ಗೋಣಿಕೊಪ್ಪಲು. ಜು. ೮ : ಕಳೆದ ಎರಡು ದಿನಗಳಿಂದ ರೈತರ ಕೆರೆಯಲ್ಲಿಯೇ ಕಾಲ ಕಳೆದಿದ್ದ ಕಾಡಾನೆಯೊಂದು ಮೂರು ದಿನಗಳ ನಂತರ ಕೆರೆಯಿಂದ ಮೇಲೆಳುವ ಮೂಲಕ ಸಮೀಪದ ಕಾಡಿನತ್ತ ಹೆಜ್ಜೆ ಹಾಕಿದೆ.
ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಕಾಡಾನೆ ಸಂಚಾರದ ಬಗ್ಗೆ ನಿಗಾವಹಿಸಿದ್ದು, ಕೆರೆಯಿಂದ ತೆರಳಿದ ಕಾಡಾನೆ ಬಗ್ಗೆ ಮಾನಿಟರ್ ಮಾಡುತ್ತಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಆಹಾರ ಅರಸಿ ಕಾಡಿನಿಂದ ನಾಡಿಗೆ ಆಗಮಿಸಿದ್ದ ಕಾಡಾನೆಯು ಜನವಸತಿ ಪ್ರದೇಶವಾದ ಪೊನ್ನಂಪೇಟೆ ತಾಲೂಕಿನ ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಂಬಾಡಿ ರೈತರ ಕೆರೆಯಲ್ಲಿ ಇಳಿದಿತ್ತು. ನಂತರ ಕೆರೆಯಿಂದ ಹೊರಬರಲಾರದೇ ಒಂದೇ ಸಮನೆ ಘೀಳಿಡುತ್ತಾ ಕೆರೆಯಲ್ಲಿಯೇ ದಿನ ಕಳೆಯುತ್ತಿತ್ತು.
ಈ ಬಗ್ಗೆ ‘ಶಕ್ತಿ’ ವರದಿ ಪ್ರಕಟಿಸಿತ್ತು. ಸುದ್ದಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಮುಂಜಾನೆ ವೇಳೆ ತೆರಳಿ ಪರಿಶೀಲನೆ ನಡೆಸಿದ್ದರು.
ಕೆರೆಯಲ್ಲಿದ್ದ ಕಾಡಾನೆಯೂ ಬುಧವಾರ ಮಧ್ಯಾಹ್ನ ೩ ಗಂಟೆಯ ವೇಳೆ ತಾನಾಗಿಯೇ ಕೆರೆಯಿಂದ ಹೊರ ಬಂದು ಸಮೀಪದ ಅರಣ್ಯ ಪ್ರದೇಶದತ್ತ ತೆರಳಿದೆ. ಸುತ್ತಮುತ್ತಲಿನ ಪ್ರದೇಶದ ಗ್ರಾಮಸ್ಥರು ಕೊಂಚ ನಿರಾಳರಾಗಿದ್ದಾರೆ. ಕಾಡಾನೆಗಳಿಗೆ ಆರೋಗ್ಯ ಸಮಸ್ಯೆ ಎದುರಾದ ಸಂದರ್ಭದಲ್ಲಿ ಸಹಜವಾಗಿ ಕಾಡಾನೆಗಳು ಸಮೀಪದ ಕೆರೆಯಲ್ಲಿ ಇಳಿದು ಚೇತರಿಸಿಕೊಳ್ಳುತ್ತದೆ. ಹಾಗಾಗಿ ಈ ಕಾಡಾನೆ ಜನವಸತಿ ಪ್ರದೇಶದ ರೈತರ ಕೆರೆಗೆ ಇಳಿದಿದೆ.
ಆರೋಗ್ಯ ಚೇತರಿಕೆ ಆಗಿರುವ ಹಿನ್ನೆಲೆಯಲ್ಲಿ ಮತ್ತೆ ಅರಣ್ಯ ಪ್ರದೇಶದತ್ತ ಆನೆ ತೆರಳಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ. - ಹೆಚ್.ಕೆ. ಜಗದೀಶ್