"ಒಂದು ತಾಯಿಯ ಗರ್ಭದಲ್ಲಿ ಹುಟ್ಟಿದ ಮಗ... ಒಂದು ಹೆಣ್ಣಿನ ಕನಸಾಗಿ ಬದುಕಿದ ಗಂಡ... ಒಂದು ಪುಟ್ಟ ಮಗುವಿನ ಹೆಮ್ಮೆಯ ತಂದೆ... ಒಂದು ವೃದ್ಧ ತಂದೆಯ ಆಸರೆ... ಆದರೆ ಯುದ್ಧ ಶುರುವಾದ ಕ್ಷಣದಿಂದ... ಅವನು ಇವರ ಯಾರೊಬ್ಬರದ್ದೂ ಅಲ್ಲ... ಇಡೀ ಭಾರತದವನಾಗಿಬಿಟ್ಟ." ಜುಲೈ... ೧೯೯೯... ಆಕಾಶ ಪೂರ ಬಿಳಿಯಾಗಿತ್ತು. ಭೂಮಿಯೂ ಬಿಳಿಯಾಗಿತ್ತು. ಉಸಿರಾಡಿದರೆ ಉಸಿರೇ ಹಿಮವಾಗುವಷ್ಟು ಚಳಿ. ಆ ಮೌನವನ್ನು ಛಿದ್ರಗೊಳಿಸುತ್ತಿದ್ದದ್ದು ಗುಂಡಿನ ಸದ್ದು... ಬಾಂಬ್‌ಗಳ ಸ್ಫೋಟ... ಮತ್ತು "ಭಾರತ್ ಮಾತಾ ಕೀ ಜೈ" ಎಂಬ ಘೋಷಣೆ. ಪ್ರಪಂಚ ನಿದ್ರಿಸುತ್ತಿದ್ದ ಆ ಮಧ್ಯರಾತ್ರಿಯಲ್ಲಿ... ಕೆಲವರು ತಮ್ಮ ಕೊನೆಯ ಉಸಿರನ್ನು ದೇಶದ ಹೆಸರಿಗೆ ಅರ್ಪಿಸುತ್ತಿದ್ದರು. ಅವರಲ್ಲಿ ಒಬ್ಬ... ಕ್ಯಾಪ್ಟನ್ ಆರ್ಯನ್.

ಅವನು ಯಾವ ಊರಿನವನು ಎಂಬುದು ಮುಖ್ಯವಲ್ಲ. ಅವನು ಯಾವ ಭಾಷೆ ಮಾತನಾಡುತ್ತಿದ್ದ ಎಂಬುದೂ ಮುಖ್ಯವಲ್ಲ. ಏಕೆಂದರೆ ಅವನ ರಕ್ತದ ಬಣ್ಣ ಎಲ್ಲ ಭಾರತೀಯರಂತೆಯೇ ಕೆಂಪಾಗಿತ್ತು... ಅವನ ಎದೆಯೊಳಗೆ ಬಡಿದ ಹೃದಯದ ಒಂದೇ ಹೆಸರು... "ಭಾರತ." ಯುದ್ಧಕ್ಕೆ ಹೊರಡುವ ಹಿಂದಿನ ರಾತ್ರಿ. ಮನೆಯಲ್ಲಿ ಯಾರಿಗೂ ನಿದ್ರೆ ಬಂದಿರಲಿಲ್ಲ. ತಾಯಿ ದೇವರ ಮುಂದೆ ದೀಪ ಹಚ್ಚಿಕೊಂಡು ಕುಳಿತಿದ್ದಳು. ತಂದೆ ಹೊರಗಡೆ ಆಕಾಶ ನೋಡುತ್ತಾ ಮೌನವಾಗಿ ನಿಂತಿದ್ದರು. ಪತ್ನಿ ತನ್ನ ಗಂಡನ ಸಮವಸ್ತçವನ್ನು ಮಡಚಿ ಹಿಡಿದುಕೊಂಡಿದ್ದಳು. ನಾಲ್ಕು ವರ್ಷದ ಪುಟ್ಟ ಮಗ ಮಾತ್ರ ಏನೂ ಅರಿಯದೆ ಕೇಳಿದ... "ಅಪ್ಪಾ... ನೀನು ಯಾವಾಗ ಬರ್ತೀಯಾ...?" ಆರ್ಯನ್ ಮಗನನ್ನು ಎತ್ತಿಕೊಂಡ. ಅವನ ಪುಟ್ಟ ಕೈಗಳು ತಂದೆಯ ಮುಖವನ್ನು ಮುಟ್ಟಿದವು. "ಏನು ಬೇಕು ಅಪ್ಪ ಬಂದಾಗ...?" "ನನಗೆ ಆಟದ ಬಂದೂಕು ಬೇಡ ಅಪ್ಪಾ..." "ಹಾಗಾದರೆ...?" "ನೀನೇ ಸಾಕು..." ಆ ಒಂದು ಮಾತು... ಯಾವ ಗುಂಡಿಗಿAತಲೂ ಆಳವಾಗಿ ಆರ್ಯನ್‌ನ ಹೃದಯವನ್ನು ತಿವಿಯಿತು. ಅವನು ಮಗನನ್ನು ಬಿಗಿಯಾಗಿ ತಬ್ಬಿಕೊಂಡ. ಮುಖ ತಿರುಗಿಸಿಕೊಂಡ. ಏಕೆಂದರೆ... ಸೈನಿಕ ಅಳಬಹುದು... ಆದರೆ ತನ್ನ ಕುಟುಂಬದ ಮುಂದೆ ಅಲ್ಲ. ಅವನ ಕಣ್ಣಂಚಿನಲ್ಲಿದ್ದ ಒಂದೇ ಒಂದು ಕಣ್ಣೀರಿನ ಹನಿ ಕೆಳಗೆ ಬಿತ್ತು. ಅದನ್ನು ಯಾರೂ ನೋಡಲಿಲ್ಲ... ಆದರೆ ಆ ಕಣ್ಣೀರಿನ ತೂಕವನ್ನು ಅವನ ಹೃದಯ ಮಾತ್ರ ಅರಿತುಕೊಂಡಿತ್ತು. ಅಷ್ಟರಲ್ಲಿ ತಾಯಿ ನಿಧಾನವಾಗಿ ಹತ್ತಿರ ಬಂದಳು. "ಮಗಾ..." "ಹೇಳಮ್ಮಾ..." "ಒಂದು ಮಾತು ಕೇಳ್ತೀಯಾ...?" "ನೀನು ಹೇಳಿದ್ದು ನಾನು ಕೇಳದೇ ಇರುವ ದಿನ ಇದೆಯಾ...?" ತಾಯಿಯ ಕೈ ನಡುಗುತ್ತಿತ್ತು. "ನನ್ನ ಮಗ ಜೀವಂತವಾಗಿ ಬಂದರೆ ನನ್ನ ಮಡಿಲಿಗೆ ಬಾ..." ಒಂದು ಕ್ಷಣ ನಿಂತಳು... "ಆದರೆ... ದೇಶಕ್ಕಾಗಿ ಸಾಯಬೇಕಾದರೆ... ಬೆನ್ನು ತೋರಿಸಿ ಸಾಯಬೇಡ... ಎದೆಕೊಟ್ಟು ನಿಲ್ಲು..." ಮನೆಯೊಳಗೆ ಮೌನ ಆವರಿಸಿತು. ತಂದೆ ಮೊದಲ ಬಾರಿಗೆ ಮಾತನಾಡಿದರು. "ನಿನ್ನ ತಾಯಿ ಹೇಳಿದ್ದು ಕಠಿಣ ಮಾತು... ಆದರೆ ಅದೇ ನಮ್ಮ ಮನೆಯ ಸಂಸ್ಕಾರ." ಆರ್ಯನ್ ಇಬ್ಬರ ಪಾದಗಳಿಗೆ ನಮಸ್ಕರಿಸಿದ. "ನಾನು ವಾಪಸ್ ಬಂದರೆ ನಿಮ್ಮ ಮಗನಾಗಿ ಬರುತ್ತೇನೆ... ಬರದಿದ್ದರೆ... ಈ ತ್ರಿವರ್ಣ ಧ್ವಜದಲ್ಲಿ ಸುತ್ತಿಕೊಂಡು ಬರುತ್ತೇನೆ... ಆ ದಿನ... ಅಳಬೇಡಿ... ‘ನಮ್ಮ ಮಗ ಸೋತಿಲ್ಲ... ದೇಶ ಗೆದ್ದಿದೆ' ಎಂದು ಹೇಳಿ..." ಆ ಮಾತು ಕೇಳುತ್ತಿದ್ದಂತೆ... ತಾಯಿ ಮುಖವನ್ನು ತಿರುಗಿಸಿಕೊಂಡಳು. ಪತ್ನಿ ತನ್ನ ಅಳುವನ್ನು ಸೀರೆಯ ಸೆರಗಿನಲ್ಲಿ ಮುಚ್ಚಿಕೊಂಡಳು. ಪುಟ್ಟ ಮಗ ಮಾತ್ರ ಇನ್ನೂ ನಗುತ್ತಿದ್ದ... ಏಕೆಂದರೆ... ಅವನಿಗೆ ಇನ್ನೂ ‘ದೇಶಕ್ಕಾಗಿ ಹೋಗುವುದು' ಎಂದರೆ ‘ಮತ್ತೆ ಮನೆಗೆ ಬರದೇ ಹೋಗುವುದೂ ಆಗಬಹುದು' ಎಂಬ ಅರ್ಥ ತಿಳಿದಿರಲಿಲ್ಲ... ಅದೇ... ಒಂದು ಸೈನಿಕನ ಮನೆಯ ಅತಿ ದೊಡ್ಡ ದುಃಖ. ಆ ಬೆಳಿಗ್ಗೆ... ಸೂರ್ಯ ಇನ್ನೂ ಸಂಪೂರ್ಣವಾಗಿ ಉದಯಿಸಿರಲಿಲ್ಲ.

ಮನೆಯ ಅಂಗಳದಲ್ಲಿ ವಿಚಿತ್ರವಾದ ಮೌನವಿತ್ತು. ಸಾಮಾನ್ಯವಾಗಿ ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತಿದ್ದ ಆ ಮನೆ, ಆ ದಿನ ಉಸಿರನ್ನೇ ಹಿಡಿದು ನಿಂತAತೆ ಕಾಣುತ್ತಿತ್ತು. ಆರ್ಯನ್ ತನ್ನ ಸೇನಾ ಸಮವಸ್ತçವನ್ನು ಧರಿಸಿದ. ಎದೆಯ ಮೇಲಿದ್ದ ಭಾರತದ ಲಾಂಛನವನ್ನು ಒಂದು ಬಾರಿ ಕೈಯಿಂದ ಮುಟ್ಟಿ ಕಣ್ಣು ಮುಚ್ಚಿದ. ಅದು ಕೇವಲ ಸಮವಸ್ತçವಾಗಿರಲಿಲ್ಲ... ಅದು ಕೋಟ್ಯಾಂತರ ಭಾರತೀಯರ ನಂಬಿಕೆ. ತಾಯಿ ಅಡುಗೆ ಮನೆಯಿಂದ ಅವನಿಗೆ ಇಷ್ಟವಾದ ಊಟವನ್ನು ತಂದಳು. "ಮಗಾ... ಮೊದಲು ಊಟ ಮಾಡು..." ಆರ್ಯನ್ ತಟ್ಟೆಯ ಮುಂದೆ ಕುಳಿತ. ಆದರೆ ಒಂದು ತುತ್ತೂ ಗಂಟಲೊಳಗೆ ಇಳಿಯಲಿಲ್ಲ. ತಾಯಿ ಗಮನಿಸಿದಳು. "ಏನಾಯ್ತು...?" ಆರ್ಯನ್ ನಗಲು ಪ್ರಯತ್ನಿಸಿದ. "ಏನಿಲ್ಲ ಅಮ್ಮಾ... ಹೊಟ್ಟೆ ತುಂಬಿದೆ..." ತಾಯಿ ಮೃದುವಾಗಿ ಅವನ ತಲೆಯನ್ನು ಸವರಿದಳು. "ನೀನು ನನ್ನ ಮಗ... ನಿನ್ನ ಮುಖ ನೋಡಿದರೆ ನಿನ್ನ ಮನಸ್ಸು ಗೊತ್ತಾಗುತ್ತದೆ..." ಅಷ್ಟೇ... ಆರ್ಯನ್ ತಾಯಿಯ ಮಡಿಲಲ್ಲಿ ತಲೆ ಇಟ್ಟು ಮಲಗಿದ. ಚಿಕ್ಕವನಾಗಿದ್ದಾಗ ಮಲಗುತ್ತಿದ್ದ ಹಾಗೆ... ಕೆಲವೇ ಕ್ಷಣಗಳು... ಯಾವ ಮಾತೂ ಇರಲಿಲ್ಲ. ತಾಯಿಯ ಕೈ ಮಾತ್ರ ಅವನ ತಲೆಯ ಮೇಲೆ ಓಡಾಡುತ್ತಿತ್ತು. ಆ ಸ್ಪರ್ಶದಲ್ಲಿ ಸಾವಿರ ಆಶೀರ್ವಾದಗಳಿದ್ದವು. ತಂದೆ ಹೊರಗಡೆ ನಿಂತು ಆ ದೃಶ್ಯವನ್ನು ನೋಡುತ್ತಿದ್ದರು. ಅವರ ಕಣ್ಣಲ್ಲಿ ನೀರು ತುಂಬಿತ್ತು. ಆದರೆ... ಒಬ್ಬ ತಂದೆ ಅತ್ತರೆ ಮನೆಯೇ ಕುಸಿದು ಬೀಳುತ್ತದೆ ಎಂದು ಅವರು ಕಣ್ಣೀರನ್ನು ಒಳಗೇ ನುಂಗಿಕೊAಡರು. ಪತ್ನಿ ನಂದಿನಿ ಒಂದು ಚಿಕ್ಕ ಚೀಲವನ್ನು ಅವನ ಕೈಗೆ ಕೊಟ್ಟಳು. "ಇದರಲ್ಲಿ ಏನಿದೆ...?" "ನೋಡಬೇಡಿ... ಅಲ್ಲಿ ಹೋದ ಮೇಲೆ ತೆರೆಯಿರಿ..." ಆರ್ಯನ್ ನಗುತ್ತಾ ಚೀಲವನ್ನು ಬ್ಯಾಗ್‌ನಲ್ಲಿ ಇಟ್ಟ. ಹೊರಡುವ ಸಮಯ ಬಂತು. ಜೀಪಿನ ಹಾರ್ನ್ ಕೇಳಿಸಿತು. ಮನೆಯ ಮುಂದೆ ನಿಂತಿದ್ದ ವಾಹನ... ಆ ದಿನ ಅವರಿಗೆ ಅದು ಸಾಮಾನ್ಯ ವಾಹನವಾಗಿರಲಿಲ್ಲ. ತಮ್ಮ ಮನೆಯ ಸಂತೋಷವನ್ನು ಕರೆದೊಯ್ಯುವ ರಥದಂತಿತ್ತು. ಪುಟ್ಟ ಮಗ ಓಡುತ್ತಾ ಬಂದು ಕೇಳಿದ. "ಅಪ್ಪಾ... ನೀನು ಬೇಗ ಬರ್ತೀಯಲ್ಲಾ...?" ಆ ಪ್ರಶ್ನೆಗೆ ಉತ್ತರಿಸಲು ಆರ್ಯನ್‌ನ ತುಟಿಗಳು ನಡುಗಿದವು. ಅವನು ಮಗನನ್ನು ಬಿಗಿಯಾಗಿ ತಬ್ಬಿಕೊಂಡ. "ಬರುತ್ತೇನೆ ಕಂದಾ..." ಆ ಮಾತು ಅವನ ಬಾಯಿಂದ ಹೊರಬಂದರೂ... ಅವನ ಮನಸ್ಸು ಮಾತ್ರ ಮೌನವಾಗಿ ಕೇಳುತ್ತಿತ್ತು... "ನಿಜವಾಗಿಯೂ ನಾನು ಹಿಂದಿರುಗುವೆನಾ...?" ಜೀಪು ನಿಧಾನವಾಗಿ ಮುಂದೆ ಸಾಗತೊಡಗಿತು.

ತಾಯಿ ಕೈ ಬೀಸುತ್ತಿದ್ದಳು. ಪತ್ನಿ ನಗಲು ಪ್ರಯತ್ನಿಸುತ್ತಿದ್ದಳು. ತಂದೆ ಎದೆ ಬಿಗಿಯಾಗಿ ಹಿಡಿದು ನಿಂತಿದ್ದರು. ಪುಟ್ಟ ಮಗ ಮಾತ್ರ ಓಡುತ್ತಾ... "ಅಪ್ಪಾ... ಚಾಕೊಲೇಟ್ ತರೋದು ಮರೆಯಬೇಡ..." ಎಂದು ಕೂಗುತ್ತಿದ್ದ. ಜೀಪು ತಿರುವು ದಾಟಿತು. ಮನೆ ಕಾಣಿಸಲಿಲ್ಲ. ಆ ಕ್ಷಣದಲ್ಲಿ... ಆರ್ಯನ್ ಮೊದಲ ಬಾರಿಗೆ ತಲೆ ತಗ್ಗಿಸಿ ಮೌನವಾಗಿ ಅತ್ತ. ಯಾರೂ ನೋಡದಂತೆ... ಒಬ್ಬ ಸೈನಿಕನ ಕಣ್ಣೀರು ಅವನ ಹೃದಯದೊಳಗೇ ಸುರಿಯಿತು.... ಕೆಲವು ದಿನಗಳ ನಂತರ... ಕಾರ್ಗಿಲ್‌ನ ಹಿಮಾಚ್ಛಾದಿತ ಪರ್ವತ. ಕಡು ಚಳಿ. ಗಾಳಿಯೇ ಚೂರಿಯಂತೆ ಮುಖವನ್ನು ಕತ್ತರಿಸುತ್ತಿತ್ತು. ರಾತ್ರಿ ಪಾಳಿಯಲ್ಲಿದ್ದ ಆರ್ಯನ್ ತನ್ನ ಜಾಕೆಟ್‌ನೊಳಗಿದ್ದ ಆ ಚಿಕ್ಕ ಚೀಲವನ್ನು ತೆಗೆದ. ನಂದಿನಿ ಕೊಟ್ಟದ್ದೇ ಅದು. ನಿಧಾನವಾಗಿ ತೆರೆದ. ಒಳಗೆ... ಪುಟ್ಟ ಮಗ ಬರೆದಿದ್ದ ಒಂದು ಚಿತ್ರ. ಒಂದು ಮನೆ. ಅದರ ಮುಂದೆ ನಾಲ್ಕು ಜನ. ಅಮ್ಮ... ಅಪ್ಪ... ಅವನು ಮತ್ತು ಮಧ್ಯದಲ್ಲಿ ತ್ರಿವರ್ಣ ಧ್ವಜ. ಚಿತ್ರದ ಕೆಳಗೆ ತೊದಲು ಅಕ್ಷರಗಳಲ್ಲಿ ಬರೆದಿತ್ತು... "ಅಪ್ಪಾ... ಬೇಗ ಬಾ... ನಾನು ಕಾಯ್ತಾ ಇದ್ದೀನಿ..." ಆ ಒಂದು ಸಾಲು... ಗುಂಡಿಗಿAತಲೂ ಆಳವಾಗಿ ಅವನ ಹೃದಯವನ್ನು ಚುಚ್ಚಿತು. ಅವನು ಆ ಕಾಗದವನ್ನು ಎದೆಗೆ ಹತ್ತಿಸಿಕೊಂಡ. ಆಕಾಶದ ಕಡೆ ನೋಡಿದ. "ದೇವರೇ...ನನ್ನ ಜೀವ ಬೇಕಾದರೆ ತೆಗೆದುಕೋ... ಆದರೆ... ನನ್ನ ದೇಶದ ಧ್ವಜವನ್ನು ಮಾತ್ರ ತಗ್ಗಿಸಬೇಡ... ನನ್ನ ಕುಟುಂಬಕ್ಕೆ ನನ್ನ ಬಗ್ಗೆ ಹೆಮ್ಮೆಪಡುವ ಅವಕಾಶವನ್ನು ಕಸಿದುಕೊಳ್ಳಬೇಡ..." ಅಷ್ಟರಲ್ಲಿ ದೂರದಲ್ಲಿ... "ಸರ್... ಶತ್ರುಗಳು ಮುಂದೆ ಬರುತ್ತಿದ್ದಾರೆ..." ಎಂಬ ಕೂಗು ಕೇಳಿಸಿತು. ಆರ್ಯನ್ ಕಣ್ಣೀರನ್ನು ಒರೆಸಿಕೊಂಡ. ಒಂದೇ ಕ್ಷಣದಲ್ಲಿ... ಮತ್ತೆ ಅವನು ತಂದೆಯೂ ಅಲ್ಲ... ಗಂಡನೂ ಅಲ್ಲ... ಮಗನೂ ಅಲ್ಲ... ಭಾರತ ಮಾತೆಯ ಸೈನಿಕನಾಗಿಬಿಟ್ಟ ಗಡಿಯಾರದಲ್ಲಿ ಎರಡು ಗಂಟೆ. ಕಾರ್ಗಿಲ್‌ನ ಹಿಮದ ಪರ್ವತಗಳು ಬಿಳಿ ಹೊದಿಕೆ ಹೊದ್ದಿದ್ದವು. ಆದರೆ ಆ ಬಿಳಿ ಹಿಮದ ಕೆಳಗೆ... ಎಷ್ಟು ಕೆಂಪು ರಕ್ತ ಹರಿದಿತ್ತು ಎಂಬುದನ್ನು ಆ ಪರ್ವತಗಳೇ ಬಲ್ಲವು. ಆರ್ಯನ್ ತನ್ನ ಸಂಗಾತಿಗಳ ಜೊತೆ ಬಂಡೆಯ ಹಿಂದೆ ಕುಳಿತಿದ್ದ. ಯಾರೂ ಮಾತನಾಡುತ್ತಿರಲಿಲ್ಲ. ಮಾತನಾಡಿದರೆ ಉಸಿರಿನ ಶಬ್ದವೂ ಶತ್ರುವಿಗೆ ಕೇಳಿಸಬಹುದು. ಅಷ್ಟರಲ್ಲಿ ಅವನ ಪಕ್ಕದಲ್ಲಿದ್ದ ಒಬ್ಬ ಯುವ ಯೋಧ ನಿಧಾನವಾಗಿ ಕೇಳಿದ. "ಸರ್..." "ಹೇಳು..." "ನಿಮಗೆ ಮನೆಯ ನೆನಪು ಬರೋದಿಲ್ಲವೇ...?" ಆರ್ಯನ್ ಒಂದು ಕ್ಷಣ ಮೌನವಾಗಿದ್ದ. ನಂತರ ನಿಧಾನವಾಗಿ ಹೇಳಿದ... "ಪ್ರತಿ ಕ್ಷಣ ಬರುತ್ತದೆ..." "ಹಾಗಾದರೆ ಹೇಗೆ ಮರೆಯುತ್ತೀರಿ ಸರ್...?" ಆರ್ಯನ್ ಮಂದಹಾಸ ಬೀರಿದ. "ಮರೆಯುವುದಿಲ್ಲ... ಅದನ್ನೇ ನಮ್ಮ ಶಕ್ತಿಯನ್ನಾಗಿ ಮಾಡಿಕೊಳ್ಳುತ್ತೇವೆ. ನನ್ನ ತಾಯಿಯ ಕಣ್ಣೀರು ನನಗೆ ಹಿಂದೆ ಸರಿಯಲು ಬಿಡುವುದಿಲ್ಲ. ನನ್ನ ತಂದೆ ಮನದ ಹಿರಿಮೆ ನನ್ನ ಕಾಲುಗಳನ್ನು ಗಟ್ಟಿಯಾಗಿ ನಿಲ್ಲಿಸುತ್ತದೆ. ನನ್ನ ಹೆಂಡತಿಯ ನಂಬಿಕೆ ನನ್ನ ಕೈಗೆ ಬಲ ಕೊಡುತ್ತದೆ. ನನ್ನ ಮಗುವಿನ ಮುಖ ನೆನಪಾದಾಗ... ಈ ದೇಶದ ಪ್ರತಿಯೊಂದು ಮಗುವೂ ಸುರಕ್ಷಿತವಾಗಿ ನಗಬೇಕು ಎಂದು ಇನ್ನೂ ಧೈರ್ಯ ಬರುತ್ತದೆ." ಆ ಮಾತು ಕೇಳಿದ ಎಲ್ಲ ಯೋಧರೂ ಮೌನವಾಗಿ ತಲೆ ತಗ್ಗಿಸಿದರು. ಏಕೆಂದರೆ... ಅಲ್ಲಿ ಕುಳಿತಿದ್ದ ಪ್ರತಿಯೊಬ್ಬನ ಕಥೆಯೂ ಇದೇ ಆಗಿತ್ತು. ಯಾರಿಗೋ ಮದುವೆಯಾಗಿ ಮೂರು ತಿಂಗಳಷ್ಟೇ ಆಗಿತ್ತು. ಇನ್ನೊಬ್ಬನ ಹೆಂಡತಿ ಎಂಟು ತಿಂಗಳ ಗರ್ಭಿಣಿಯಾಗಿದ್ದಳು. ಮತ್ತೊಬ್ಬ ಯೋಧ ತನ್ನ ಮಗಳನ್ನು ಇನ್ನೂ ಒಮ್ಮೆಯೂ ನೋಡಿರಲಿಲ್ಲ. ಅವಳು ಹುಟ್ಟುವ ಮೊದಲೇ ಅವನು ಗಡಿಗೆ ಬಂದಿದ್ದ. ಆದರೂ... ಯಾರೂ ತಮ್ಮ ದುಃಖವನ್ನು ಹೇಳಿಕೊಳ್ಳಲಿಲ್ಲ. ಏಕೆಂದರೆ... ಒಬ್ಬ ಸೈನಿಕ ತನ್ನ ನೋವನ್ನು ದೇಶದ ಭದ್ರತೆಯ ಹಿಂದೆ ಮರೆಮಾಡಿಕೊಳ್ಳುವುದನ್ನು ಕಲಿತಿರುತ್ತಾನೆ. ಅಷ್ಟರಲ್ಲಿ ವೈರ್‌ಲೆಸ್ ಸೆಟ್‌ನಲ್ಲಿ ಸಂದೇಶ ಬಂತು. "ಎಲ್ಲರೂ ಗಮನಿಸಿ... ಶತ್ರುಗಳು ಎತ್ತರದ ಶಿಖರವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿದ್ದಾರೆ. ಬೆಳಗು ಮೂಡುವ ಮೊದಲು ಆ ಶಿಖರದಲ್ಲಿ ತ್ರಿವರ್ಣ ಧ್ವಜ ಹಾರಬೇಕು. ಇದು ಆದೇಶ." ಕೆಲವೇ ಕ್ಷಣಗಳು... ಎಲ್ಲರೂ ಒಬ್ಬರ ಮುಖವನ್ನು ಒಬ್ಬರು ನೋಡಿದರು. ಆ ಆದೇಶದ ಅರ್ಥ ಎಲ್ಲರಿಗೂ ಗೊತ್ತಿತ್ತು. ಆ ಶಿಖರವನ್ನು ತಲುಪುವುದು ಎಂದರೆ... ಸಾವಿನ ಕಣ್ಣಲ್ಲಿ ಕಣ್ಣು ಹಾಕಿ ನಡೆಯುವುದು. ಆರ್ಯನ್ ಎದ್ದುನಿಂತ. "ಸಹೋದರರೇ... ಇಂದು ನಮ್ಮಲ್ಲಿ ಯಾರಾದರೂ ಹಿಂದಿರುಗದೇ ಇರಬಹುದು.

ಆದರೆ ನೆನಪಿಡಿ... ನಮ್ಮ ಮನೆಗಳಲ್ಲಿ ನಮ್ಮನ್ನು ಕಾಯುತ್ತಿರುವವರು ಕೆಲವರು ಮಾತ್ರ. ಆದರೆ ನಮ್ಮ ಹಿಂದೆ ನಿಂತಿರುವುದು ನೂರನಲವತ್ತು ಕೋಟಿ ಭಾರತೀಯರು. ನಾವು ಬೀಳಬಹುದು... ಆದರೆ ತ್ರಿವರ್ಣ ಧ್ವಜ ಬೀಳಬಾರದು." "ಜೈ ಹಿಂದ್...!" ಎಲ್ಲರ ಧ್ವನಿಯೂ ಒಂದಾಗಿ ಮೊಳಗಿತು. ಅವರು ಹಿಮದ ಮೇಲೆ ನಿಧಾನವಾಗಿ ಹೆಜ್ಜೆ ಹಾಕತೊಡಗಿದರು. ಪ್ರತಿ ಹೆಜ್ಜೆಯೂ ಸಾವಿನತ್ತ ಹತ್ತಿರವಾಗುತ್ತಿತ್ತು. ಹಠಾತ್ತನೆ... ಟಟ್... ಟಟ್... ಟಟ್...! ಶತ್ರುಗಳ ಮೆಷಿನ್‌ಗನ್ ಗುಂಡುಗಳು ಮಳೆಯಂತೆ ಸುರಿಯತೊಡಗಿದವು.

ಒಬ್ಬ ಯೋಧ ಆರ್ಯನ್‌ನ ಕಣ್ಣೆದುರೇ ಎದೆಗೆ ಗುಂಡು ತಗುಲಿ ನೆಲಕ್ಕೆ ಬಿದ್ದ. ಅವನ ತುಟಿಗಳು ನಡುಗಿದವು. "ಸರ್..." ಆರ್ಯನ್ ಅವನ ಕೈ ಹಿಡಿದ. "ಏನೂ ಮಾತನಾಡಬೇಡ... ನಾವು ನಿನ್ನನ್ನು ಕರೆದೊಯ್ಯುತ್ತೇವೆ." ಯೋಧ ನೋವಿನ ಮಧ್ಯೆಯೂ ಸಣ್ಣ ನಗೆ ಬೀರಿದ. "ಸರ್... ನನ್ನನ್ನು ಬಿಡಿ... ಧ್ವಜವನ್ನು ಮಾತ್ರ ಮುಂದೆ ತೆಗೆದುಕೊಂಡು ಹೋಗಿ... ನನ್ನ ಅಮ್ಮನಿಗೆ... ನಾನು ಹೆದರಲಿಲ್ಲ ಎಂದು ಹೇಳಿ..." ಅವನ ಕೈ ನಿಧಾನವಾಗಿ ಜಾರಿತು. ಕಣ್ಣುಗಳು ಮುಚ್ಚಿಕೊಂಡವು. ಆರ್ಯನ್ ಅವನ ನೆತ್ತಿಗೆ ಕೈಯಿಟ್ಟು ಸಲ್ಯೂಟ್ ಮಾಡಿದ. "ನೀನು ಸತ್ತಿಲ್ಲ... ನೀನು ಭಾರತವಾಗಿ ಬದುಕಿದ್ದೀಯ..." ಅಷ್ಟರಲ್ಲಿ... ಮತ್ತೊಂದು ಬಾಂಬ್ ಭೀಕರವಾಗಿ ಸ್ಫೋಟಿಸಿತು. ಹಿಮದ ಪರ್ವತವೇ ನಡುಗಿತು. ಹೊಗೆ, ಬೆಂಕಿ, ರಕ್ತ... ಎಲ್ಲವೂ ಒಂದಾಗಿ ಬೆರೆತುಹೋಯಿತು. ಆದರೆ ಆ ಹೊಗೆಯ ಮಧ್ಯೆಯೂ... ಒಂದು ಧ್ವನಿ ಮಾತ್ರ ಮತ್ತೆ ಮತ್ತೆ ಕೇಳಿಸುತ್ತಿತ್ತು... "ಮುಂದೆ ಸಾಗಿರಿ" ಆದೇಶದ ಪಾಲನೆಯೊಂದಿಗೆ ಶತ್ರು ಸೈನಿಕರನ್ನು ಸದೆಬಡಿಯುತ್ತ ತ್ರಿವರ್ಣ ಧ್ವಜ ಶಿಖರ ತಲುಪಬೇಕು...!"** ಆಕಾಶ ಇನ್ನೂ ಕತ್ತಲೆಯಲ್ಲೇ ಮುಳುಗಿತ್ತು. ಪರ್ವತದ ಶಿಖರ ಇನ್ನೇನು ಕೆಲವೇ ಹೆಜ್ಜೆಗಳ ದೂರದಲ್ಲಿತ್ತು. ಆರ್ಯನ್‌ನ ಎದೆಯ ಮೇಲೆ ತ್ರಿವರ್ಣ ಧ್ವಜ ಬಿಗಿಯಾಗಿ ಕಟ್ಟಲ್ಪಟ್ಟಿತ್ತು. ಹಿಂದೆ ಉಳಿದಿದ್ದ ಕೆಲವೇ ಸಂಗಾತಿಗಳು ಅವನನ್ನು ನೋಡುತ್ತಿದ್ದರು. ಅಷ್ಟರಲ್ಲಿ... ಶತ್ರುಗಳ ಕಡೆಯಿಂದ ಮತ್ತೆ ಗುಂಡಿನ ಮಳೆ ಆರಂಭವಾಯಿತು. ಒಂದು ಗುಂಡು ಅವನ ಭುಜವನ್ನು ಸೀಳಿತು. ಇನ್ನೊಂದು ಅವನ ಕಾಲಿಗೆ ತಗುಲಿತು. ಅವನು ಕ್ಷಣಕಾಲ ತತ್ತರಿಸಿದ. ಆದರೆ ಬಿದ್ದಿಲ್ಲ. ಅವನ ಕಣ್ಣ ಮುಂದೆ ಮಿಂಚಿದವು - ತಾಯಿಯ ಮಡಿಲು... ತಂದೆಯ ಗಟ್ಟಿಯಾದ ಕೈ... ಪತ್ನಿಯ ಮೌನದ ನಗು... ಮಗುವಿನ ಪುಟ್ಟ ಧ್ವನಿ... "ಅಪ್ಪಾ... ಬೇಗ ಬಾ..." ಅವನು ತನ್ನಲ್ಲೇ ಹೇಳಿಕೊಂಡ: "ನಾನು ಬರದೇ ಇರಬಹುದು ಕಂದಾ... ಆದರೆ ನೀನು ಹೆಮ್ಮೆಪಡುವ ಭಾರತವನ್ನು ಉಳಿಸಿ ಹೋಗುತ್ತೇನೆ..." ಕೊನೆಯ ಶಕ್ತಿಯನ್ನು ಒಗ್ಗೂಡಿಸಿ ಅವನು ಶಿಖರವನ್ನು ತಲುಪಿದ. ತ್ರಿವರ್ಣ ಧ್ವಜವನ್ನು ಬಂಡೆಯ ಮೇಲೆ ನೆಟ್ಟ. ತಣ್ಣನೆಯ ಗಾಳಿಯಲ್ಲಿ ಧ್ವಜ ಹೆಮ್ಮೆಯಿಂದ ಹಾರಲಾರಂಭಿಸಿತು.

ಆ ಕ್ಷಣ... ಪರ್ವತದ ಮೇಲೆ ಮೊಳಗಿದ್ದು ಒಂದೇ ಘೋಷಣೆ - "ಭಾರತ್ ಮಾತಾ ಕೀ ಜೈ!" ಕರ್ತವ್ಯವನ್ನು ಪೂರೈಸಿದ ತೃಪ್ತಿಯ ನಗುವಿನೊಂದಿಗೆ ಆರ್ಯನ್ ನಿಧಾನವಾಗಿ ನೆಲಕ್ಕೊರಗಿದ. ಅವನ ಸಂಗಾತಿಗಳು ಸಲ್ಯೂಟ್ ಮಾಡಿದರು. ಯಾರೂ "ಅವನು ಸೋತ" ಎಂದು ಹೇಳಲಿಲ್ಲ. ಏಕೆಂದರೆ... ದೇಶಕ್ಕಾಗಿ ಬದುಕಿದವರೂ, ದೇಶಕ್ಕಾಗಿ ಪ್ರಾಣ ಅರ್ಪಿಸಿದವರೂ ಭಾರತದ ಇತಿಹಾಸದಲ್ಲಿ ಎಂದಿಗೂ ಸೋಲುವುದಿಲ್ಲ.

ಕೆಲವು ದಿನಗಳ ನಂತರ... ಒಂದು ಸೇನಾ ವಾಹನ ನಿಧಾನವಾಗಿ ಮನೆಯ ಮುಂದೆ ಬಂದು ನಿಂತಿತು. ತ್ರಿವರ್ಣ ಧ್ವಜದಲ್ಲಿ ಹೊದಿಸಲ್ಪಟ್ಟ ಪೆಟ್ಟಿಗೆ ಇಳಿಸಲಾಯಿತು. ಮನೆಯ ಮುಂದೆ ಜನಸಾಗರ. ಯಾರ ಬಾಯಲ್ಲೂ ಮಾತಿರಲಿಲ್ಲ. ತಾಯಿ ಮುಂದೆ ಬಂದಳು. ಮಗನ ನೆತ್ತಿಗೆ ಕೊನೆಯ ಬಾರಿ ಕೈಯಿಟ್ಟಳು. ಕಣ್ಣೀರು ಹರಿಯುತ್ತಿತ್ತು. ಆದರೂ ಅವಳು ಹೇಳಿದಳು: "ನೀನು ನನ್ನ ಮಗನಾಗಿದ್ದೆ... ಇಂದು ಇಡೀ ದೇಶದ ಮಗನಾಗಿದ್ದೀಯ." ತಂದೆ ನಡುಗುವ ಕೈಯಿಂದ ಸಲ್ಯೂಟ್ ಮಾಡಿದರು. *"ನಾನು ನಿನ್ನನ್ನು ನಡೆಯಲು ಕಲಿಸಿದ್ದೆ... ಆದರೆ ನೀನು ದೇಶಕ್ಕಾಗಿ ಹೇಗೆ ಬದುಕಬೇಕು ಎಂಬುದನ್ನು ನನಗೆ ಕಲಿಸಿ ಹೋಗಿದ್ದೀಯ."* ಪತ್ನಿ ತ್ರಿವರ್ಣ ಧ್ವಜವನ್ನು ಎದೆಯೊಡನೆ ಹತ್ತಿಸಿಕೊಂಡಳು. ಅವಳು ಅತ್ತಳು... ಆದರೆ ಆ ಅಳುವಿನಲ್ಲೂ ಹೆಮ್ಮೆ ಇತ್ತು. ಮಗು ನಿಧಾನವಾಗಿ ಕೇಳಿತು: "ಅಮ್ಮಾ... ಅಪ್ಪ ಯಾಕೆ ಎದ್ದಿಲ್ಲ...?" ಅವಳು ಮಗುವನ್ನು ತಬ್ಬಿಕೊಂಡು ಆಕಾಶದ ಕಡೆ ನೋಡಿದಳು. *"ನಿನ್ನ ಅಪ್ಪ ಮಲಗಿಲ್ಲ ಕಂದಾ... ಈ ದೇಶದ ಪ್ರತಿಯೊಂದು ಮಗುವೂ ನೆಮ್ಮದಿಯಾಗಿ ಮಲಗಲು ಕಾವಲು ನಿಂತಿದ್ದಾನೆ..."* ಆ ದಿನ ಸಂಜೆ... ಗಾಳಿಯಲ್ಲಿ ತ್ರಿವರ್ಣ ಧ್ವಜ ಹಾರುತ್ತಿತ್ತು. ಸಾವಿರಾರು ಜನರ ನಡುವೆ ಮೌನ ಆವರಿಸಿತ್ತು. ಆ ಮೌನವೇ ಒಬ್ಬ ವೀರನಿಗೆ ಸಲ್ಲಿಸಿದ ಅತ್ಯಂತ ದೊಡ್ಡ ಗೌರವವಾಗಿತ್ತು. "ಸೈನಿಕನು ಸಾಯುವುದಿಲ್ಲ, ಅವನು ತನ್ನ ಕೊನೆಯ ಉಸಿರನ್ನು ಭಾರತದ ಉಸಿರಿನೊಂದಿಗೆ ಬೆರೆಸಿ ಅಮರನಾಗುತ್ತಾನೆ. ಅವನ ತ್ಯಾಗದಿಂದಲೇ ನಮ್ಮ ನಾಳೆ ಸುರಕ್ಷಿತವಾಗಿರುತ್ತದೆ.

ತ್ರಿವರ್ಣ ಧ್ವಜದ ಪ್ರತಿಯೊಂದು ಬಣ್ಣದಲ್ಲೂ ಒಬ್ಬ ವೀರನ ರಕ್ತ, ಒಬ್ಬ ತಾಯಿಯ ಕಣ್ಣೀರು ಮತ್ತು ಒಂದು ಕುಟುಂಬದ ತ್ಯಾಗ ಅಡಗಿದೆ." ತ್ಯಾಗದ ಮಹಾಕಾವ್ಯ ಬರೆದ ದೇಶಭಕ್ತ ವೀರರ ಅಮರ ದಿವ್ಯಕಾವ್ಯ ಬನ್ನಿ ಇಂದು ನಾವೆಲ್ಲರೂ ಅಮರ ಯೋಧರಿಗೆ ನಮನ ಸಲ್ಲಿಸೋಣ.

ಜೈ ಹಿಂದ್... ಕಾರ್ಗಿಲ್ ವೀರ ಅಮರರಿಗೆ ಶತಶತ ನಮನಗಳು.

- ಈರಮಂಡ ಹರಿಣಿ ವಿಜಯ್, ಕೋಡಂಬೂರು.