ಸುಂಟಿಕೊಪ್ಪ, ಜು. ೨೨: ಸುಂಟಿಕೊಪ್ಪದ ಆಧುನಿಕ ಮಾರುಕಟ್ಟೆ ಹಾಗೂ ಬಸ್ ನಿಲ್ದಾಣ ನಿರ್ಮಾಣ ಕುರಿತು ಜನರ ಅಭಿಪ್ರಾಯಕ್ಕೆ ಆದ್ಯತೆ ನೀಡಿ ಯೋಜನೆ ರೂಪಿಸಿದರೆ ಅಭಿವೃದ್ಧಿ ಕಾರ್ಯಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳಲಿವೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ಗೌಡ ಹೇಳಿದರು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಶ್ರೀ ಮಂಜನಾಥಯ್ಯ-ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಆಧುನಿಕ ಮಾರುಕಟ್ಟೆ ಹಾಗೂ ಬಸ್ ನಿಲ್ದಾಣ ನಿರ್ಮಾಣ ಕುರಿತ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಮಾಜಿ ಜನಪ್ರತಿನಿಧಿಗಳು, ವ್ಯಾಪಾರಸ್ಥರು ಹಾಗೂ ಗ್ರಾಮಸ್ಥರ ಅಭಿಪ್ರಾಯಗಳನ್ನು ಆಲಿಸಿದ ಶಾಸಕ ಮಂತರ್ಗೌಡ, ಮುಂದಿನ ೧೦ ದಿನಗಳೊಳಗೆ ವಿಶೇಷ ಗ್ರಾಮಸಭೆ ನಡೆಸಿ, ಆಧುನಿಕ ಮಾರುಕಟ್ಟೆ ಮತ್ತು ಬಸ್ ನಿಲ್ದಾಣ ನಿರ್ಮಾಣಕ್ಕೆ ಕನಿಷ್ಟ ಮೂರು ನೀಲನಕ್ಷೆಗಳನ್ನು ಸಿದ್ಧಪಡಿಸಿ ಜನರ ಮುಂದೆ ಮಂಡಿಸಬೇಕು ಎಂದು ಕಂದಾಯ ಪರಿವೀಕ್ಷಕ ಎಚ್.ಎಂ. ಪ್ರಶಾಂತ್, ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ರಾಕೇಶ್ ಹಾಗೂ ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್ ಅವರಿಗೆ ನಿರ್ದೇಶನ ನೀಡಿದರು. ಪಕ್ಷಾತೀತ ಹಾಗೂ ಜಾತ್ಯತೀತ ನಿಲುವಿನಲ್ಲಿ ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ ಶಾಶ್ವತ ಮಾರುಕಟ್ಟೆ ಮತ್ತು ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಈ ಹಿನ್ನೆಲೆಯಲ್ಲಿ ಲೋಟಸ್ ಬಡಾವಣೆಯಲ್ಲಿರುವ ಮಾರುಕಟ್ಟೆ ಜಾಗ ಹಾಗೂ ಹಾಲಿ ಮಾರುಕಟ್ಟೆ ಪ್ರದೇಶದ ಸರ್ವೆ ನಡೆಸುವಂತೆ ಸೂಚಿಸಿದ ಶಾಸಕರು, ಹೆದ್ದಾರಿ ಬದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋಳಿ, ಕುರಿ ಮಾಂಸ ಹಾಗೂ ಮೀನು ಮಾರುಕಟ್ಟೆಗಳನ್ನು ಹೊಸ ಮಾರುಕಟ್ಟೆಗೆ ಸ್ಥಳಾಂತರಿಸುವ ಕುರಿತು ಚಿಂತನೆ ನಡೆಸಬೇಕೆಂದು ಹೇಳಿದರು.
ಮೊದಲು ನೂತನ ಮಾರುಕಟ್ಟೆಯನ್ನು ನಿರ್ಮಿಸಿ ವ್ಯಾಪಾರಿಗಳನ್ನು ಅಲ್ಲಿಗೆ ಸ್ಥಳಾಂತರಿಸಿದ ಬಳಿಕವೇ ಹಳೆಯ ಮಾರುಕಟ್ಟೆ ಪ್ರದೇಶವನ್ನು ಬಸ್ ನಿಲ್ದಾಣವಾಗಿ ಅಭಿವೃದ್ಧಿಪಡಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು. ಹಳೆಯ ಮಾರುಕಟ್ಟೆ ಜಾಗವನ್ನು ನೇರವಾಗಿ ಕೆಎಸ್ಆರ್ಟಿಸಿಗೆ ನೀಡಿದರೆ ಖಾಸಗಿ ಬಸ್ಗಳಿಗೆ ಅವಕಾಶ ಸಿಗುವುದಿಲ್ಲ. ಆದರೆ ಗ್ರಾಮ ಪಂಚಾಯಿತಿ ನಿರ್ವಹಣೆಯಲ್ಲಿ ಬಸ್ ನಿಲ್ದಾಣ ನಿರ್ಮಾಣವಾದರೆ ಸರ್ಕಾರಿ ಹಾಗೂ ಖಾಸಗಿ ಬಸ್ಗಳಿಗೆ ಸಮಾನ ಅವಕಾಶ ದೊರೆಯುವುದರ ಜೊತೆಗೆ ಪಂಚಾಯಿತಿಗೂ ಆದಾಯ ಲಭಿಸುತ್ತದೆ ಎಂದು ವಿವರಿಸಿದರು.
ಸುಂಟಿಕೊಪ್ಪದ ಅಭಿವೃದ್ಧಿಗೆ ಗ್ರಾಮಸ್ಥರು ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಿ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ರಾಕೇಶ್, ಕಂದಾಯ ಪರಿವೀಕ್ಷಕ ಎಚ್.ಎಂ. ಪ್ರಶಾಂತ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಜರ್ಮಿ ಡಿಸೋಜ, ಮಾಜಿ ಸದಸ್ಯ ಕೆ.ಎಸ್. ಮಂಜುನಾಥ್, ಮಾಜಿ ಅಧ್ಯಕ್ಷರಾದ ಪಿ.ಆರ್. ಸುನಿಲ್ ಕುಮಾರ್, ಶಿವಮ್ಮ ಮಹೇಶ್, ಎಂ.ಎ. ಉಸ್ಮಾನ್, ಪಿ.ಎಫ್. ಸಬಾಸ್ಟೀನ್, ನಗರ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಖಾನ್, ಭಾನುಮತಿ, ಫೆಲ್ಸಿ ಡೆನ್ನಿಸ್, ರಜಾಕ್, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಹಕೀಂ, ಯಂಕನ ಶ್ರೀರಾಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.