ಸೋಮವಾರಪೇಟೆ, ಜು. ೧೪: ಪಟ್ಟಣದ ಬಸವೇಶ್ವರ ರಸ್ತೆಯ ನಿವಾಸಿ ರಾಜಣ್ಣ ಎಂಬವರ ಮನೆಯ ಗೋಡೆ ಮೊನ್ನೆ ಸುರಿದ ಭಾರಿ ಗಾಳಿ - ಮಳೆಗೆ ಕುಸಿದು ಬಿದ್ದಿದ್ದು, ಘಟನಾ ಸ್ಥಳಕ್ಕೆ ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ ಪರಿಶೀಲಿಸಿದರು. ತಕ್ಷಣ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅವರಿಗೆ ಸೂಚಿಸಿದರು. ತಹಶೀಲ್ದಾರ್ಗೆ ಕರೆ ಮಾಡಿದ ಶಾಸಕರು, ತಾಲೂಕಿನಾದ್ಯಂತ ಮಳೆಗಾಲದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಮಳೆಯಿಂದ ಹಾನಿಗೊಳಗಾದ ಮನೆಗಳ ಬಗ್ಗೆ ತಕ್ಷಣ ಗಮನ ಹರಿಸಿ ಸೂಕ್ತ ಪರಿಹಾರ ಒದಗಿಸುವಂತೆ ತಿಳಿಸಿದರು. ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಯುವ ಕಾಂಗ್ರೆಸ್ ಅಧ್ಯಕ್ಷ ಡಿ.ಯು. ಕಿರಣ್. ಖಜಾಂಚಿ ಚೇತನ್, ಆಹಾರ ನಿರೀಕ್ಷಕ ಜಾಸಿಂ ಖಾನ್ ಸೇರಿದಂತೆ ಇತರರು ಇದ್ದರು.