ಗೋಣಿಕೊಪ್ಪಲು, ಜು. ೮: ಒಕ್ಕಲಿಗರ ಯುವ ವೇದಿಕೆ ಹಾಗೂ ಹಾತೂರು ಗ್ರಾಮಸ್ಥರ ಸಹಯೋಗದಲ್ಲಿ ಕೆಂಪೇಗೌಡ ಜಯಂತಿ ಅಂಗವಾಗಿ ೫ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟವನ್ನು ತಾ. ೧೨ರಂದು ಆಯೋಜಿಸಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ವಿ.ಜಿ. ಮಧುಸೂಧನ್ ತಿಳಿಸಿದ್ದಾರೆ.

ಪ್ರತಿವರ್ಷವೂ ಸಮುದಾಯ ಬಾಂಧವರು ಒಂದೆಡೆ ಸೇರಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದು, ಈ ಬಾರಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಕೋಟೆಕೊಪ್ಪ, ಕಾಕೋಟುಪರಂಬು, ಕಣ್ಣಂಗಾಲ-ಒAಟಿಯAಗಡಿ, ಕೈಕೇರಿ, ಗೊಟ್ಟಡ, ಕಳತ್ಮಾಡು, ಮೈತಾಡಿ, ಅಮ್ಮತ್ತಿ, ಚೆನ್ನಂಗಿ, ತಿತಿಮತಿ, ದೇವರಪುರ, ಸೀಗೆತೋಡು, ಗೋಣಿಕೊಪ್ಪ, ಪೊನ್ನಂಪೇಟೆ-ಕಿರುಗೂರು, ಕೋತೂರು, ಕುಟ್ಟ ಪೂಚೆಕಲ್ಲು, ಬಾಳೆಲೆ, ನಿಟ್ಟೂರು, ಕಾರ್ಮಾಡು, ಕೊಟ್ಟಗೇರಿ, ವೀರಾಜಪೇಟೆ ಹಾಗೂ ಮಗ್ಗುಲ ಸೇರಿದಂತೆ ವಿವಿಧ ಗ್ರಾಮಗಳ ಸುಮಾರು ೨೦೦೦ಕ್ಕೂ ಅಧಿಕ ಒಕ್ಕಲಿಗರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಕ್ರೀಡಾಕೂಟದ ಅಂಗವಾಗಿ ಬೆಳಿಗ್ಗೆ ೮ ಗಂಟೆಗೆ ಶ್ರೀ ವನಭದ್ರಕಾಳಿ ದೇವಸ್ಥಾನದಿಂದ ಕಲಶ ಹೊತ್ತ ಮಹಿಳೆಯರ ಮೆರವಣಿಗೆ ಆರಂಭವಾಗಲಿದೆ. ಪುರುಷರು ಹಾಗೂ ಮಕ್ಕಳು ಸಾಂಪ್ರದಾಯಿಕ ಉಡುಗೆಯಲ್ಲಿ ಮೆರವಣಿಗೆಯೊಂದಿಗೆ ಮಹಾದೇಶ್ವರ ದೇವಾಲಯದ ಸಮೀಪದ ದೊಡ್ಡಮನೆ ತಮ್ಮಯ್ಯ ಅವರ ಭತ್ತದ ಕೆಸರುಗದ್ದೆ ಮೈದಾನಕ್ಕೆ ಆಗಮಿಸಲಿದ್ದಾರೆ.

ಕ್ರೀಡಾಕೂಟದಲ್ಲಿ ಮಹಿಳೆಯರಿಗಾಗಿ ಥ್ರೋಬಾಲ್, ಹಗ್ಗಜಗ್ಗಾಟ, ಪುರುಷರಿಗಾಗಿ ವಾಲಿಬಾಲ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ೩೫ ವರ್ಷ ಮೇಲ್ಪಟ್ಟ ಪುರುಷರು ಹಾಗೂ ಮಹಿಳೆಯರಿಗೆ ಮಡಿಕೆ ಒಡೆಯುವ ಸ್ಪರ್ಧೆ, ೪ ರಿಂದ ೮ ವರ್ಷದ ಮಕ್ಕಳಿಗೆ ಪಾಸಿಂಗ್ ದ ಬಾಲ್, ಪ್ರೌಢ ಬಾಲಕ-ಬಾಲಕಿಯರ ಓಟದ ಸ್ಪರ್ಧೆ, ವಯಸ್ಕರ ಓಟ, ದಂಪತಿ ಓಡ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ವಿಜೇತರಿಗೆ ನಗದು ಬಹುಮಾನ ಹಾಗೂ ಪಾರಿತೋಷಕಗಳನ್ನು ವಿತರಿಸಲಾಗುವುದು.

ಉದ್ಘಾಟನಾ ಕಾರ್ಯಕ್ರಮವು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ವಿ.ಜಿ. ಮಧುಸೂಧನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಮೈಸೂರಿನ ಪ್ರಸನ್ನ ರಾಮೇಗೌಡ, ಹಾತೂರು ಗ್ರಾಮದ ಕಾಫಿ ಬೆಳೆಗಾರ ದೊಡ್ಡಮನೆ ಕೀರ್ತಿ ಕಿರಣ್, ಹಾತೂರು ಒಕ್ಕಲಿಗರ ಸಂಘದ ಅಧ್ಯಕ್ಷ ಹೆಚ್.ಜಿ. ಅನಿಲ್ ಕುಮಾರ್, ಕೆಸರುಗದ್ದೆ ಕ್ರೀಡಾಕೂಟದ ಅಧ್ಯಕ್ಷ ಹಂಚಿನಮನೆ ಡಿ. ಶ್ರೀನಿವಾಸ್, ಸ್ಥಳ ದಾನಿಗಳಾದ ಡಿ.ಇ. ತಿಮ್ಮಯ್ಯ, ಒಲಂಪಿಯನ್ ವಿ.ಆರ್. ರಘುನಾಥ್, ನಿವೃತ್ತ ಎಇಇ ಮಹದೇವ್, ಡಾ. ದೊಡ್ಡಮನೆ ಸಿ. ಸಾತ್ಯಕಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಸಮಾರೋಪ ಸಮಾರಂಭವು ಸಂಜೆ ೫ ಗಂಟೆಗೆ ನಡೆಯಲಿದ್ದು, ಕೆಸರುಗದ್ದೆ ಕ್ರೀಡಾಕೂಟದ ಅಧ್ಯಕ್ಷ ಹಂಚಿನಮನೆ ಡಿ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ಈ ಸಂದರ್ಭ ಸಂಘದ ಪ್ರಮುಖರಾದ ಕೆ.ಪಿ. ಅಜಿತ್, ಲವ ಮೈತಾಡಿ, ವಿ.ಪಿ. ಡಾಲು, ವಿ.ಜೆ. ಮನು, ಡಿ.ಜೆ. ನಿಖಿಲ್, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.