ಮಡಿಕೇರಿ, ಜು. ೮: ಕೊಡಗು ಜಿಲ್ಲಾ ಲೇಖಕರ ಹಾಗೂ ಕಲಾವಿದರ ಬಳಗದ ವತಿಯಿಂದ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ೨೦೨೪-೨೫ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಪಡೆದ ನಿಡ್ತ ಪ್ರೌಢಶಾಲೆಯ ವಿದ್ಯಾರ್ಥಿನಿ ಕು. ಜೆ.ಎಸ್. ಪೂರ್ವಿಕಾ ಅವರಿಗೆ ಅಭಿನಂದನಾ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ದತ್ತಿ ಪ್ರಶಸ್ತಿಯನ್ನು ವಿದ್ಯಾರ್ಥಿನಿಗೆ ಪ್ರದಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ವಕೀಲ ಹಾಗೂ ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ. ಲೋಕೇಶ್ ಕುಮಾರ್, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಇಂತಹ ಪುರಸ್ಕಾರಗಳು ಸಹಕಾರಿಯಾಗಿವೆ. ಪ್ರತಿಭಾ ಪುರಸ್ಕಾರಗಳು ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಧನೆ ಮಾಡಲು ಪ್ರೇರಣೆ ನೀಡುತ್ತವೆ. ಇದರಿಂದ ಮತ್ತಷ್ಟು ಮಕ್ಕಳು ಉತ್ತಮ ಸಾಧನೆ ಮಾಡುವ ಉತ್ಸಾಹ ಪಡೆದು, ಭವಿಷ್ಯದಲ್ಲಿ ಸಮಾಜದ ನಿರ್ಮಾತೃಗಳಾಗಿ ಹೊರಹೊಮ್ಮುತ್ತಾರೆ ಎಂದರು.
ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಟಿ.ಪಿ. ರಮೇಶ್, ಸರ್ಕಾರಿ ಪ್ರೌಢಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಅವರು ಭವಿಷ್ಯದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ನೆರವಾಗುವುದೇ ದತ್ತಿ ಪ್ರಶಸ್ತಿಯ ಉದ್ದೇಶವಾಗಿದೆ ಎಂದರು.
ಜಿಲ್ಲೆಯಲ್ಲಿ ಸಾಹಿತಿಗಳು ಹಾಗೂ ಕಲಾವಿದರನ್ನು ಸಂಘಟಿಸುವ ನಿಟ್ಟಿನಲ್ಲಿ ಬಳಗದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಾಹಿತ್ಯ, ಸಂಸ್ಕೃತಿ, ಪರಂಪರೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಬಳಗವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಲು ಸಹಕಾರಿಯಾಗಿವೆ. ಮುಂದಿನ ದಿನಗಳಲ್ಲಿ ಸೂಕ್ತ ಕ್ಷೇತ್ರಗಳಲ್ಲಿ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ತಮ್ಮ ತಂದೆ-ತಾಯಿಯರ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸುವುದಾಗಿ ಘೋಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಖಕರ ಹಾಗೂ ಕಲಾವಿದರ ಬಳಗದ ಅಧ್ಯಕ್ಷ ಲೋಕನಾಥ್ ಅಮೆಚೂರು ಮಾತನಾಡಿ, ಜಿಲ್ಲೆಯ ಲೇಖಕರು, ಸಾಹಿತಿಗಳು ಹಾಗೂ ಕಲಾವಿದರನ್ನು ಸಂಘಟಿಸಿ ಅವರಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸುವ ಮೂಲಕ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಕಾರ್ಯವನ್ನು ಬಳಗ ಮಾಡುತ್ತಿದೆ ಎಂದರು.
ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಮಾತನಾಡಿದರು. ಪ್ರಶಸ್ತಿ ಪಡೆದ ವಿದ್ಯಾರ್ಥಿನಿ ಜೆ.ಎಸ್. ಪೂರ್ವಿಕಾ ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು.
ಕಾರ್ಯಕ್ರಮದಲ್ಲಿ ಬಳಗದ ಉಪಾಧ್ಯಕ್ಷರಾದ ಪುದಿಯನೆರವನ ರೇವತಿ ರಮೇಶ್, ಎಂ.ಇ. ಮೊಹಿದ್ದೀನ್, ಪ್ರಧಾನ ಕಾರ್ಯದರ್ಶಿ ಭಾರತಿ ರಮೇಶ್, ಕೋಶಾಧಿಕಾರಿ ಕಡ್ಲೇರ ತುಳಸಿ ಮೋಹನ್, ನಿರ್ದೇಶಕರಾದ ಅಂಬೇಕಲ್ ನವೀನ್, ನೆರವಂಡ ಉಮೇಶ್, ಶ್ವೇತಾ ರವೀಂದ್ರ, ಬಿ.ಆರ್. ಜೋಯಪ್ಪ, ಸುಶೀಲಾ, ಸುನಿತಾ ಪಿ.ಪಿ., ಚಂದನ್ ಕಾಮತ್, ಪ್ರೇಮ ರಾಘವಯ್ಯ, ಕೆ.ವಿ. ಉಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ರೇವತಿ ರಮೇಶ್ ಸ್ವಾಗತಿಸಿದರು. ಭಾರತಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು.