ಶನಿವಾರಸಂತೆ, ಜು. ೧೮: ದಕ್ಷಿಣ ಕಾಶ್ಮೀರ ಎಂದು ಕರೆಸಿಕೊಂಡಿರುವ ಕೊಡಗಿನಲ್ಲಿ ಶನಿವಾರಸಂತೆ ಸಮೀಪದ ಕಿರಿಬಿಳಾಹ ಗ್ರಾಮದಲ್ಲಿ ಯುವ ಕೃಷಿಕರೊಬ್ಬರು ಕಾಶ್ಮೀರ ತಳಿಯ ಸೇಬು ಹಣ್ಣನ್ನು ಬೆಳೆದು ಇತರ ಬೆಳೆಗಾರರು ಅಚ್ಚರಿಪಡುವಂತೆ ಮಾಡಿದ್ದಾರೆ.
ಯುವ ಕೃಷಿಕ ಬೆಳ್ಳಿ (ಕೆ.ಸಿ. ಧರ್ಮರಾಜ್) ಹದಿನೈದು ವರ್ಷಗಳಿಂದ ತಮ್ಮ ನಾಲ್ಕುವರೆ ಎಕರೆ ತೋಟದಲ್ಲಿ ಮಿಶ್ರ ಬೆಳೆಗಳನ್ನು ಬೆಳೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. ಕಾಫಿ, ಕರಿಮೆಣಸು, ಏಲಕ್ಕಿ, ಅಡಿಕೆ, ಮಾವು, ಕಿತ್ತಳೆ, ಹಲಸು ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಕಾಶ್ಮೀರದ ಸ್ನೇಹಿತರ ಮುಖಾಂತರ ಕಾಶ್ಮೀರ ತಳಿಯ ಮೇಲ್ ಮತ್ತು ಫಿಮೇಲ್ ೨೦ ಸೇಬಿನ ಗಿಡಗಳನ್ನು ತರಿಸಿಕೊಂಡು ಕಾಫಿ ಗಿಡಗಳ ಮಧ್ಯೆ ನೆಟ್ಟು ಪೋಷಿಸಿದರು. ಇತರ ಗಿಡಗಳಿಗೆ ಬಳಸುವ ಗೊಬ್ಬರ, ನೀರು, ಸ್ಪೆç ಪೋಷಣೆಯಲ್ಲೇ ಸೇಬು ಗಿಡಗಳು ಬೆಳೆದು ೧೮ ತಿಂಗಳಿಗೆ ಫಲ ನೀಡಿದವು. ೨೦೨೫ ರಲ್ಲಿ ಗಿಡವೊಂದು ೧೦-೨೦ ಹಣ್ಣುಗಳನ್ನು ಬಿಟ್ಟಿದ್ದರೆ, ಪ್ರಸಕ್ತ ವರ್ಷ ಗಿಡವೊಂದು ೬೦-೭೦ ಹಣ್ಣುಗಳನ್ನು ಬಿಟ್ಟಿದೆ. ಮುಂದಿನ ವರ್ಷಗಳಲ್ಲಿ ಹೆಚ್ಚಿನ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಸೇಬು ಹಣ್ಣುಗಳನ್ನು ಮನೆ ಬಳಕೆಗೆ, ಸ್ನೇಹಿತರಿಗೆ, ಬಂಧುಗಳಿಗೆ ಹಂಚಿ ಸಂಭ್ರಮಿಸುತ್ತಾರೆ. ಸೇಬು ಬೆಳೆಯಬೇಕೆಂಬ ಕನಸನ್ನು ತಮ್ಮ ಇಚ್ಛಾಶಕ್ತಿಯಿಂದ ನನಸಾಗಿಸಿ ಕೊಂಡಿದ್ದಾರೆ.
ಕೃಷಿಕ ಬೆಳ್ಳಿ ಮಿಶ್ರ ಬೆಳೆಗಳ ಜೊತೆಗೆ ಪಶುಪಾಲನೆ ಮತ್ತು ಜೇನು ಕೃಷಿಯನ್ನು ಸಹ ಮಾಡುತ್ತಿದ್ದಾರೆ. ತೋಟದಲ್ಲಿ ೨೦ ಜೇನು ಪಟ್ಟಿಗೆಗಳನ್ನಿಟ್ಟು ಕೇಳಿದವರಿಗೆ ತಾಜಾ ಜೇನು ಒದಗಿಸುತ್ತಿದ್ದಾರೆ. ಕೃಷಿಯಿಂದಲೇ ಬದುಕು ಕಟ್ಟಿಕೊಂಡು ಇತರರಿಗೆ ಮಾದರಿಯಾಗಿರುವ ಯುವ ಕೃಷಿಕ ಬೆಳ್ಳಿಗೆ ತಾಯಿ ಕಮಲಾ ಚಂದ್ರಶೇಖರ್ ಹಾಗೂ ಪತ್ನಿ ಮೋನಿಕಾ ಸಾಥ್ ನೀಡುತ್ತಾರೆ. “ಭೂಮಿ ತಾಯಿಯನ್ನು ನಂಬಿ ಕೃಷಿಯಲ್ಲಿ ಬದುಕು ರೂಪಿಸಿಕೊಂಡರೆ ನೆಮ್ಮದಿಯ ಜೀವನ ನಮ್ಮದಾಗುತ್ತದೆ. ತೋಟದಲ್ಲಿ ಯಾವುದೇ ಬೆಳೆ ಬೆಳೆಯುವಾಗ ಮೇಲ್ - ಫಿಮೇಲ್ ಗಿಡಗಳ ಜ್ಞಾನವಿರಬೇಕು. ಪರಾಗ ಸ್ಪರ್ಶಕ್ಕಾಗಿ ಜೇನು ಕೃಷಿಯನ್ನು ಮಾಡಿದರೆ ಉತ್ತಮ ಗುಣಮಟ್ಟದ ಬೆಳೆ ಬೆಳೆಯಬಹುದು. ಹೆಚ್ಚಿನ ಇಳುವರಿಯನ್ನು ಸಹ ಪಡೆಯಬಹುದು’’ ಎಂದು ಯುವ ಕೃಷಿಕ ಬೆಳ್ಳಿ ಕಿವಿಮಾತು ಹೇಳುತ್ತಾರೆ.
- ನಯನತಾರಾ