ಕೂಡಿಗೆ, ಜು. ೮: ಕೂಡಿಗೆ ಸೈನಿಕ ಶಾಲೆಯಲ್ಲಿ ನೂತನವಾಗಿ ಆಯ್ಕೆಗೊಂಡ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭವು ಶಾಲೆಯ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ ಜರುಗಿತು. ಸಮಾರಂಭದಲ್ಲಿ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರು ಅಧಿಕೃತವಾಗಿ ತಮ್ಮ ಜವಾಬ್ದಾರಿಗಳನ್ನು ವಹಿಸಿಕೊಂಡರು.

ಶಾಲೆಯ ಪ್ರಬಾರ ಪ್ರಾಂಶುಪಾಲ ವಿಂಗ್ ಕಮಾಂಡರ್ ಮಹಮದ್ ಶಾಜಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರುಗಳಿಗೆ ಬ್ಯಾಡ್ಜ್ಗಳನ್ನು ತೊಡಿಸುವ ಮೂಲಕ ಜವಾಬ್ದಾರಿಗಳನ್ನು ನೀಡಿದರು.

ಶಾಲೆಯ ಉಪನಾಯಕನಾಗಿ ಸಿದ್ಧಾಂತ್ ಎಸ್.ಎಚ್, ಶಾಲೆಯ ಶಿಸ್ತಿನ ಉಪನಾಯಕನಾಗಿ ಮಿತ್ರ, ಶೈಕ್ಷಣಿಕ ಉಪನಾಯಕನಾಗಿ ಹಿಮಾಂಕ್, ಭೋಜನಾಲಯದ ಉಪನಾಯಕನಾಗಿ ಕೆಡೆಟ್ ಕೃಷ್ಣ ಹೆಚ್ ಎ, ಸಾಂಸ್ಕೃತಿಕ ವಿಭಾಗದ ಉಪನಾಯಕನಾಗಿ ಅರ್ಜಾಕ್ ಎ, ಕ್ರೀಡಾ ವಿಭಾಗದ ಉಪನಾಯಕಿಯಾಗಿ ದೀಪ್ತಿ ದೇವಿ, ಐ ಟಿ ವಿಭಾಗದ ಉಪನಾಯಕನಾಗಿ ರಿದಮ್ ಆಯ್ಕೆಯಾದರು.

ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ನಿಲಯಗಳ ಉಪನಾಯಕರು ಗಳಿಗೂ ನಿಲಯಗಳ ಬ್ಯಾಡ್ಜ್ಗಳನ್ನು ನೀಡಿ ಗೌರವಿಸಲಾಯಿತು. ನೂತನವಾಗಿ ಪದಗ್ರಹಣ ಮಾಡಿದ ವಿದ್ಯಾರ್ಥಿ ನಾಯಕರು ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕತೆ, ನಿಷ್ಠೆ ಮತ್ತು ಬದ್ಧತೆಯಿಂದ ನಿರ್ವಹಿಸುವುದಾಗಿ ಜಂಟಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಬಾರ ಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ ಶಾಲೆಯ ಮೌಲ್ಯಗಳು ಹಾಗೂ ಧ್ಯೇಯವಾಕ್ಯವನ್ನು ಎತ್ತಿಹಿಡಿಯುವಂತೆ ಕರೆ ನೀಡಿದರು. ತರಬೇತಿ ಮತ್ತು ದೈನಂದಿನ ಚಟುವಟಿಕೆಗಳ ಅವಧಿಯಲ್ಲಿ ಸಹವರ್ತಿ ವಿದ್ಯಾರ್ಥಿಗಳೊಂದಿಗೆ ವ್ಯವಹರಿಸುವಾಗ ಶಿಸ್ತು, ನಿಷ್ಪಕ್ಷಪಾತತೆ, ಪ್ರಾಮಾಣಿಕತೆ ಮತ್ತು ಆದರ್ಶ ನಾಯಕತ್ವದ ಗುಣಗಳನ್ನು ಪ್ರದರ್ಶಿಸುವುದು ಅತ್ಯಂತ ಮುಖ್ಯ ಎಂದು ಅವರು ಹೇಳಿದರು. ಸಮಾರಂಭದಲ್ಲಿ ಹಿರಿಯ ಶಿಕ್ಷಕ ವಿಬಿನ್ ಕುಮಾರ್, ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿ, ಎನ್‌ಸಿಸಿ ಸಿಬ್ಬಂದಿ, ದೈಹಿಕ ಶಿಕ್ಷಕರು ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಧ್ರುವ ವಿ. ಭಾರದ್ವಾಜ್ ಹಾಗೂ ತರುಣ್ ಪ್ರವೀಣ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.