ಕುಶಾಲನಗರ, ಜು ೩: ಕುಶಾಲನಗರದಲ್ಲಿ ಹುಣ್ಣಿಮೆ ಅಂಗವಾಗಿ ನಡೆದ ೧೮೭ನೇ ಕಾವೇರಿ ಮಹಾ ಆರತಿ ಕಾರ್ಯಕ್ರಮದಲ್ಲಿ ಮಳೆಗಾಗಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ಆರತಿ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಕುಂಕುಮಾರ್ಚನೆ, ಅಷ್ಟೋತ್ತರ ಪಠಿಸುವ ಮೂಲಕ ಕಾವೇರಿ ಮೂಲದಲ್ಲಿ ಉತ್ತಮ ಮಳೆ ಬೀಳುವುದರೊಂದಿಗೆ ನದಿ ತುಂಬಿ ಹರಿಯುವ ಮೂಲಕ ಸಮೃದ್ಧ ನಾಡಿಗಾಗಿ ಪ್ರಾರ್ಥಿಸಲಾಯಿತು. ಈ ಸಂದರ್ಭ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕರಾದ ವಿಠಲ ಸಾಲಿಯಾನ್ ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಮಳೆಯ ಪ್ರಮಾಣ ಸಂಪೂರ್ಣ ಕುಂಠಿತಗೊAಡಿದೆ. ಇದರಿಂದ ಕೃಷಿ ಚಟುವಟಿಕೆ ಸೇರಿದಂತೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಅಭಾವ ತಲೆದೋರುವ ಸಾಧ್ಯತೆ ಅಧಿಕವಾಗಿದೆ ಎಂದರು. ನಾಡಿನ ಸುಭಿಕ್ಷೆಗಾಗಿ ಕೋರಿ ಪ್ರತಿಯೊಬ್ಬರು ದೇವರ ಮೊರೆ ಹೋಗಬೇಕಾಗಿದೆ ಎಂದು ಹೇಳಿದರು.

ನಂತರ ಕಾವೇರಿ ನದಿಗೆ ಮಹಾ ಆರತಿ ಬೆಳಗಲಾಯಿತು. ಈ ಸಂದರ್ಭ ಕಾವೇರಿ ಮಹಾ ಆರತಿ ಬಳಗದ ಪ್ರಮುಖರಾದ ಧರಣಿ ಸೋಮಯ್ಯ, ವೈಶಾಕ್, ಆದರ್ಶ್, ಮಂಡೆಪAಡ ಬೋಸ್ ಮೊಣ್ಣಪ್ಪ, ಕರುಂಬಯ್ಯ, ಭೋಜಣ್ಣ ರೆಡ್ಡಿ, ನಳಿನಿ ಗೌಡ ಇದ್ದರು.