ಶನಿವಾರಸಂತೆ, ಜು. ೮: ಸಮೀಪದ ನಿಡ್ತ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಪೂರ್ವ ವಿದ್ಯಾರ್ಥಿಗಳ ಮಹಾಸಂಘ ಹಾಗೂ ಕ್ರೀಡಾ ತಂಡದ ವತಿಯಿಂದ ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ‘ಡಿಪ್ಲೊಮಾ ಇನ್ ಫ್ಯಾಶನ್ ಡಿಸೈನಿಂಗ್’ ಕೋರ್ಸ್ ಆರಂಭಿಸುವAತೆ ಒತ್ತಾಯಿಸಿ ಬೆಂಗಳೂರಿನ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೇರಿದಂತೆ ಮಡಿಕೇರಿ ಶಾಸಕ ಮಂತರ್ ಗೌಡ ಅವರಿಗೆ ಮನವಿ ಸಲ್ಲಿಸಲಾಗಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಈ ಕೋರ್ಸ್ ಆರಂಭಿಸುವ ಅಗತ್ಯವಿದೆ. ಪ್ರಸ್ತುತ ಫ್ಯಾಶನ್ ಡಿಸೈನಿಂಗ್ ಡಿಪ್ಲೊಮಾ ಕೋರ್ಸ್ಗೆ ಉತ್ತಮ ಬೇಡಿಕೆ ಇದ್ದು, ಎಸ್‌ಎಸ್‌ಎಲ್‌ಸಿ ನಂತರ ಗ್ರಾಮೀಣ ಭಾಗದ ಬಡ ಹಾಗೂ ಪ್ರತಿಭಾವಂತ ಹೆಣ್ಣುಮಕ್ಕಳು ತಮ್ಮ ಆಸಕ್ತಿಯ ವಿಷಯದಲ್ಲಿ ವ್ಯಾಸಂಗ ಮಾಡಲು ಹಾಸನ, ಮಂಗಳೂರು, ಮೈಸೂರು, ಬೆಂಗಳೂರು ಸೇರಿದಂತೆ ದೂರದ ನಗರಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ ಎಂದು ಮನವಿ ಯಲ್ಲಿ ಉಲ್ಲೇಖಿಸಲಾಗಿದೆ. ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಈಗಾಗಲೇ ಐದು ಡಿಪ್ಲೊಮಾ ಕೋರ್ಸ್ಗಳು ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ಪೂರಕವಾಗಿ ಹೆಣ್ಣುಮಕ್ಕಳ ಸ್ವಾವಲಂಬಿ ಬದುಕು ಹಾಗೂ ಸ್ವಂತ ಉದ್ಯಮ ಆರಂಭಿಸಲು ನೆರವಾಗುವ ‘ಡಿಪ್ಲೊಮಾ ಇನ್ ಫ್ಯಾಶನ್ ಡಿಸೈನಿಂಗ್’ ಕೋರ್ಸ್ ಅನ್ನು ಆರಂಭಿಸಬೇಕು ಎಂದು ಆಗ್ರಹಿಸಲಾಗಿದೆ.
ನಿಡ್ತ ಸ. ಮಾ.ಪ್ರಾ. ಶಾಲೆಯ ಪೂರ್ವ ವಿದ್ಯಾರ್ಥಿಗಳ ಮಹಾಸಂಘದ ಅಧ್ಯಕ್ಷ ಎಂ.ಸಿ. ಜಯಕುಮಾರ್, ಕಾರ್ಯದರ್ಶಿ ಸುನೀಲ್ ಗೌಡಳ್ಳಿ ಹಾಗೂ ಸಂಘದ ಸದಸ್ಯರು ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.