ಮಡಿಕೇರಿ, ಜು. ೮: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾದ ಮಡಿಕೇರಿಯ ರಾಜಾಸೀಟ್ ಉದ್ಯಾನಕ್ಕೆ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಮಳೆಯಿಂದಾಗಿ ನಗರ ವ್ಯಾಪ್ತಿಯಲ್ಲಿ ಭೂಕುಸಿತ ಉಂಟಾಗಿ ಮಾರ್ಗ ಬದಲಾವಣೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಕ್ರಮ ಜರುಗಿಸಿದ್ದಾರೆ.
ವ್ಯಾಪಕ ಮಳೆಯಿಂದಾಗಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆ ಬದಿ ಭೂಕುಸಿತ ಉಂಟಾಗಿದ್ದು, ಮಡಿಕೇರಿ ನಗರ ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ಮಾರ್ಗ ಬದಲಾವಣೆ ಮಾಡಲಾಗಿದೆ. ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಡೆಯಿಂದ ಹೊರಹೋಗುವ ಎಲ್ಲ ವಾಹನಗಳು ರಾಜಾಸೀಟ್ ರಸ್ತೆಯನ್ನು ಬಳಸಿ ಸಂಚರಿಸುತ್ತಿವೆ. ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿರುವ ಕಾರಣ ಮತ್ತು ರಾಜಾಸೀಟ್ ಬಳಿ ಸಾರ್ವಜನಿಕರು ಹಾಗೂ ಪ್ರವಾಸಿಗರು ವಾಹನ ನಿಲುಗಡೆಗೊಳಿಸುತ್ತಿರುವ ಕಾರಣ ಸಂಚಾರ ವ್ಯವಸ್ಥೆಗೆ ಅಡಚಣೆ ಉಂಟಾಗುತ್ತಿದೆ. ಅಲ್ಲದೆ ರಾಜಾಸೀಟ್ ರಸ್ತೆಯಲ್ಲಿ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಶಾಲೆಯಿದ್ದು, ವಾಹನಗಳ ಅಧಿಕ ಸಂಚಾರ ಮತ್ತು ನಿಲುಗಡೆಯಿಂದ ಶಾಲಾ ಮಕ್ಕಳಿಗೂ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಅಡಚಣೆ ನಿವಾರಿಸಲು, ಸಾರ್ವಜನಿಕರ ಆಸ್ತಿಗಳ ರಕ್ಷಣೆ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರಾಜಾಸೀಟ್ ಬಳಿ ವಾಹನ ನಿಲುಗಡೆ ಮತ್ತು ರಾಜಾಸೀಟ್‌ಗೆ ಸಾರ್ವಜನಿಕರ, ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಮೋಟಾರು ವಾಹನಗಳ (ತಿದ್ದುಪಡಿ) ನಿಯಮಗಳು ೧೯೯೦ರ ನಿಯಮ ೨೨೧ಎ(೫)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕೊಡಗು ಜಿಲ್ಲಾಧಿಕಾರಿ ಹಾಗೂ ದಂಡಾಧಿಕಾರಿಯೂ ಆಗಿರುವ ಎಸ್.ಜೆ. ಸೋಮಶೇಖರ್ ತಾ. ೭ ರಿಂದ ೧೨ ರವರೆಗೆ ಮುಂಜಾಗ್ರತಾ ಕ್ರಮವಾಗಿ ರಾಜಾಸೀಟ್ ಬಳಿ ವಾಹನ ನಿಲುಗಡೆ ಹಾಗೂ ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.