ಮಡಿಕೇರಿ, ಜು. ೨೩: ಮಡಿಕೇರಿ ನಗರದ ಸರ್ಕಾರಿ ಬಸ್ ನಿಲ್ದಾಣ ಬಳಿಯ ರಸ್ತೆ ಮಳೆಯಿಂದಾಗಿ ಒಂದು ಬದಿ ಕುಸಿಯಲ್ಪಟ್ಟ ಪರಿಣಾಮ ರಸ್ತೆ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಆ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿ ಹಲವು ದಿನಗಳೇ ಕಳೆದಿವೆ. ಮಡಿಕೇರಿ ನಗರದ ಹೃದಯಭಾಗದ ಪ್ರಮುಖ ರಸ್ತೆ ಇದಾಗಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿರುವುದರಿಂದ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಿ ವಾಹನ ಚಾಲಕರು ಒಂದೆಡೆಯಿAದ ಮತ್ತೊಂದೆಡೆಗೆ ತೆರಳಲು ಸುತ್ತಿಬಳಸಿ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ.

ಚೌಕಿ, ಹಳೇ ಖಾಸಗಿ ಬಸ್ ನಿಲ್ದಾಣ, ಟೋಲ್‌ಗೇಟ್ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿಗೆ ತೆರಳಲು ಬೇರೆ ಬೇರೆ ರಸ್ತೆಗಳ ಮೂಲಕ ಕಿಲೋ ಮೀಟರ್‌ಗಟ್ಟಲೇ ಸಂಚರಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ನಗರ ವ್ಯಾಪ್ತಿಯಲ್ಲಿ ವಾಹನಗಳಲ್ಲಿ ಯಾವ್ಯಾವ ಭಾಗಕ್ಕೆ ಯಾವ್ಯಾವ ಮಾರ್ಗಗಳನ್ನು ಬಳಸಬೇಕು ಎಂಬ ಬಗ್ಗೆ ಸೂಕ್ತ ಮಾಹಿತಿಯೂ ಇಲ್ಲದೆ ಸ್ಥಳೀಯರು ಮತ್ತು ಪ್ರವಾಸಿಗರು ತಲೆಕೆಡಿಸಿಕೊಳ್ಳಬೇಕಾದ ಫಜೀತಿ ಬಂದೊದಗಿದೆ.

ವಿಳಂಬಕ್ಕೆ ಆಕ್ಷೇಪ

ಈ ನಡುವೆ ಇಂದು ಸರ್ಕಾರಿ ಬಸ್ ನಿಲ್ದಾಣ ಬಳಿಯ ಆಟೋ ಚಾಲಕರು, ಜೀಪು, ಕಾರು ಚಾಲಕರು, ಸ್ಥಳೀಯ ವರ್ತಕರು ಕಾಮಗಾರಿ ಸ್ಥಳದಲ್ಲಿ ಸೇರಿ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆಯಿತು. ರಸ್ತೆ ಬಂದ್ ಆಗಿರುವ ಹಿನ್ನೆಲೆ ಉಂಟಾಗಿರುವ ಅನಾನುಕೂಲತೆ ಹಾಗೂ ವ್ಯಾಪಾರ ವಹಿವಾಟಿನ ಮೇಲೆ ಉಂಟಾಗಿರುವ ಪರಿಣಾಮಗಳನ್ನು ಪ್ರಸ್ತಾಪಿಸಿ ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇಲ್ಲವಾದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಈ ವೇಳೆ ವರ್ತಕರಾದ ಮಹೇಶ್, ಲಿಂಗರಾಜು, ಸುರೇಶ್, ಚಾಲಕರುಗಳಾದ ವೇಣುಗೋಪಾಲ್, ರಾಜೇಶ್, ಮಹೇಂದ್ರ, ಎಸ್.ಆರ್. ಕುಮಾರ್, ಕೊಡಗು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಸನ್ನ ಭಟ್ ಮತ್ತಿತರರು ಇದ್ದರು.

ಏಕಮುಖ ಸಂಚಾರಕ್ಕೆ ಅವಕಾಶ

ಕಾಮಗಾರಿ ವಿಳಂಬಕ್ಕೆ ಆಕ್ಷೇಪಗಳು ವ್ಯಕ್ತವಾಗುತ್ತಿರುವ ಬಗ್ಗೆ ‘ಶಕ್ತಿ’ ನಗರಸಭಾಧ್ಯಕ್ಷೆ ಕಲಾವತಿ ಅವರ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಅಭಿಪ್ರಾಯ ಬಯಸಿದಾಗ ಮಾತನಾಡಿದ ಅವರು, ಸರ್ಕಾರಿ ಬಸ್ ನಿಲ್ದಾಣ ಬಳಿಯ ರಸ್ತೆ ದುರಸ್ತಿ ಕಾಮಗಾರಿ ಭರದಿಂದ ಸಾಗಿದ್ದು, ಸಂಪೂರ್ಣವಾಗಿ ಮುಗಿಯಲು ಸ್ವಲ್ಪ ಕಾಲಾವಕಾಶದ ಅಗತ್ಯವಿದೆ. ಈ ನಡುವೆ ಆ ರಸ್ತೆಯಲ್ಲಿ ಏಕಮುಖ ಸಂಚಾರಕ್ಕಾದರೂ ಅವಕಾಶ ನೀಡುವಂತೆ ಕೋರಿಕೆ ಹಾಗೂ ಒತ್ತಾಯಗಳು ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ತಾ. ೨೯ ರಿಂದ ಈ ರಸ್ತೆಯಲ್ಲಿ ಲಘುವಾಹನಗಳಿಗೆ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.