ಭಾಗಮಂಡಲ, ಜು. ೧೭: ನಾಪೋಕ್ಲು ಭಾಗಮಂಡಲ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆ ದುರಸ್ತಿ ಕಾರ್ಯವನ್ನು ಕೂಡಲೆ ಕೈಗೆತ್ತಿಕೊಳ್ಳುವಂತೆ ಭಾಗಮಂಡಲ ಶಕ್ತಿ ಕೇಂದ್ರ ಆಗ್ರಹಿಸಿದೆ. ಇದಲ್ಲದೆ ಮೇಲ್ ಸೇತುವೆ ದುರಸ್ತಿ ಕಾರ್ಯವನ್ನು ಶೀಘ್ರ ಕೈಗೊಳ್ಳುವಂತೆ ಶಕ್ತಿ ಕೇಂದ್ರ ಒತ್ತಾಯಿಸಿದೆ. ಭಾಗಮಂಡಲ ಅಯ್ಯಂಗೇರಿ ಹಾಗೂ ಚೆಟ್ಟಿಮಾನಿ ಭಾಗದ ಸಾರ್ವಜನಿಕರು ಹಲವು ಬಾರಿ ಕಾವೇರಿ ನೀರಾವರಿ ನಿಗಮಕ್ಕೆ ಮತ್ತು ಲೋಕೋಪಯೋಗಿ ಇಲಾಖೆಗೆ ರಸ್ತೆ ದುರಸ್ತಿ ಪಡಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಭಾಗಮಂಡಲ ಕರಿಕೆ ರಸ್ತೆ ಮತ್ತು ಭಾಗಮಂಡಲ ನಾಪೋಕ್ಲು ರಸ್ತೆಯಲ್ಲಿ ವಾಹನಗಳು ಸಂಚರಿಸಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ .ಅಲ್ಲದೆ ಭಾಗಮಂಡಲ ಮೇಲ್ ಸೇತುವೆ ಸಂಬAಧ ಪಟ್ಟಂತೆ ರಸ್ತೆಯಲ್ಲಿ ಮೊಣಕಾಲುವರೆಗೆ ನೀರು ನಿಲ್ಲುವ ಪರಿಸ್ಥಿತಿ ಉಂಟಾಗಿದೆ. ಮೇಲ್ ಸೇತುವೆಯಿಂದ ಬೀಳುವಂತಹ ನೀರು ಚರಂಡಿಗೆ ಹೋಗದೆ ಜನರ ಮತ್ತು ವಾಹನಗಳ ಮೇಲೆ ನೇರವಾಗಿ ಬೀಳುತ್ತಿದ್ದು ತಕ್ಷಣ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದೆ. ಉದ್ಘಾಟನಾ ಸಂದರ್ಭದಲ್ಲಿ ಮಾಡಿದ ನಾಮಫಲಕ ಬಿದ್ದು ಹೋಗಿದೆ. ಭಾಗಮಂಡಲ ವ್ಯಾಪ್ತಿಯ ಈ ಅಗತ್ಯ ಕಾಮಗಾರಿಗಳನ್ನು ಮೂರು ದಿನಗಳೊಳಗೆ ಕೈಗೊಳ್ಳದಿದ್ದಲ್ಲಿ ಸೋಮವಾರ ಬೆಳಿಗ್ಗೆ ೧೦.೩೦ ಗಂಟೆಯಿAದ ೧೨ ಗಂಟೆವರೆಗೆ ನಾಪೋಕ್ಲು ಭಾಗಮಂಡಲ ಮಡಿಕೇರಿ ಭಾಗಮಂಡಲ ರಸ್ತೆಯ ಸಂಪರ್ಕಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸಲಾಗುವುದು ಎಂದು ಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.