ಮಡಿಕೇರಿ, ಜು. ೮: ಮಡಿಕೇರಿ ನಗರದ ಮಹದೇವಪೇಟೆಯಲ್ಲಿ ಈ ಹಿಂದೆ ಉದಾರ ದಾನಿಯೊಬ್ಬರು ಜಿಲ್ಲೆಯ ಮೂರು ಪ್ರಮುಖ ದೇವಾಲಯಗಳಿಗೆ ತಮ್ಮ ಆಸ್ತಿಯನ್ನು ಉದಾರ ದಾನವಾಗಿ ನೀಡಿ ವಿಲ್ ಬರೆದಿಟ್ಟಿದ್ದರು. ಇದೀಗ ಆ ಆಸ್ತಿಯನ್ನು ವಿಲೇವಾರಿ ಮಾಡಿ ಅದರ ಹಣವನ್ನು ದೇವಾಲಯಗಳ ಅಭಿವೃದ್ಧಿಗೆ ವಿನಿಯೋಗಿಸಲು ತೀರ್ಮಾನಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ದೇವಾಲಯ ಪ್ರಮುಖರುಗಳು ಸೇರಿ ನಿರ್ಧಾರ ಕೈಗೊಳ್ಳಲಾಯಿತು. ನ್ಯಾಯಾಲಯದ ಸಹಕಾರ ಪಡೆದು ಈ ಆಸ್ತಿಯನ್ನು ಮಾರಾಟಗೊಳಿಸಿ ಮೂರು ದೇವಾಲಯಗಳಿಗೆ ಈ ಹಣವನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ವಿನಿಯೋಗಿಸುವಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು.

ಉದಾರ ದಾನಿಗಳು ತಮ್ಮ ಆಸ್ತಿಯನ್ನು ವಿಕ್ರಯಗೊಳಿಸಿದ ಬಳಿಕ ಅದರಲ್ಲಿ ದೊರಕುವ ಹಣವನ್ನು ಭಾಗಮಂಡಲ - ತಲಕಾವೇರಿ ದೇವಾಲಯಗಳಿಗೆ ಶೇ. ೫೦, ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ಶೇ. ೨೫ ಹಾಗೂ ಪಾಡಿ ಇಗ್ಗುತಪ್ಪ ದೇವಾಲಯಕ್ಕೆ ಶೇ. ೨೫ ರಷ್ಟನ್ನು ವಿತರಿಸುವಂತೆ ತಮ್ಮ ವಿಲ್‌ನಲ್ಲಿ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕ್ರಿಯೆ ಪ್ರಾರಂಭಿಸಲು ನಿರ್ಧರಿಸಲಾಗಿದೆ.

ಸಭೆಯಲ್ಲಿ ಓಂಕಾರೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಚುಮ್ಮಿ ದೇವಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಸಿ. ದೇವರಾಜು, ಪಾಡಿ ಇಗ್ಗುತಪ್ಪ ದೇವಾಲಯದ ಅಧ್ಯಕ್ಷ ರಾಜಾ ಪೂವಣ್ಣ, ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ಭಾಗಮಂಡಲ - ತಲಕಾವೇರಿ ದೇವಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಜಿಲ್ಲಾಡಳಿತದ ಕಾನೂನು ಸಲಹೆಗಾರರಾದ ಲೋಕೇಶ್ ಕುಮಾರ್, ಓಂಕಾರೇಶ್ವರ ದೇವಾಲಯ ಸಮಿತಿಯ ಸದಸ್ಯರಾದ ವಕೀಲ ಎಂ.ಎ. ನಿರಂಜನ್, ಜಿ. ರಾಜೇಂದ್ರ ಉಪಸ್ಥಿತರಿದ್ದರು.