ಪೊನ್ನಂಪೇಟೆ, ಜು. ೨೨: ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಮುಂದುವರೆದಿದ್ದು, ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದೆ.

ಬೇಗೂರು ಗ್ರಾಮದ ರೈತ ಕೊಟ್ಟಂಗಡ ರಾಜಾ ಸುಬ್ಬಯ್ಯ ಅವರಿಗೆ ಸೇರಿದ ಹಸು ಹುಲಿ ದಾಳಿಯಿಂದ ಜೀವ ಕಳೆದುಕೊಂಡಿದೆ.

ತಾ. ೨೨ ರಂದು ಬೆಳಿಗ್ಗೆ ೧೧ ಗಂಟೆ ಸಮಯದಲ್ಲಿ ಗದ್ದೆಯಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಕಳೆದ ೨ ವರ್ಷದ ಅವಧಿಯಲ್ಲಿ ರಾಜಾ ಸುಬ್ಬಯ್ಯ ಅವರ ಮೂರು ಹಸುಗಳನ್ನು ಹುಲಿ ದಾಳಿಗೆ ಬಲಿಯಾಗಿವೆ.

ಘಟನೆ ನಡೆದ ಸ್ಥಳಕ್ಕೆ ಪೊನ್ನಂಪೇಟೆ ಅರಣ್ಯ ವಲಯ ಅರಣ್ಯಾಧಿಕಾರಿ ರಾಕೇಶ್, ಉಪವಲಯ ಅರಣ್ಯಾಧಿಕಾರಿ ದಿವಾಕರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ನಡೆದ ಸ್ಥಳದ ಸುತ್ತಮುತ್ತ ಹುಲಿ ಪತ್ತೆಗೆ ಕೂಂಬಿAಗ್ ನಡೆಸಲಾಗಿದ್ದು, ಹುಲಿಯ ಚಲನವಲನ ಪತ್ತೆಗೆ ಕ್ಯಾಮರಾ ಅಳವಡಿಸಲಾಗಿದೆ. ಕ್ಯಾಮರಾದಲ್ಲಿ ಹುಲಿ ಗುರುತು ಪತ್ತೆಯಾದಲ್ಲಿ ಮುಂದಿನ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಹಸು ಕಳೆದುಕೊಂಡ ರೈತನಿಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಗದ್ದೆಯಲ್ಲಿ ಹಾಡಹಗಲೇ ಹಸುವಿನ ಮೇಲೆ ಹುಲಿ ದಾಳಿಯಾಗಿರುವುದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಈಗ ಗದ್ದೆ ಕೃಷಿ ಚಟುವಟಿಕೆಯ ಸಮಯವಾಗಿರುವುದರಿಂದ ಅರಣ್ಯ ಇಲಾಖೆ ಆದಷ್ಟು ಬೇಗ ಹುಲಿಯನ್ನು ಸೆರೆಹಿಡಿದು ಆತಂಕ ನಿವಾರಿಸುವಂತೆ ಒತ್ತಾಯಿಸಿದ್ದಾರೆ.