ಸುಂಟಿಕೊಪ್ಪ, ಜು. ೨೨: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಆಧುನಿಕ ಮಾರುಕಟ್ಟೆ ಹಾಗೂ ಬಸ್ ನಿಲ್ದಾಣ ನಿರ್ಮಾಣ ಕುರಿತ ವಿಶೇಷ ಸಭೆಯಲ್ಲಿ ವ್ಯಾಪಾರಸ್ಥರು, ಗ್ರಾಹಕರು ಹಾಗೂ ಗ್ರಾಮಸ್ಥರು ಮಾರುಕಟ್ಟೆ ಮತ್ತು ಬಸ್ ನಿಲ್ದಾಣದ ಅವಶ್ಯಕತೆ, ಸ್ಥಳಾಂತರ ಹಾಗೂ ಅಭಿವೃದ್ಧಿ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಶ್ರೀ ಮಂಜನಾಥಯ್ಯ-ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಶಾಸಕ ಡಾ. ಮಂತರ್‌ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಚ್.ಯು. ರಫೀಕ್ ಖಾನ್, ಸಂತೆ ದಿನದ ವ್ಯಾಪಾರ ಚಟುವಟಿಕೆಗಳನ್ನು ಶಾಸಕರು ಖುದ್ದಾಗಿ ಪರಿಶೀಲಿಸಿದ್ದಾರೆ. ನೂತನ ಮಾರುಕಟ್ಟೆ ನಿರ್ಮಾಣಕ್ಕೆ ಮಾಜಿ ಹಾಗೂ ಹಾಲಿ ಶಾಸಕರ ಅನುದಾನ ಸೇರಿದಂತೆ ಸುಮಾರು ರೂ. ೬೦ ಲಕ್ಷ ವೆಚ್ಚವಾಗಿದ್ದು, ಆ ಹೂಡಿಕೆ ವ್ಯರ್ಥವಾಗದಂತೆ ಎಲ್ಲರಿಗೂ ಅನುಕೂಲವಾಗುವ ಕಾರ್ಯಯೋಜನೆ ರೂಪಿಸಬೇಕೆಂದು ಹೇಳಿದರು.
ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ಆರ್. ಸುಕುಮಾರ್ ಮಾತನಾಡಿ, ಮಾರುಕಟ್ಟೆ ನಿರ್ಮಾಣದ ವೇಳೆ ಜನಾಭಿಪ್ರಾಯ ಸಂಗ್ರಹಿಸದೆ ಯೋಜನೆ ರೂಪಿಸಲಾಗಿತ್ತು. ಇನ್ನು ಮುಂದಾದರೂ ಜನರ ಅಭಿಪ್ರಾಯಕ್ಕೆ ಆದ್ಯತೆ ನೀಡಿ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಮಾಜಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಮಾತನಾಡಿ, ನೂತನ ಮಾರುಕಟ್ಟೆಗೆ ವೆಚ್ಚವಾಗಿರುವ ಅನುದಾನ ವ್ಯರ್ಥವಾಗದಂತೆ ಕೋಳಿ, ಕುರಿ ಹಾಗೂ ಮೀನು ಮಾರುಕಟ್ಟೆಗಳನ್ನು ಹರಾಜು ಮೂಲಕ ನಿರ್ವಹಿಸಿ, ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ ಆಧುನಿಕ ವಾಣಿಜ್ಯ ಸಂಕೀರ್ಣ ನಿರ್ಮಿಸಿದರೆ ಪಂಚಾಯಿತಿಗೆ ಶಾಶ್ವತ ಆದಾಯ ದೊರೆಯಲಿದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಅಧ್ಯಕ್ಷ ಪಿ.ಎಫ್. ಸಬಾಸ್ಟೀನ್ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಮಾರುಕಟ್ಟೆ ಹಾಗೂ ಬಸ್ ನಿಲ್ದಾಣ ಸ್ಥಳಾಂತರ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಸುಂಟಿಕೊಪ್ಪದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡುವಂತೆ ಒತ್ತಾಯಿಸಿದರು. ಎಂ.ಎ. ಉಸ್ಮಾನ್ ಮಾತನಾಡಿ, ಮಾರುಕಟ್ಟೆ ಹರಾಜು ಪ್ರಕ್ರಿಯೆಯಿಂದ ಪಂಚಾಯಿತಿಗೆ ಬರಬೇಕಾದ ಆದಾಯ ಸಮರ್ಪಕವಾಗಿ ಸಂಗ್ರಹವಾಗುತ್ತಿಲ್ಲ. ರಾಷ್ಟಿçÃಯ ಹೆದ್ದಾರಿ-೨೭೫ ವಿಸ್ತರಣೆ ಹಾಗೂ ಬೈಪಾಸ್ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು ಮತ್ತು ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕೆಂದು ಮನವಿ ಮಾಡಿದರು.
ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜರ್ಮಿ ಡಿಸೋಜ ಮಾತನಾಡಿ, ಹಿಂದಿನ ಸಂತೆ ವ್ಯವಸ್ಥೆ ಮತ್ತು ಇಂದಿನ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈಗ ಗ್ರಾಮಗಳಲ್ಲಿಯೇ ಅಗತ್ಯ ವಸ್ತುಗಳು ಲಭ್ಯವಾಗುತ್ತಿರುವುದರಿಂದ ಹೊಸ ಪರಿಸ್ಥಿತಿಗೆ ಅನುಗುಣವಾಗಿ ಯೋಜನೆ ರೂಪಿಸಬೇಕೆಂದರು.
ಹಿರಿಯ ವರ್ತಕ ಎಂ.ಎ. ವಸಂತ್, ತಜ್ಞರ ಸಲಹೆ ಪಡೆದು ಮಾರುಕಟ್ಟೆ ಹಾಗೂ ಬಸ್ ನಿಲ್ದಾಣ ನಿರ್ಮಾಣ ಮತ್ತು ಸ್ಥಳಾಂತರ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಫೆಲ್ಸಿ ಡೆನ್ನಿಸ್ ಮಾತನಾಡಿ, ಮಾರುಕಟ್ಟೆಯನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ, ಹಾಲಿ ಜಾಗದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಬೇಕೆಂದು ಒತ್ತಾಯಿಸಿದರು. ಸಭೆಯಲ್ಲಿ ಗ್ರಾಮಸ್ಥರಾದ ಫೈರೋಜ್, ಸೂಫಿ, ಪ್ರಶಾಂತ್, ಹಕೀಂ, ಕೆ.ಡಿ. ರಾಮಯ್ಯ, ಬಿ.ಕೆ. ಮೋಹನ್, ಶಬ್ಬೀರ್, ಹೆಚ್.ಎಸ್. ಮುತ್ತಪ್ಪ, ಇಬ್ರಾಹಿಂ, ಡೇವಿಡ್, ರಜಾಕ್ ಸೇರಿದಂತೆ ಸಂತೆ ವ್ಯಾಪಾರಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.