ಮಡಿಕೇರಿ, ಜು. ೮: ಜಿಲ್ಲೆಯಲ್ಲಿ ಪುನರ್ವಸು ಮಳೆಯ ರಭಸ ಮುಂದುವರಿದಿದೆ. ವ್ಯಾಪಕ ಮಳೆಯಿಂದಾಗಿ ಹಲವೆಡೆಗಳಲ್ಲಿ ಪರಿಸ್ಥಿತಿ ಅಸ್ತವ್ಯಸ್ತಗೊಂಡಿದ್ದು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ದಕ್ಷಿಣ ಕೊಡಗಿನ ಪೊನ್ನಂಪೇಟೆ, ವೀರಾಜಪೇಟೆ ತಾಲೂಕು ಹಾಗೂ ಮಡಿಕೇರಿ ತಾಲೂಕಿನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ಈ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ವ್ಯವಸ್ಥೆ ಸ್ಥಗಿತಗೊಂಡಿದ್ದು, ಸೆಸ್ಕ್ನಿಂದ ಹಾನಿಯನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಮಳೆಗಾಳಿ ಇದೇ ರೀತಿ ಮುಂದುವರೆದಲ್ಲಿ ಇನ್ನೂ ಕೆಲವು ದಿನ ವಿದ್ಯುತ್ ಸಮಸ್ಯೆ ಮುಂದುವರಿಯುವ ಸಾಧ್ಯತೆ ಇದೆ.

ಕಾವೇರಿ, ಲಕ್ಷö್ಮಣತೀರ್ಥ ಸೇರಿದಂತೆ ಇತರ ನದಿ-ತೊರೆಗಳಲ್ಲಿ ನೀರಿನ ಮಟ್ಟದಲ್ಲಿ ಹೆಚ್ಚಳವಾಗುತ್ತಿದೆ. ಕುಶಾಲನಗರ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಿದ್ದರೂ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆ ಹೆಚ್ಚಿರುವುದರಿಂದ ಕಾವೇರಿ ನದಿಯಲ್ಲಿ ನೀರಿನಮಟ್ಟ ಹೆಚ್ಚಳವಾಗುತ್ತಿರುವುದು ಇಲ್ಲಿನ ನಿವಾಸಿಗಳು ಮಳೆ ಕಡಿಮೆಯಿದ್ದರೂ ಆತಂಕದ ಸನ್ನಿವೇಶ ಎದುರಿಸುತ್ತಿದ್ದಾರೆ.

ಸರಾಸರಿ ೨.೪೦ ಇಂಚು

ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸರಾಸರಿ ೨.೪೦ ಇಂಚುಗಳಷ್ಟು ಮಳೆ ದಾಖಲಾಗಿದೆ. ಮಡಿಕೇರಿ ತಾಲೂಕಿನಲ್ಲಿ ೩.೫೦ ಇಂಚು ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ ೩.೭೫ ಇಂಚು ಸರಾಸರಿ ಮಳೆ ೨೪ ಗಂಟೆಗಳಲ್ಲಿ ಸುರಿದಿದೆ.

ವೀರಾಜಪೇಟೆ ತಾಲೂಕಿನಲ್ಲಿ ಸರಾಸರಿ ೨ ಇಂಚು, ಸೋಮವಾರಪೇಟೆ ೨.೨೫ ಹಾಗೂ ಕುಶಾಲನಗರ ತಾಲೂಕಿನಲ್ಲಿ ೦.೬೭ ಇಂಚು ಮಳೆಯಾಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಹಲವು ಗ್ರಾಮಗಳ ಜನರು ಹಲವು ಬವಣೆ ಎದುರಿಸುವಂತಾಗಿದೆ.

ಪೊನ್ನಂಪೇಟೆ ಹೋಬಳಿಗೆ ೭.೪೦ ಇಂಚು

ಪೊನ್ನAಪೇಟೆ ಹೋಬಳಿಯಲ್ಲಿ ಕಳೆದ ೨೪ ಗಂಟೆಗಳಲ್ಲಿ ೭.೪೦ ಇಂಚುಗಳಷ್ಟು ಭಾರೀ ಮಳೆಯಾಗಿದೆ. ಇತ್ತ ಮಡಿಕೇರಿ ತಾಲೂಕಿನ ಭಾಗಮಂಡಲ ಹೋಬಳಿಯಲ್ಲೂ ೬.೬೮ ಇಂಚುಗಳಷ್ಟು ಮಳೆ ೨೪ ಗಂಟೆಗಳ ಅವಧಿಯಲ್ಲಿ ಸುರಿದಿದೆ. ಉಳಿದಂತೆ ಮಡಿಕೇರಿ ೨.೦೮, ನಾಪೋಕ್ಲು ೨.೩೯, ಸಂಪಾಜೆ ೨.೮೮, ವೀರಾಜಪೇಟೆ ೨.೨೬, ಅಮ್ಮತ್ತಿ ೧.೮೦, ಹುದಿಕೇರಿ ೩.೩೨, ಶ್ರೀಮಂಗಲ ೧.೯೫, ಬಾಳೆಲೆ ೨.೨೮ ಇಂಚು ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನ ಸೋಮವಾರಪೇಟೆ ಹೋಬಳಿ ೧.೭೬, ಶನಿವಾರಸಂತೆ ೧.೭೫, ಶಾಂತಳ್ಳಿ ೩.೩೨, ಕೊಡ್ಲಿಪೇಟೆ ೨.೬೦ ಇಂಚು ಮಳೆಯಾಗಿದ್ದರೆ ಕುಶಾಲನಗರ ೦.೪೧, ಸುಂಟಿಕೊಪ್ಪ ಹೋಬಳಿಯಲ್ಲಿ ೦.೭೬ ಇಂಚು ಮಳೆಯಾಗಿದೆ.