೋಗುವುದು ಬಹು ಹಿಂದಿನಿAದ ನಡೆದುಕೊಂಡು ಬಂದ ಪದ್ಧತಿಯಾಗಿರುತ್ತದೆ, ಆದರೆ ೧೯೯೯ ರಲ್ಲಿ ಈ ಸಂದರ್ಭವನ್ನೇ ಬಳಸಿಕೊಂಡ ಪಾಕಿಸ್ತಾನ, ಭಾರತದ ಸೈನಿಕರು ಇಲ್ಲದ್ದರಿಂದ ಭಾರತದ ಪ್ರಮುಖ ಭಾಗಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತು. ಇದು ಪಾಕಿಸ್ತಾನದ ಕುತಂತ್ರ ಮತ್ತು ವಿಶ್ವಾಸಘಾತಕ ನಡೆಗೆ ಸಾಕ್ಷಿ ಆಗಿತ್ತು. ಆರಂಭದಲ್ಲಿ ಪಾಕಿಸ್ತಾನದ ಒಳನುಸುಳುವಿಕೆ ತುಂಬಾ ದೂರ ಕ್ರಮಿಸಿದ್ದರೂ ಭಾರತೀಯ ಸೇನೆಯ ಗಮನಕ್ಕೆ ಬಂದಿರಲಿಲ್ಲ. ಒಂದು ದಿವಸ ಕಾರ್ಗಿಲ್ ಪರ್ವತ ಪ್ರದೇಶಗಳಲ್ಲಿ ಕುರಿ ಮೇಯಿಸುತ್ತಿದ್ದ ಕೆಲವು ಸ್ಥಳೀಯ ಕುರಿಗಾಹಿಗಳು ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳನ್ನು ಗಮನಿಸಿ, ಈ ಮಾಹಿತಿಯನ್ನು ಭಾರತೀಯ ಸೇನೆಗೆ ತಿಳಿಸಿದರು. ಅವರ ಮಾಹಿತಿ ಆದರಿಸಿ ಪರಿಸ್ಥಿತಿಯನ್ನು ಪರಿಶೀಲಿಸಲು ಭಾರತೀಯ ಸೇನೆ ಗಸ್ತು ತಂಡವೊAದನ್ನು ಕಳುಹಿಸಿತು. ಆದರೆ ಆಗಲೇ ಆಕ್ರಮಣ ಮಾಡಬೇಕೆಂಬ ಉದ್ದೇಶದಿಂದಲೇ ನೆಲೆಸಿದ್ದ ಪಾಕಿಸ್ತಾನಿ ಸೈನಿಕರು ಭಾರತೀಯ ಯೋಧರ ಮೇಲೆ ದಾಳಿ ನಡೆಸಿದರು. ಆ ಸಂದರ್ಭದಲ್ಲಿ ಗಡಿಯನ್ನು ಕಾಪಾಡಲು ತೆರಳಿದ್ದ ಕೆಲವು ಭಾರತೀಯ ಯೋಧರು ಪಾಕಿಸ್ತಾನಿ ಶತ್ರುಗಳ ಗುಂಡಿನ ಕ್ರೌರ್ಯಕ್ಕೆ ಬಲಿಯಾಗಿ ಹುತಾತ್ಮರಾದರು. ಈ ಘಟನೆ ಭಾರತದ ಮುಂದೆ ಪಾಕಿಸ್ತಾನದ ನಿಜವಾದ ಕುತಂತ್ರವನ್ನು ಬಯಲಿಗೆಳೆದಿತು. ಈ ಕೃತ್ಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಭಾರತ, ತನ್ನ ಭೂಭಾಗವನ್ನು ಮರಳಿ ವಶಪಡಿಸಿಕೊಳ್ಳಲು ಹಾಗೂ ಶತ್ರುಗಳನ್ನು ಹಿಮ್ಮೆಟ್ಟಿಸಲು ಪಣತೊಟ್ಟಿತು. ದೇಶದ ಸಾರ್ವಭೌಮತ್ವವನ್ನು ರಕ್ಷಿಸುವ ಉದ್ದೇಶದಿಂದ ಸಾವಿರಾರು ಸೈನಿಕರನ್ನು ಸಜ್ಜುಗೊಳಿಸಿ, ೧೯೯೯ರ ಮೇ ತಿಂಗಳಲ್ಲಿ "ಆಪರೇಷನ್ ವಿಜಯ್" ಎಂಬ ಮಹತ್ವದ ಸೇನಾ ಕಾರ್ಯಾಚರಣೆಗೆ ಚಾಲನೆ ನೀಡಿತು. ಈ ಕಾರ್ಯಾಚರಣೆಯ ಮೂಲಕ ಭಾರತೀಯ ಸೇನೆ ಅಸಾಧಾರಣ ಶೌರ್ಯ ಪ್ರದರ್ಶಿಸಿ ಗೆದ್ದು ಕಾರ್ಗಿಲ್ ವಿಜಯದ ಇತಿಹಾಸವನ್ನು ಗರ್ವದಿಂದ ಬರೆಯಿತು. ಬಹಳ ನೋನಿನ ವಿಷಯವೆಂದರೆ ಈ ಕಾರ್ಗಿಲ್ ಯುದ್ಧದಲ್ಲಿ ೫೨೭ಕ್ಕೂ ಹೆಚ್ಚು ಭಾರತೀಯ ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದರು. ಕ್ಯಾಪ್ಟನ್ ವಿಕ್ರಂ ಬಾತ್ರಾ, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್, ರೈಫಲ್ಮನ್ ಸಂಜಯ್ ಕುಮಾರ್ ಸೇರಿದಂತೆ ಅನೇಕ ವೀರ ಯೋಧರು ತಮ್ಮ ಅದ್ವಿತೀಯ ಸಾಹಸದಿಂದ ದೇಶದ ಹೆಮ್ಮೆಯಾಗಿ ಉಳಿದರು.

"ಯೇ ದಿಲ್ ಮಾಂಗೆ ಮೋರ್" ಎಂಬ ಕ್ಯಾಪ್ಟನ್ ವಿಕ್ರಂ ಬಾತ್ರಾ ಅವರ ಮಾತು ಇಂದಿಗೂ ಭಾರತೀಯರ ಹೃದಯದಲ್ಲಿ ದೇಶಭಕ್ತಿಯ ಜ್ವಾಲೆಯನ್ನು ಹೊತ್ತಿಸುತ್ತದೆ. ಅವರಂತಹ ಅಮರ ಯೋಧರ ಬಲಿದಾನವೇ ಭಾರತದ ಯಶಸ್ಸು ಸ್ವಾತಂತ್ರ‍್ಯ ಮತ್ತು ಸಾರ್ವಭೌಮತ್ವವನ್ನು ಕಾಪಾಡಿದೆ. ಕಾರ್ಗಿಲ್ ವಿಜಯ ದಿವಸದ ಮಹತ್ವವೇನೆಂದರೆ ಕಾರ್ಗಿಲ್ ವಿಜಯ ದಿವಸವು ಕೇವಲ ವಿಜಯೋತ್ಸವವಲ್ಲ. ಇದು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರನ್ನು ಸ್ಮರಿಸುವ ದಿನವಾಗಿ ಇಂದಿನ ಯುವಜನತೆಗೆ ಸಾವಿರ ಸಾವಿರ ಪಾಠ ಕಲಿಸುತ್ತದೆ ಏಕತೆ, ಧೈರ್ಯ ಮತ್ತು ದೇಶಪ್ರೇಮದ ಮಹತ್ವವನ್ನು ತಿಳಿಸುತ್ತದೆ. ರಾಷ್ಟçದ ಹಿತಾಸಕ್ತಿಗಾಗಿ ಸ್ವಾರ್ಥವನ್ನು ಬದಿಗೊತ್ತಿ ಕಾರ್ಯನಿರ್ವಹಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂಬ ಪಾಠವನ್ನು ಕಲಿಸುತ್ತದೆ. ಕಾರ್ಗಿಲ್ ವಿಜಯ ದಿವಸವು ಭಾರತದ ಇತಿಹಾಸದಲ್ಲಿ ಚಿನ್ನದ ಅಕ್ಷರಗಳಲ್ಲಿ ಬರೆದಿರುವ ಹೆಮ್ಮೆಯ ಅಧ್ಯಾಯವಾಗಿದೆ. ಹಿಮಶಿಖರಗಳ ಮೇಲೆ ತಮ್ಮ ರಕ್ತವನ್ನು ಚೆಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ಅಮರ ವೀರರ ತ್ಯಾಗವನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಅವರ ಬಲಿದಾನದಿಂದಲೇ ಇಂದು ನಾವು ಸ್ವತಂತ್ರವಾಗಿ, ಸುರಕ್ಷಿತವಾಗಿ ಬದುಕುತ್ತಿದ್ದೇವೆ. ಈ ದಿನ ದೇಶದಾದ್ಯಂತ ಶಾಲಾ, ಕಾಲೇಜುಗಳು, ಸರ್ಕಾರಿ ಸಂಸ್ಥೆಗಳು ಹಾಗೂ ಸೇನಾ ಕೇಂದ್ರಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಯೋಧರಿಗೆ ಗೌರವ ಸಲ್ಲಿಸಲಾಗುತ್ತದೆ. ಈ ದಿನವು ಯುವಜನತೆಗೆ ದೇಶಭಕ್ತಿ, ಕರ್ತವ್ಯನಿಷ್ಠೆ ಮತ್ತು ರಾಷ್ಟçಪ್ರೇಮದ ಸಂದೇಶವನ್ನು ಸಾರುತ್ತದೆ. ದೇಶವನ್ನು ಕಾಪಾಡಲು ಸೈನಿಕರು ಎದುರಿಸುವ ಕಷ್ಟಗಳನ್ನು ಅರಿಯುವ ಅವಕಾಶವನ್ನು ನೀಡುತ್ತದೆ.

ಸೈನಿಕರು ಕೇವಲ ಗಡಿಯನ್ನು ಕಾಯುವವರಲ್ಲ, ಅವರು ದೇಶದ ಗೌರವ, ಸ್ವಾಭಿಮಾನ ಮತ್ತು ಸ್ವಾತಂತ್ರ‍್ಯದ ರಕ್ಷಕರು. ಅವರ ತ್ಯಾಗದ ಮುಂದೆ ನಾವು ಎಷ್ಟೇ ತಲೆಬಾಗಿದರೂ ಅದು ಕಡಿಮೆಯೇ. ಗಡಿಯಲ್ಲಿ ಯೋಧರ ಕಣ್ಣು ತೆರೆದಿರುವವರೆಗೆ ದೇಶದ ತಲೆ ಎಂದಿಗೂ ತಗ್ಗುವುದಿಲ್ಲ, ಕಾರ್ಗಿಲ್ ವಿಜಯವು ಕೇವಲ ಯುದ್ಧದ ಗೆಲುವಲ್ಲ, ಅದು ಭಾರತೀಯ ಸೈನಿಕನ ತ್ಯಾಗ ಹಾಗೂ ಧೈರ್ಯದ ಪ್ರತೀಕ, ರಕ್ತದಲ್ಲಿ ಬರೆದ ದೇಶಪ್ರೇಮ ಮತ್ತು ತ್ರಿವರ್ಣಧ್ವಜದ ಅಜರಾಮರ ವಿಜಯಗಾಥೆಯಾಗಿದೆ.

ಒಬ್ಬೊಬ್ಬ ಸೈನಿಕನ ಸಮಾಧಿಯ ಮೇಲಿರುವ ಮಣ್ಣಿನ ಕಣ ಕಣವೂ ಹೇಳುತ್ತದೆ ನಾನು ನನ್ನ ದೇಶಕ್ಕಾಗಿ ನನ್ನ ಜೀವವನ್ನೇ ಕೊಟ್ಟ ಹೆಮ್ಮೆಯ ವೀರನ ನೆನಪು ಎಂದು. ‘ನಿಮ್ಮ ಜೀವ ಕೊಟ್ಟು ನಮ್ಮನ್ನು ರಕ್ಷಿಸಿದ ನಮ್ಮ ಹೆಮ್ಮೆಯ ವೀರ ಯೋಧರೇ ನಿಮಗೆಲ್ಲ ಸಾವಿರ ಸಾವಿರ ನಮನಗಳು.'!!! ಜೈ ಹಿಂದ್

- ಗೀತಾಂಜಲಿ ಎನ್.ಎಂ., ಸೋಮವಾರಪೇಟೆ.