ಸುಂಟಿಕೊಪ್ಪ, ಜು. ೮: ಸಹಕಾರ ಕ್ಷೇತ್ರವು ಪ್ರಜಾಪ್ರಭುತ್ವದ ಮಾದರಿಯಲ್ಲಿ ಕಾರ್ಯನಿರ್ವಹಿಸಬೇಕಾದರೆ ಪ್ರತಿಯೊಬ್ಬ ಸದಸ್ಯರು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ಇದರಿಂದ ಮಾತ್ರ ಸಹಕಾರ ಕ್ಷೇತ್ರ ಮತ್ತಷ್ಟು ಬಲಿಷ್ಠವಾಗಿ ಬೆಳೆಯಲು ಸಾಧ್ಯ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯಪಟ್ಟರು.
ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘ, ರಂಗಸಮುದ್ರ ಸಹಕಾರ ಧವಸ ಭಂಡಾರ ಸಂಘ ಹಾಗೂ ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ನಡೆದ ಅಭಿನಂದನಾ ಸಮಾರಂಭ ಹಾಗೂ ಮೂರು ಸಂಘಗಳ ಜಾಗದ ದಾಖಲೆ ಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಪ್ರಶ್ನಿಸುವ ಮನೋಭಾವ ಹೊಂದಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದು ಸಹಕಾರಿ ಕ್ಷೇತ್ರದ ಆರೋಗ್ಯಕರ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಇದೇ ಸಂದರ್ಭ ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ರಂಗಸಮುದ್ರ ಸಹಕಾರ ಧವಸ ಭಂಡಾರ ಸಂಘದ ಕಟ್ಟಡ ನಿರ್ಮಾಣ ಕಾಮಗಾರಿಗೆ ತಲಾ ೫ ಲಕ್ಷ ರೂ. ಅನುದಾನ ನೀಡುವುದಾಗಿ ಶಾಸಕ ಡಾ. ಮಂತರ್ ಗೌಡ ಘೋಷಿಸಿದರು.
ಗ್ರಾಮೀಣ ಭಾಗದ ಜನರು ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿ ಆರ್ಥಿಕವಾಗಿ ಸದೃಢರಾಗಬೇಕು. ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಹಾಗೂ ಸಂಬAಧಿಸಿದ ಸಚಿವಾಲಯದಿಂದ ಅಗತ್ಯ ಸಹಕಾರ ಒದಗಿಸಲು ಸಿದ್ಧವಿರುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ರಂಗಸಮುದ್ರ ಸಹಕಾರ ಧವಸ ಭಂಡಾರ ಸಂಘದ ಅಧ್ಯಕ್ಷ ಎ.ಎಂ. ಲೋಕನಾಥ್, ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ೨೨೩೫ಕ್ಕೂ ಅಧಿಕ ಸದಸ್ಯರು, ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ೪೪೮ ಸದಸ್ಯರು ಹಾಗೂ ರಂಗಸಮುದ್ರ ಸಹಕಾರ ಧವಸ ಭಂಡಾರದಲ್ಲಿ ೩೩೫ಕ್ಕೂ ಅಧಿಕ ಸದಸ್ಯರು ಸಹಕಾರಿ ತತ್ವದಡಿ ಕಾರ್ಯನಿರ್ವಹಿಸುತ್ತಿದ್ದು, ಸಂಸ್ಥೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮುರುಳಿ ಮಾದಯ್ಯ ವಹಿಸಿದ್ದರು.
ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಎಂ. ಸಾಗರ್ ಮಾತನಾಡಿ, ಸಂಘಗಳ ಜಾಗದ ದಾಖಲಾತಿಗಳನ್ನು ಸರಿಪಡಿಸಿ ನೀಡಿದ ಅಧಿಕಾರಿಗಳನ್ನು ಸ್ಮರಿಸಿದರು.
ಈ ಸಂದರ್ಭ ಮೂರು ಸಹಕಾರ ಸಂಘಗಳ ವತಿಯಿಂದ ಶಾಸಕ ಡಾ. ಮಂತರ್ ಗೌಡ ಹಾಗೂ ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮೂರು ಸಹಕಾರ ಸಂಘಗಳ ಉಪಾಧ್ಯಕ್ಷರು, ನಿರ್ದೇಶಕ ಮಂಡಳಿ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು. ಧವಸ ಭಂಡಾರದ ಕಾರ್ಯದರ್ಶಿ ಶಿವಕುಮಾರ್ ಸ್ವಾಗತಿಸಿದರು. ಬಿ.ಎಸ್. ಧನಪಾಲ್ ವಂದಿಸಿದರು.