ಕೂಡಿಗೆ, ಜು. ೧೪: ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನೂತನವಾಗಿ ಒಂದು ಕೋಟಿ ವೆಚ್ಚದ ಸುಸಜ್ಜಿತ ನೂತನ ಗ್ರಂಥಾಲಯ ಕಟ್ಟಡದ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ಶಾಸಕ ಡಾ. ಮಂತರ್ ಗೌಡ ನೆರವೇರಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಒಳ್ಳೆಯ ಪುಸ್ತಕಗಳನ್ನು ಅಧ್ಯಯನ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಇಂದಿನ ಯುವಕರ ಪಾತ್ರ ಅತೀ ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿದ್ದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಶಾಸಕ ಡಾ. ಮಂತರ್ ಗೌಡ ಅವ
ರು ತಾಲೂಕು ವ್ಯಾಪ್ತಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಮತ್ತು ಕಾರ್ಯಗತಗೊಳ್ಳುತ್ತಿರುವ ಯೋಜನೆಯ ಬಗ್ಗೆ ಮಾಹಿತಿಯಿತ್ತರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಮಾತನಾಡಿ, ವಿದ್ಯಾರ್ಥಿಗಳು ದೃಢ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಂಡು ಸಮಾಜದಲ್ಲಿ ಮುಂದೆ ಬರಬೇಕು ಎಂದು ಕಿವಿಮಾತು ಹೇಳಿದರು. ವೇದಿಕೆಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ವಿಕ್ಟರ್ ಸೋನ್ಸ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕಾಂಗ್ರೆಸ್ ಮುಖಂಡ ನಟೇಶ್ ಗೌಡ, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಂಜುನಾಥ ಗುಂಡೂರಾವ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ರಾಜೇಗೌಡ, ಕೃಷ್ಣಪ್ಪ, ಶುಭಾಕೃಷ್ಣ, ಕಾರ್ಯಪಾಲಕ ಇಂಜಿನಿಯರ್ ಕೃಷ್ಣಪ್ಪ, ಕಾಲೇಜು ಪ್ರಾಂಶುಪಾಲ ಡಾ. ಪುಟ್ಟರಾಜು, ಹೆಬ್ಬಾಲೆ ರಂಜು, ಗುಡ್ಡೆಹೊಸೂರು ಶೇಖರ್, ಕಾಲೇಜು ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಉಪನ್ಯಾಸಕಿ ಕುಸುಮ ಸ್ವಾಗತಿಸಿ, ವಂದಿಸಿದರು.