ಪೊನ್ನಂಪೇಟೆ, ಜು. ೧೭: ಸಂಚಾರ ನಿಯಮಗಳ ಜಾರಿ ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಪೊನ್ನಂಪೇಟೆ ಪೊಲೀಸರು ನಿನ್ನೆ ವಿಶೇಷ ವಾಹನ ತಪಾಸಣಾ ಕಾರ್ಯಾಚರಣೆ ನಡೆಸಿದರು.

ಈ ವೇಳೆ ಆಟೋ ರಿಕ್ಷಾಗಳ ಪಿ.ಪಿ.ಎಸ್ ನಂಬರ್ ಫಲಕ ಮತ್ತು ದಾಖಲೆಗಳನ್ನು ಪೊಲೀಸರು ಕಟ್ಟುನಿಟ್ಟಾಗಿ ಪರಿಶೀಲಿಸಿದರು. ವಿಮೆ, ಆರ್.ಸಿ, ಡ್ರೈವಿಂಗ್ ಲೈಸೆನ್ಸ್, ಫಿಟ್‌ನೆಸ್ ಪ್ರಮಾಣಪತ್ರ ಸೇರಿದಂತೆ ಎಲ್ಲಾ ದಾಖಲೆಗಳು ಸರಿಯಾಗಿವೆಯೇ ಎಂದು ಪರಿಶೀಲನೆ ನಡೆಸಿದರು.

ಇದೇ ಸಂದರ್ಭದಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರರ ವಿರುದ್ಧ ದಂಡ ವಿಧಿಸಲಾಯಿತು. ನಿಯಮ ಉಲ್ಲಂಘಿಸಿದವರಿಗೆ ದಂಡದ ಜೊತೆಗೆ ಹೆಲ್ಮೆಟ್ ಧರಿಸುವ ಮಹತ್ವ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಪೊಲೀಸರು ಜಾಗೃತಿ ಮೂಡಿಸಿದರು.

ತಮ್ಮ ಜೀವನದ ರಕ್ಷಣೆಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ. ಸಂಚಾರ ನಿಯಮಗಳನ್ನು ಪಾಲಿಸಿ, ಅಪಘಾತಗಳನ್ನು ತಪ್ಪಿಸಿ ಎಂದು ಪೊನ್ನಂಪೇಟೆ ಪೊಲೀಸರು ವಾಹನ ಸವಾರರಿಗೆ ಮನವಿ ಮಾಡಿದರು. ಮುಂದಿನ ದಿನಗಳಲ್ಲಿಯೂ ಈ ರೀತಿಯ ತಪಾಸಣೆಯನ್ನು ಮುಂದುವರಿಸಲಾಗುವುದು ಎಂದು ಠಾಣಾಧಿಕಾರಿ ನವೀನ್ ತಿಳಿಸಿದರು. ಕಾರ್ಯಾಚರಣೆಯಲ್ಲಿ ಎಎಸ್ ಐ ಕೃಷ್ಣ, ಸಿಬ್ಬಂದಿಗಳಾದ ಮಹಮದ್ ಅಲಿ, ಸಂತೋಷ್, ವೇಣುಗೋಪಾಲ್, ವಿದ್ಯಾ ಬೆಳವಿ, ರಮ್ಯಾ ಹಾಗೂ ಚಾಲಕ ಬೀರಲಿಂಗ ಪಾಲ್ಗೊಂಡಿದ್ದರು.