ಮಡಿಕೇರಿ ಜು. ೭: ತೂಗುಸೇತುವೆಗಳ ಸರದಾರ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (೭೮) ನಿಧನರಾದರು.

ಮಡಿಕೇರಿ ಬಳಿಯ ಅಬ್ಬಿಫಾಲ್ಸ್, ಕಣಿವೆ ತೂಗು ಸೇತುವೆ, ಗೂನಡ್ಕ ಸೇತುವೆ, ತೆಪ್ಪದಕಂಡಿ, ನಿಸರ್ಗಧಾಮ ಸೇತುವೆ ಸೇರಿದಂತೆ ದೇಶವ್ಯಾಪಿ ೧೪೦ ತೂಗು ಸೇತುವೆಗಳನ್ನು ನಿರ್ಮಿಸಿದ್ದ ಖ್ಯಾತಿ ಗಿರೀಶ್ ಭಾರದ್ವಾಜ್ ಅವರದ್ದಾಗಿತ್ತು. ೨೦೧೭ ರಲ್ಲಿ ಕೇಂದ್ರ ಸರ್ಕಾರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಗಿರೀಶ್ ಅವರಿಗೆ ಪ್ರದಾನ ಮಾಡಿತ್ತು.

ಇಂಜಿನಿಯರ್ ಪದವಿ ಪಡೆದ ಬಳಿಕ ಸುಳ್ಯದಲ್ಲಿ ಆಯಶ್ಯಿಲ್ಪ ಇಂಜಿನಿಯರಿAಗ್ ವರ್ಕ್ಸ್ ಆರಂಭಿಸಿದ್ದ ಭಾರದ್ವಾಜ್ ಅವರು ಬಳಿಕ ತೂಗುಸೇತುವೆ ನಿರ್ಮಾಣ ಆರಂಭಿಸಿ ದೇಶ - ವಿದೇಶಗಳಲ್ಲಿ ತೂಗು ಸೇತುವೆಗಳನ್ನು ನಿರ್ಮಿಸುವ ಮೂಲಕ ಪ್ರಸಿದ್ಧರಾಗಿದ್ದರು.

ಸರಳ ತಂತ್ರಜ್ಞಾನ ಬಳಸಿ ಕಠಿಣ ಪರಿಸ್ಥಿತಿಯಲ್ಲಿಯೂ ತೂಗು ಸೇತುವೆ ನಿರ್ಮಾಣ ಮಾಡುತ್ತಿದ್ದ ಹೆಗ್ಗಳಿಕೆ ಅವರದ್ದಾಗಿತ್ತು. ‘ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ’ ಎಂಬ ಹೆಸರಿನಿಂದಲೂ ದೇಶವ್ಯಾಪಿ ಅವರು ಖ್ಯಾತರಾಗಿದ್ದರು. ಅವರ ಬಗ್ಗೆ ಸಾಕ್ಷö್ಯಚಿತ್ರವೂ ನಿರ್ಮಾಣವಾಗಿತ್ತಲ್ಲದೇ ಅವರ ಜೀವನ ಸಾಧನೆ ಆಧಾರಿತ ಸಿನಿಮಾ ಕೂಡ ಚಿತ್ರೀಕರಣದ ಹಂತದಲ್ಲಿತ್ತು.

ಹೃದಯ ಸಂಬAಧಿ ಸಮಸ್ಯೆಯಿಂದ ಕೆಲವು ದಿನಗಳಿಂದ ಕೆವಿಜಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಿರೀಶ್ ಮಂಗಳವಾರ ಮುಂಜಾನೆ ನಿಧನರಾದರು. ಅವರ ಪತ್ನಿ ದಿ. ಉಷಾ. ಅವರು ಪುತ್ರರಾದ ಸುದರ್ಶನ್, ಪತಂಜಲಿ, ಪುತ್ರಿ ರಷಿಯಾರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಸುಳ್ಯ ಬಳಿಯ ಸ್ವಗ್ರಾಮ ಅರಂಬೂರಿನಲ್ಲಿ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಸುಳ್ಯ ರೋಟರಿ ಸಂಸ್ಥೆಯ ಸದಸ್ಯರಾಗಿದ್ದ ಗಿರೀಶ್ ಭಾರದ್ವಾಜ್ ಅವರನ್ನು ೫ ವರ್ಷಗಳ ಹಿಂದೆ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಗಿತ್ತು.