ಸಿದ್ದಾಪುರ, ಜು. ೧೭: ಸಿದ್ದಾಪುರ ಪೊಲೀಸ್ ಠಾಣಾ ವತಿಯಿಂದ ಸಿದ್ದಾಪುರದ ಸೆಂಟಿನರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಅರಿವು ಹಾಗೂ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಮಾತನಾಡಿ, ಸಿದ್ದಾಪುರ ಪಟ್ಟಣ ವ್ಯಾಪ್ತಿಯಲ್ಲಿ ಆಟೋ ಚಾಲಕರು ಕಾನೂನು ಪಾಲನೆಯೊಂದಿಗೆ ರಸ್ತೆ ಸಂಚಾರ ನಿಯಮವನ್ನು ಪಾಲಿಸಬೇಕೆಂದು ಕರೆ ನೀಡಿದರು. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದಾಗಿ ಎಚ್ಚರಿಕೆಯನ್ನು ನೀಡಿದರು. ನಿಗದಿತ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸುವಂತೆ ತಿಳಿಸಿದ ಅವರು, ವಾಹನ ಚಾಲಕರು ಮದ್ಯಪಾನ ಸೇವಿಸಿ ಹಾಗೂ ಮಾದಕ ವಸ್ತುಗಳನ್ನು ಸೇವನೆ ಮಾಡಿ ವಾಹನ ಚಲಾಯಿಸುವುದು ಕಂಡುಬAದಲ್ಲಿ ಅಂಥವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದೆಂದು ತಿಳಿಸಿದರು. ಪ್ರತಿಯೊಂದು ಆಟೋ ಚಾಲಕರು ಪ್ರತಿನಿತ್ಯ ಸಮವಸ್ತçವನ್ನು ಧರಿಸಿ ದಾಖಲಾತಿಗಳನ್ನು ಸಮರ್ಪಕವಾಗಿ ಇಟ್ಟುಕೊಳ್ಳುವಂತೆ ಸೂಚನೆ ನೀಡಿದರು.
ಸಾರ್ವಜನಿಕ ಸ್ಥಳದಲ್ಲಿ ಮಾಂಸ ಮಾರಾಟ ಮಾಡುವವರು ತ್ಯಾಜ್ಯ ವಿಲೇವಾರಿ ಮಾಡಿದ್ದಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು. ಹದಿಹರೆಯದವರು ವಾಹನ ಚಲಾಯಿಸುತ್ತಿರುವುದನ್ನು ಕಂಡುಬAದಲ್ಲಿ ಹಾಗೂ ಸಂಶಯಾಸ್ಪದವಾಗಿ ಅಪರಿಚಿತರನ್ನು ಕಂಡುಬAದರೆ ಹಾಗೂ ಗಾಂಜಾ ಸೇವನೆ ಗಾಂಜಾ ಮಾರಾಟ ಮಾಡುವವರ ಬಗ್ಗೆ ಠಾಣೆಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು. ಪಟ್ಟಣ ವ್ಯಾಪ್ತಿಯಲ್ಲಿ ಈಗಾಗಲೇ ಸಿಸಿ ಕ್ಯಾಮರ ಅಳವಡಿಸಲಾಗಿದ್ದು ಹೆಚ್ಚಿನ ಮುಂಜಾಗ್ರತಾ ಕ್ರಮವಾಗಿ ಎರಡು ಎ.ಐ. ಸಿಸಿ ಕ್ಯಾಮರಾ ಅಳವಡಿಸಲಾಗುವುದು ಎಂದರು.
ಆಟೋಗೆ ಅಲಂಕಾರ ಸಲ್ಲದು
ಜಿಲ್ಲಾ ಸಾರಿಗೆ ಇಲಾಖೆಯ ಅಧಿಕಾರಿ ಪ್ರದೀಪ್ ಮಾತನಾಡಿ, ಹೊಟ್ಟೆ ಪಾಡಿಗಾಗಿ ಆಟೋ ಚಾಲನೆ ಮಾಡಿ ಬದುಕುವವರು ಆಟೋ ರಿಕ್ಷಾಗಳನ್ನು ಸಾವಿರಾರು ರೂಪಾಯಿ ಖರ್ಚು ಮಾಡಿ ಅಲಂಕಾರ ಮಾಡುತ್ತಿರುವುದು ಕಂಡುಬರುತ್ತಿದ್ದು, ಇಂತಹ ಆಟೋ ರಿಕ್ಷಾಗಳನ್ನು ಪತ್ತೆಹಚ್ಚಿ ದಂಡವಿಧಿಸಲಾಗುವುದು. ಅಲ್ಲದೆ ಜಿಲ್ಲೆಯಲ್ಲಿ ೩ ಸಾವಿರಕ್ಕೂ ಅಧಿಕ ಆಟೋ ರಿಕ್ಷಾಗಳು ದಾಖಲೆಗಳಿಲ್ಲದೆ ಓಡಾಡುತ್ತಿದ್ದು ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು. ಆಟೋ ರಿಕ್ಷಾಗಳಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುವುದು ಕಾನೂನು ಬಾಹಿರವಾಗಿದೆ. ಅಲ್ಲದೆ, ಖಾಸಗಿ ವಾಹನಗಳನ್ನು ಬಾಡಿಗೆಗೆ ಬಳಸುವಂತಿಲ್ಲ ಎಂದರು.ಇತ್ತೀಚೆಗೆ ಖಾಸಗಿ ವಾಹನಗಳು ಬಾಡಿಗೆಗೆ ತೆರಳುತ್ತಿದ್ದು ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದೆಂದು ಸೂಚನೆ ನೀಡಿದರು. ಖಾಸಗಿ ವಾಹನಗಳನ್ನು ಬಾಡಿಗೆಗೆ ಬಳಸುವ ಸಂದರ್ಭ ಅಪಘಾತವಾದಲ್ಲಿ ವಿಮೆ ಸಿಗುವುದಿಲ್ಲ ಎಂಬ ಅರಿವು ಚಾಲಕರಿಗೆ ಇರಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭ ಸಿದ್ದಾಪುರದಲ್ಲಿ ಖಾಸಗಿ ವಾಹನಗಳು ಬಾಡಿಗೆಗೆ ತೆರಳುತ್ತಿರುವ ಹಾವಳಿ ಹೆಚ್ಚಾಗಿದ್ದು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಟ್ಯಾಕ್ಸಿ ಚಾಲಕರು ಮನವಿ ಮಾಡಿದರು. ಅಲ್ಲದೆ ಸಿದ್ದಾಪುರ ನೆಲ್ಲಿಹುದಿಕೇರಿ ವ್ಯಾಪ್ತಿಯಲ್ಲಿ ಹದಿಹರೆಯದವರು ವಾಹನ ಚಲಾಯಿಸುತ್ತಿದ್ದು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದರು. ಬಾಡಿಗೆ ಕಾರು ಚಾಲಕರ ಸಂಘದ ಸದಸ್ಯ ಇಟ್ಟ ಮಾತನಾಡಿ, ಸಿದ್ದಾಪುರ ಪಟ್ಟಣದಲ್ಲಿ ಬಿಳಿ ಬಣ್ಣದ ನಾಮಫಲಕ ಅಳವಡಿಸಿದ ಬೊಲೆರೋ ಜೀಪುಗಳು ಬಾಡಿಗೆಗೆ ತೆರಳುತ್ತಿದ್ದು ಇದಲ್ಲದೆ ಕೇರಳ ರಾಜ್ಯದ ನೋಂದಣಿ ಜೀಪುಗಳು ಸಹ ಕಡಿಮೆ ದರವನ್ನು ನಿಗದಿಪಡಿಸಿ ಬಾಡಿಗೆಗೆ ತೆರಳುತ್ತಿರುವುದು ಹಳದಿ ಬಣ್ಣದ ಕಾರು ಚಾಲಕರಿಗೆ ಸಮಸ್ಯೆ ಎದುರಾಗಿದೆ ಎಂದು ದೂರು ನೀಡಿದರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸಭೆಯಲ್ಲಿ ಪ್ರೊಬೇಷನರಿ ಠಾಣಾಧಿಕಾರಿ ಶ್ವೇತಾ ಸಮಾಜ ಸೇವಕ ಜೋಸೆಫ್ ಶ್ಯಾಂ, ಅಂಗಡಿ ಮಾಲೀಕರು, ಆಟೋಚಾಲಕರು, ಟ್ಯಾಕ್ಸಿ ಚಾಲಕರು ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.