ಕೂಡಿಗೆ, ಜು. ೨೦: ಜಿಲ್ಲೆಯಲ್ಲಿ ಮಳೆಯ ಪ್ರಮಾಣವು ಕ್ಷೀಣಗೊಂಡಿರುವ ಹಿನ್ನೆಲೆಯಲ್ಲಿ ಹಾರಂಗಿ ಅಣೆಕಟ್ಟೆಯ ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ಭತ್ತದ ಗದ್ದೆಗಳಲ್ಲಿ ಸಣ್ಣ ಪ್ರಮಾಣದ ಕೊಳವೆ ಬಾವಿಯ ನೀರನ್ನು ಉಪಯೋಗಿಸಿಕೊಂಡು ಮೆಕ್ಕೆಜೋಳದ ಬೆಳೆಯನ್ನು ಬೆಳೆಯಲು ಮುಂದಾಗಿದ್ದಾರೆ. ಕುಶಾಲನಗರ ತಾಲೂಕು ವ್ಯಾಪ್ತಿಯ ೭ ಗ್ರಾಮ ಪಂಚಾಯಿತಿಗಳ ೫೦ ಕ್ಕೂ ಹೆಚ್ಚು ಉಪ ಗ್ರಾಮಗಳ ರೈತರು ಹೆಚ್ಚಾಗಿ ಬೇಸಾಯದ ಜೊತೆಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಪ್ರಮುಖವಾಗಿ ಹೈನುಗಾರಿಕೆಗೆ ಹಸಿರು ಮೇವಿನ ಜೊತೆಗೆ ಹಸುಗಳಿಗೆ ಭತ್ತದ ಹುಲ್ಲು ಬಹಳ ಉಪಯುಕ್ತ ಆಹಾರವಾಗಿದೆ. ಅದರೆ ಈ ಸಾಲಿನಲ್ಲಿ ಬರಗಾಲದ ಛಾಯೆಯಲ್ಲಿ ಭತ್ತದ ಬೆಳೆಯನ್ನು ಬೆಳೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮುಂಜಾಗ್ರತವಾಗಿ ರೈತರು ಮೆಕ್ಕೆಜೋಳದ ಚಿತ್ತ ಹರಿಸಿದ್ದಾರೆ. ಮಳೆ ಈ ಬಾರಿ ಅತಿ ಕಡಿಮೆಯಾಗಿರುವುದರಿಂದ ಕೊಳವೆ ಬಾವಿಯ ನೀರು ಸಹ ಕುಸಿದಿದ್ದು, ಮೆಕ್ಕೆಜೋಳದ ಬೆಳೆ ಕೂಡ ಒಣಗುತ್ತಿರುವುದು ಅನೇಕ ಗ್ರಾಮಗಳಲ್ಲಿ ಕಂಡುಬರುತ್ತಿದೆ. ಕೆಲವೆಡೆ ಬಿಳಿಸುಳಿ ರೋಗ ಕಾಣಿಸಿಕೊಂಡಿದ್ದು, ಬೆಳೆಯು ನೆಲಕಚ್ಚಿದೆ. ಕೃಷಿ ಇಲಾಖೆಯ ಅಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರವನ್ನು ಒದಗಿಸುವಂತೆ ನೂರಾರು ರೈತರು ಆಗ್ರಹಿಸಿದ್ದಾರೆ.
ಕೆ.ಕೆ. ನಾಗರಾಜಶೆಟ್ಟಿ.