ಶನಿವಾರಸAತೆ, ಜು. ೭: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳುಗಳಲೆ ಕಾಲೋನಿಯ ಅಂಗನವಾಡಿ ಕೇಂದ್ರದ ಪಕ್ಕದ ಚರಂಡಿಯಲ್ಲಿ ಸಂಪೂರ್ಣ ಹೂಳು ತುಂಬಿ, ಕಳೆ ಸಸ್ಯ ಬೆಳೆದು ನಿಂತಿದ್ದು ದುರ್ನಾತ ಬೀರುತ್ತಿತ್ತು. ಚರಂಡಿಯ ದುಸ್ಥಿತಿ ಕಂಡು, ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದ ಹಾಗೂ ಪುಟ್ಟ ಮಕ್ಕಳ ಆರೋಗ್ಯದ ಕಾಳಜಿಯಿಂದ ಕರವೇ ಸ್ವಾಭಿಮಾನ ಬಣದ ಕಾರ್ಯಕರ್ತರು ಪಂಚಾಯಿತಿ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ದುಂಡಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯಿಷಾ ತಕ್ಷಣ ಕ್ರಮ ಕೈಗೊಂಡು ಪೌರ ಕಾರ್ಮಿಕರನ್ನು ಚರಂಡಿ ಸ್ವಚ್ಛತೆಗೆ ಕಳುಹಿಸಿಕೊಟ್ಟರು. ಪಂಚಾಯಿತಿ ಸ್ವಚ್ಛತಾ ಕಾರ್ಮಿಕರಾದ ಭರತ್ ನಾಯಕ್, ಆನಂದ್ ಅವರು ಚರಂಡಿಯಲ್ಲಿ ತುಂಬಿದ್ದ ಹೂಳು ತೆಗೆದು, ಬೆಳೆದು ನಿಂತಿದ್ದ ಕಳೆ ಸಸ್ಯಗಳನ್ನು ಕಿತ್ತೆಸೆದು ಚರಂಡಿಯನ್ನು ಸ್ವಚ್ಛಗೊಳಿಸಿದರು.