ಗೋಣಿಕೊಪ್ಪಲು, ಜು. ೧೮: ಪುಸ್ತಕದ ಪುಟಗಳು ಮತ್ತು ಮೊಬೈಲ್ ಪರದೆಗಳಾಚೆ ಇಂದಿನ ಮಕ್ಕಳು ಭತ್ತದ ಗದ್ದೆಯ ಕೆಸರಿನಲ್ಲಿ ಆಟವಾಡುತ್ತಾ ಕೃಷಿ ಹಾಗೂ ಕೊಡಗಿನ ಸಂಸ್ಕೃತಿಯ ಪಾಠ ಕಲಿಯುವ ಅಪರೂಪದ ಕಾರ್ಯಕ್ರಮ ಗೋಣಿಕೊಪ್ಪ ಸಮೀಪದ ಬಿಟ್ಟಂಗಾಲದಲ್ಲಿ ನಡೆಯಿತು.
ಕೊಡಗಿನ ಕೃಷಿ, ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಕಳೆದ ೨೫ ವರ್ಷಗಳಿಂದ ಪಸರಿಸುತ್ತ ಬಂದಿರುವ ಸಮಾಜ ಸೇವಕ ಕಾಳೇಂಗಡ ರಮೇಶ್ ಕಾರ್ಯಪ್ಪ ಅವರು ಈ ವರ್ಷವೂ ತಮ್ಮ ಭತ್ತದ ಗದ್ದೆಯಲ್ಲಿ ಶಾಲಾ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಕೃಷಿಯ ಮಹತ್ವವನ್ನು ಪರಿಚಯಿಸಿದರು.
ಪ್ರತಿ ವರ್ಷ ಜುಲೈ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುತ್ತಮುತ್ತಲಿನ ಶಾಲಾ ಮಕ್ಕಳನ್ನು ತಮ್ಮ ಗದ್ದೆಗೆ ಆಹ್ವಾನಿಸುವ ಮೂಲಕ ಕೃಷಿಯೊಂದಿಗೆ ಮಕ್ಕಳನ್ನು ಬೆಸೆಯುವ ಕಾರ್ಯವನ್ನು ಅವರು ನಿರಂತರವಾಗಿ ನಡೆಸುತ್ತಿದ್ದಾರೆ. ಈ ಬಾರಿ ವೀರಾಜಪೇಟೆಯ ಪ್ರಗತಿ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೆಸರಿನಲ್ಲಿ ನಾಟಿ ನೆಡುವ ಅನುಭವ ಪಡೆದ ಮಕ್ಕಳು ಸಂಭ್ರಮದಿAದ ಭಾಗವಹಿಸಿದರು. ನಾಟಿ ಓಟದ ಸ್ಪರ್ಧೆ, ಕೊಡಗಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಜಾನಪದ ಹಾಡುಗಳು ಹಾಗೂ ಗದ್ದೆ ಪಕ್ಕದ ತೋಡಿನಲ್ಲಿ ಈಜಾಟದ ಮೂಲಕ ಮಕ್ಕಳು ಪ್ರಕೃತಿಯ ಮಡಿಲಲ್ಲಿ ಹೊಸ ಅನುಭವವನ್ನು ಪಡೆದರು.
ಮೊಬೈಲ್ ಮತ್ತು ಓದಿನ ಒತ್ತಡದ ನಡುವೆ ಬೆಳೆದಿರುವ ಮಕ್ಕಳಿಗೆ ಮಣ್ಣಿನ ವಾಸನೆ, ಕೃಷಿಯ ಅನುಭವ ಹಾಗೂ ಪ್ರಕೃತಿಯೊಂದಿಗಿನ ಒಡನಾಟ ಜೀವನದಲ್ಲಿ ಮರೆಯಲಾಗದ ನೆನಪಾಗಿ ಉಳಿಯಿತು. ಯಾವುದೇ ಫಲಾಪೇಕ್ಷೆಯಿಲ್ಲದೆ ಕಳೆದ ೨೫ ವರ್ಷಗಳಿಂದ ಕೊಡಗಿನ ಹಲವು ಶಾಲೆಗಳ ವಿದ್ಯಾರ್ಥಿಗಳನ್ನು ತಮ್ಮ ಮನೆಗೆ ಆಹ್ವಾನಿಸಿ, ಕೃಷಿ ಹಾಗೂ ಕೊಡವ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಿರುವ ಕಾಳೇಂಗಡ ರಮೇಶ್ ಕಾರ್ಯಪ್ಪ ಅವರ ಸೇವೆ ಶ್ಲಾಘನೀಯವಾಗಿದೆ. ಕಾರ್ಯಕ್ರಮದ ಬಳಿಕ ನಾಟಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಜೊತೆಗೆ ಹಲಸಿನ ಬೀಜ ಮತ್ತು ಅವಲಕ್ಕಿಯ ಪ್ರಸಾದವನ್ನು ಮಕ್ಕಳಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಪ್ರಗತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು. - ಹೆಚ್.ಕೆ. ಜಗದೀಶ್