ಕಣಿವೆ, ಜು. ೧೭: ಕಳೆದ ೬೦ ವರ್ಷಗಳಲ್ಲಿಯೇ ಇದೇ ಮೊದಲ ಬಾರಿಗೆ ಕುಶಾಲನಗರ ಭಾಗದಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವು ಗಣನೀಯವಾಗಿ ಕುಸಿತ ಕಂಡಿದೆ.

ಮಳೆಗಾಲದ ದಿನಗಳ ಜುಲೈ ಮಾಸದ ಆಷಾಡ ತಿಂಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಿ ಶೀತ ಪೀಡಿತಗೊಂಡು ಭೂಮಿಯ ಒಳ ಪದರದಿಂದ ನೀರು ಜಿನುಗುತ್ತಿದ್ದ ಆ ಕಾಲವೆಲ್ಲಿ....?

ಅದೇ ಜುಲೈ ಮಾಸ, ಅದೇ ಆಷಾಡದ ಈ ದಿನಗಳಲ್ಲಿ ಮಳೆ ಸಕಾಲದಲ್ಲಿ ಸುರಿಯದೇ ಕೈಕೊಟ್ಟ ಪರಿಣಾಮ ಭೂಮಿಯೇ ಒದ್ದೆಯಾಗದ, ಅಂತರ್ಜಲ ಪಾತಾಳಕ್ಕೆ ಇಳಿಯುವ ಪ್ರಸಕ್ತ ವಾತಾವರಣವೆಲ್ಲಿ...!

ಕಾವೇರಿ ನದಿಯಲ್ಲಿ ಕಳೆದ ವರ್ಷ ನೀರಿನ ಹರಿವು ಹೆಚ್ಚಳವಾಗಿ ಕಣಿವೆ ಬಳಿ ನದಿ ತುಂಬಿ ಹರಿಯುವುದನ್ನು ಜನ ಕಣ್ತುಂಬಿಕೊಳ್ಳುತ್ತಿದ್ದರು.

ಆದರೆ ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿದೆ. ಕಾವೇರಿ ನದಿಯಲ್ಲಿ ನೀರಿನ ಹರಿವು ಗಣನೀಯವಾಗಿ ಕುಸಿತ ಕಂಡಿದೆ. ಭೂ ಮೇಲುಪದರ ನೀರಿಲ್ಲದೇ ಒಣಗುತ್ತಿದ್ದು ಜಾನುವಾರುಗಳು ಕುಡಿಯುವ ನೀರು ಹಾಗೂ ಮೆಲ್ಲುವ ಹಸಿರು ಹುಲ್ಲಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆಗಾಲದ ಈ ದಿನಗಳಲ್ಲಿ ಸಹಜವಾಗಿಯೇ ಯಥೇಚ್ಛವಾದ ಮಳೆ ಸುರಿದು ನೀರಿನ ಹರಿವು ಕಣಿವೆ ಬಳಿ ಕಾವೇರಿಯಲ್ಲಿ ಗಣನೀಯವಾಗಿ ಹೆಚ್ಚಿರುತ್ತಿತ್ತು.

ಕುಡಿಯುವ ನೀರು ಪೂರೈಸುವ ನೆಲ ಬಾವಿಗಳು ಈ ಬಾರಿ ನೀರಿಲ್ಲದೇ ಬಹುತೇಕ ಕಡೆಗಳಲ್ಲಿ ಭಣಗುಡುತ್ತಿವೆ. ಪರಿಸ್ಥಿತಿ ಹೀಗೆಯೇ ಮುದುವರೆದರೆ ಕೃಷಿಗಿರಲಿ ಕುಡಿಯಲು ಕೂಡ ನೀರಿಲ್ಲದ ದುಸ್ಥಿತಿ ನಿರ್ಮಾಣಗೊಂಡರೂ ಅಚ್ಚರಿಯಿಲ್ಲ.

ಭತ್ತ ಬಿತ್ತಿರುವ ಅನ್ನದಾತರು

ಯಾವ ಮಳೆ ಕೈಕೊಟ್ಟರೂ ಕೂಡ ಪುನರ್ವಸು ಕೈಹಿಡಿದೇ ಹಿಡಿಯುತ್ತದೆ. ಬರಿದಾದ ಹಾರಂಗಿ ಒಡಲು ತುಂಬುತ್ತದೆ ಎಂಬ ಆಶಾಭಾವನೆಯೊಂದಿಗೆ ವಾಡಿಕೆಯಂತೆ ಮಳೆ ಸುರಿಸಿ ಹಾರಂಗಿ ಜಲಾಶಯ ಭರ್ತಿ ಮಾಡಬೇಕಿದ್ದ ಪುನರ್ವಸು ಏಕೋ ಏನೋ ಈ ಬಾರೀ ಮುನಿಸಿದಂತೆ ಭಾಸವಾಗಿದೆ. ಜಲಾಶಯ ತುಂಬುವುದಿರಲಿ, ಜನ ಜಾನುವಾರು ನೀರು ಕುಡಿಯಲು ಪೂರಕವಾಗಿರ ಬೇಕಾದ ಮಳೆ ಬರಲೇ ಇಲ್ಲ. ಹಾಗಾಗಿ ಹಾರಂಗಿ ಅಚ್ಚುಕಟ್ಟು ಪ್ರದೇಶದ ಬಹುತೇಕ ಅನ್ನದಾತರು ಹಾರಂಗಿ ಕಾಲುವೆಯ ನೀರು ನಂಬಿ ಭತ್ತದ ಒಗ್ಗು ತಯಾರಿಯಲ್ಲಿ ನಿರತರಾಗಿದ್ದಾರೆ.

ಈಗ ಕಳೆದ ನಾಲ್ಕು ದಿನಗಳಿಂದ ಹೆಚ್ಚಿರುವ ಬಿಸಿಲಿನ ಬಿರುಸಿಗೆ ಭತ್ತದ ಬೀಜದ ಗದ್ದೆಗೂ ನೀರಿಲ್ಲದೇ ಭಣಗುಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ರೈತರು ಬಾವಿಗಳಿಂದ ತಂದು ನೀರು ಹಾಯಿಸಿ ಭತ್ತದ ಒಗ್ಗು ನಿರ್ವಹಿಸುತ್ತಿರುವುದು ಕಂಡು ಬರುತ್ತಿದೆ.

- ಕೆ.ಎಸ್. ಮೂರ್ತಿ