ಮಡಿಕೇರಿ, ಜು. ೭: ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೌಂಡೇಶನ್ (ಎಫ್.ಎಂ.ಸಿ.ಜಿ.ಟಿ.) ವತಿಯಿಂದ ಮಡಿಕೇರಿಯಲ್ಲಿರುವ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಪ್ರತಿಮೆಗಳು ಮತ್ತು ಅವುಗಳ ಸುತ್ತಮುತ್ತ ಬೆಳೆದಿದ್ದ ಗಿಡಗಂಟಿಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಸಂಘದ ಪದಾಧಿಕಾರಿಗಳು ನಡೆಸಿದರು.

ಎಫ್.ಎಂ.ಸಿ.ಜಿ.ಟಿ. ಸಂಸ್ಥೆಯು ೨೦೨೩ರಲ್ಲಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯ ಮರು ಅನಾವರಣದ ಬಳಿಕ ವೀರ ಸೇನಾನಿಗಳ ಜನ್ಮದಿನ, ಪುಣ್ಯತಿಥಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಪ್ರತಿಮೆಗಳ ನಿರ್ವಹಣೆ ಹಾಗೂ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡುತ್ತಿದೆ. ಸಂಸ್ಥೆಯು ನಡೆಸುವ ಎಲ್ಲಾ ಚಟುವಟಿಕೆಗಳಿಗೆ ಯಾವುದೇ ಸರ್ಕಾರಿ ಅನುದಾನ ಅಥವಾ ಸವಲತ್ತುಗಳನ್ನು ಪಡೆಯುವುದಿಲ್ಲ.

ಇಂದು ನಡೆದ ಸ್ವಚ್ಛತಾ ಕಾರ್ಯದಲ್ಲಿ ಸಂಘದ ಗೌರವಾಧ್ಯಕ್ಷ ಅಜ್ಜೀನಂಡ ತಮ್ಮು ಪೂವಯ್ಯ, ಪದಾಧಿಕಾರಿಗಳಾದ ಚೊಟ್ಟೆಯಂಡ ಸಂಜು ಕಾವೇರಪ್ಪ, ಪಾಲೇಂಗಡ ಅಮಿತ್, ತೇಲಪಂಡ ಸುಬ್ಬಯ್ಯ ಹಾಗೂ ಇತರ ಸದಸ್ಯರು ಭಾಗವಹಿಸಿದ್ದರು.

ಸಂಘದ ಅಧ್ಯಕ್ಷರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಿತು. ಸಂಘದ ಪದಾಧಿಕಾರಿಗಳಾದ ಪುತ್ತರಿರ ಪಪ್ಪು ತಿಮ್ಮಯ್ಯ, ಚೆಯ್ಯಂಡ ಸತ್ಯ, ಅಜ್ಜಮಕ್ಕಡ ವಿನು ಕುಶಾಲಪ್ಪ, ಅಪ್ಪಾರಂಡ ವೇಣು, ಚಂಗAಡ ಸೂರಜ್ ಸೇರಿದಂತೆ ಹಲವು ಸದಸ್ಯರು ಪಾಲ್ಗೊಂಡರು.