ಪೊನ್ನಂಪೇಟೆ, ಜು. ೮: ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪೋಷಕ-ಶಿಕ್ಷಕ ಸಂಘದ ಸಭೆ ಹಾಗೂ ಸಿ.ಇ.ಟಿ. ಪರೀಕ್ಷೆ ತರಬೇತಿಯ ಅಗತ್ಯತೆಯ ಕುರಿತು ಮಾಹಿತಿ ಕಾರ್ಯಾಗಾರವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಬ್ರಾಹ್ಮಿ ವಿದ್ವತ್ ಅಕಾಡೆಮಿಯ ಸಿ.ಇ.ಟಿ. ಹಾಗೂ ನೀಟ್ ತರಬೇತಿ ವಿಭಾಗದ ಸಂಯೋಜಕ ಅರುಣ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಿ.ಇ.ಟಿ. ಮತ್ತು ನೀಟ್ ಪರೀಕ್ಷೆಗಳ ಮಹತ್ವ, ವೈಜ್ಞಾನಿಕ ಅಧ್ಯಯನ ವಿಧಾನಗಳು, ಸಮಯ ನಿರ್ವಹಣೆ ಹಾಗೂ ಯಶಸ್ಸು ಸಾಧಿಸಲು ಅನುಸರಿಸಬೇಕಾದ ತಂತ್ರಗಳ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾಹಿತಿ ನೀಡಿದರು.
ನೀಟ್ ಪರೀಕ್ಷೆಯಲ್ಲಿ ೭೨೦ ಅಂಕಗಳಲ್ಲಿ ೫೦೦ಕ್ಕೂ ಹೆಚ್ಚು ಅಂಕ ಗಳಿಸಿದರೆ ವೈದ್ಯಕೀಯ (ಎಂಬಿಬಿಎಸ್) ಸೇರಿದಂತೆ ವಿವಿಧ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ಪಡೆಯುವ ಅವಕಾಶ ಹೆಚ್ಚಿರುತ್ತದೆ. ೨೦೦ರಿಂದ ೫೦೦ ಅಂಕಗಳ ನಡುವೆ ಪಡೆದ ವಿದ್ಯಾರ್ಥಿಗಳಿಗೆ ನರ್ಸಿಂಗ್, ಫಾರ್ಮಸಿ, ಫಿಸಿಯೋಥೆರಪಿ, ನ್ಯೂಟ್ರಿಷನ್, ಡೆಂಟಲ್, ಆಯುರ್ವೇದ, ಹೋಮಿಯೋಪಥಿ ಹಾಗೂ ವೆಟರ್ನರಿ ಸೇರಿದಂತೆ ಹಲವು ಪ್ಯಾರಾಮೆಡಿಕಲ್ ಕೋರ್ಸ್ಗಳಲ್ಲಿ ಅವಕಾಶಗಳಿವೆ ಎಂದು ವಿವರಿಸಿದರು. ಪ್ರಥಮ ಹಾಗೂ ದ್ವಿತೀಯ ಪಿಯುಸಿ ಎರಡೂ ವರ್ಷಗಳು ಸಮಾನ ಮಹತ್ವ ಹೊಂದಿದ್ದು, ಮೊದಲ ವರ್ಷದ ಪಠ್ಯವನ್ನು ಎರಡನೇ ವರ್ಷದಲ್ಲಿ ನಿರಂತರವಾಗಿ ಪುನರಾವರ್ತನೆ ಮಾಡಬೇಕು. ಬೋರ್ಡ್ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮಾನ ಸಿದ್ಧತೆ ನಡೆಸುವುದು ಯಶಸ್ಸಿನ ಗುಟ್ಟು ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ನಿವೃತ್ತ ಪ್ರಾಂಶುಪಾಲೆ ತಾತಂಡ ಜ್ಯೋತಿ ಪ್ರಕಾಶ್, ವಿದ್ಯಾರ್ಥಿ ಜೀವನವು ಬದುಕಿನ ಮಹತ್ವದ ಹಂತವಾಗಿದ್ದು, ಈ ಅವಧಿಯಲ್ಲಿ ಶೇ.೧೦೦ರಷ್ಟು ಶ್ರಮ ಮತ್ತು ಏಕಾಗ್ರತೆ ತೋರಿದರೆ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಹದಿಹರೆಯದ ಅವಧಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆ. ಸಮಸ್ಯೆಗಳು ಎದುರಾದಾಗ ಅವುಗಳನ್ನು ಮುಚ್ಚಿಡದೆ ಪೋಷಕರು ಹಾಗೂ ಶಿಕ್ಷಕರೊಂದಿಗೆ ಚರ್ಚಿಸಬೇಕು ಎಂದು ಸಲಹೆ ನೀಡಿದರು.
ಮದ್ಯಪಾನ, ಮಾದಕ ವಸ್ತುಗಳು, ಧೂಮಪಾನ ಹಾಗೂ ಅನಗತ್ಯ ಚಟುವಟಿಕೆಗಳಿಂದ ದೂರವಿದ್ದು ಗುರಿಯತ್ತ ಗಮನಹರಿಸಬೇಕು. ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳ ಜೊತೆಗೆ ವಿದ್ಯಾಭ್ಯಾಸಕ್ಕೂ ಸಮಾನ ಆದ್ಯತೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಎಸ್.ಎಸ್. ಮಾದಯ್ಯ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಪೋಷಕರು ಮತ್ತು ಶಿಕ್ಷಕರ ಸಹಕಾರ ಅತ್ಯಂತ ಮುಖ್ಯವಾಗಿದೆ. ಪೋಷಕ-ಶಿಕ್ಷಕ ಸಂಘವು ವಿದ್ಯಾರ್ಥಿಗಳ ಕಲಿಕೆ, ವ್ಯಕ್ತಿತ್ವ ವಿಕಾಸ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ಪ್ರಮುಖ ವೇದಿಕೆಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಪೋಷಕ-ಶಿಕ್ಷಕ ಸಂಘದ ಕಾರ್ಯದರ್ಶಿ ರೇಷ್ಮ, ಸಂಚಾಲಕ ಲೆಫ್ಟಿನೆಂಟ್ ಅಕ್ರಂ, ಉಪನ್ಯಾಸಕರಾದ ಜೆಸಿಂತಾ, ಚೇತನ್ ಚಿಣ್ಣಪ್ಪ, ಜಶ್ಮೀ, ಕರಿಷ್ಮಾ ಹಾಗೂ ಯಶೋದ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಮತ್ತು ವಿಭಾಗದ ವಿವಿಧ ಚಟುವಟಿಕೆಗಳ ಕುರಿತು ಮಾಹಿತಿ ನೀಡಲಾಯಿತು.