ಕುಶಾಲನಗರ, ಜು. ೩: ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಮೂಲಕ ವೃಕ್ಷ ಮಾತೆ ಡಾ. ಸಾಲುಮರ ತಿಮ್ಮಕ್ಕ ಉದ್ಯಾನವನ ನಿರ್ಮಾಣದ ಚಿಂತನೆ ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್ ತಿಳಿಸಿದ್ದಾರೆ. ಅರಣ್ಯ ಇಲಾಖೆ ಮತ್ತು ಕುಶಾಲನಗರ ಕಾವೇರಿ ಪರಿಸರ ರಕ್ಷಣಾ ಬಳಗದ ಆಶ್ರಯದಲ್ಲಿ ಕುಶಾಲನಗರ ಕೊಪ್ಪ ಗಡಿ ಭಾಗದ ಪ್ರೇಜ್ಹರ್‌ಪೇಟೆ ಸೇತುವೆ ಕಾವೇರಿ ರೋಟರಿ ಉದ್ಯಾನದಲ್ಲಿ ಸಾಲುಮರ ತಿಮ್ಮಕ್ಕ ಅವರ ೧೧೫ ನೇ ಜನ್ಮದಿನದ ಅಂಗವಾಗಿ ನಡೆದ ವಿದ್ಯಾರ್ಥಿಗಳೊಂದಿಗೆ ಪರಿಸರ ಮಾಹಿತಿ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರ ಶಾಸಕರ ಅನುದಾನ ಮತ್ತು ಇಲಾಖೆಯ ಮೂಲಕ ವೃಕ್ಷಮಾತೆ ಸಾಲುಮರ ತಿಮ್ಮಕ್ಕ ಅವರ ಹೆಸರಿನಲ್ಲಿ ಉದ್ಯಾನವನ ನಿರ್ಮಿಸಿ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಉತ್ತಮ ಪರಿಸರ ನಿರ್ಮಾಣದ ಕಾಳಜಿ ಹೊಂದಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಪರಿಸರ ತಜ್ಞ ಭಜನ್ ಬೋಪಣ್ಣ, ಪ್ರಕೃತಿಯಲ್ಲಿ ಅಗಾಧ ಶಕ್ತಿ ಅಡಗಿದೆ. ಆರಾಧನೆ ಮೂಲಕ ಶಕ್ತಿ ಗಳಿಸಲು ಸಾಧ್ಯ ಎಂದರಲ್ಲದೆ ನದಿ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಪಣತೊಡಬೇಕಾಗಿದೆ ಎಂದು ಹೇಳಿದರು.
ಯಾವುದೇ ಸಂದರ್ಭ ಪ್ರಕೃತಿಯ ನಾಶ ಸಲ್ಲದು. ಪ್ರತಿಯೊಂದು ಮರ, ಗಿಡಗಳಿಗೆ ಚಲನೆ ಮತ್ತು ಶಕ್ತಿ ಇದೆ. ಪ್ರಕೃತಿ ಮೂಲಕ ತಮ್ಮ ಜೀವನವನ್ನು ಸಂರಕ್ಷಿಸಿಕೊಳ್ಳಬೇಕು ಭ್ರಮೆಯಲ್ಲಿ ಬದುಕು ಅಗತ್ಯ ಇಲ್ಲ ಎಂದ ಅವರು ತನ್ನ ಪುತ್ರನನ್ನು ಚಿಕ್ಕಂದಿನಿAದಲೇ ಅರಣ್ಯದ ವಾಸ್ತವ ಅರಿವು ಮೂಡಿಸುವ ಮೂಲಕ ಬೆಳೆಸುತ್ತಿದ್ದೇನೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಾಲುಮರ ತಿಮ್ಮಕ್ಕ ಅವರ ಸಾಧನೆ ಮತ್ತು ಅವರಿಗೆ ಲಭಿಸಿದ ಗೌರವ ಬಗ್ಗೆ ಸಾಲುಮರ ತಿಮ್ಮಕ್ಕ ಫೌಂಡೇಶನ್ ಪ್ರಶಸ್ತಿಗೆ ಭಾಜನರಾದ ಪರಿಸರ ಬಳಗದ ಸಂಚಾಲಕರಾದ ಎಂ.ಎನ್. ಚಂದ್ರಮೋಹನ್ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಉದ್ಯಮಿ ಹಾಗೂ ರೋಟರಿ ಕ್ಲಬ್ ನಿರ್ಗಮಿತ ಅಧ್ಯಕ್ಷ ಮನು ಪೆಮ್ಮಯ್ಯ, ಭಾರತ ಮಾತಾ ವಿದ್ಯಾಸಂಸ್ಥೆಯ ಆಡಳಿತ ಅಧಿಕಾರಿ ಫಾ ಪ್ರದೀಶ್ ದಿನದ ಮಹತ್ವದ ಬಗ್ಗೆ ಮಾತನಾಡಿದರು.
ಭಜನ್ ಬೋಪಣ್ಣ ಅವರ ಪುತ್ರ ಇಂಡಿಯನ್ ಮೋಗ್ಲಿ ಖ್ಯಾತಿಯ ಪುಟ್ಟ ಬಾಲಕ ವಿಯಾನ್ ಬೋಪಣ್ಣ ಅವರು ಸಾಲುಮರ ತಿಮ್ಮಕ್ಕ ಅವರ ಬಗ್ಗೆ ಮಾಹಿತಿ ಉಳ್ಳ ಬಿತ್ತಿ ಪತ್ರವನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭ ಕಾವೇರಿ ರೋಟರಿ ಉದ್ಯಾನವನ ನಿರ್ಮಾತೃ ಉದ್ಯಮಿ ಮನುಪೆಮ್ಮಯ್ಯ, ಪರಿಸರ ತಜ್ಞರಾದ ಭಜನ್ ಬೋಪಣ್ಣ ದಂಪತಿಯನ್ನುಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಹಿರಿಯರು ಹಾಗೂ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವೇರಿ ರಿವರ್ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಂಡೆಪAಡ ಬೋಸ್ ಮೊಣ್ಣಪ್ಪ ಉಪಸ್ಥಿತರಿದ್ದರು. ಸ್ಥಳೀಯ ಕೊಪ್ಪ ಭಾರತಮಾತ ಪದವಿ ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಕರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪತ್ರಕರ್ತ ಭೋಜಣ್ಣ ರೆಡ್ಡಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ವನಿತಾ ಚಂದ್ರಮೋಹನ್ ವಂದಿಸಿದರು. ಧರಣಿ ಸೋಮಯ್ಯ ಪ್ರಾರ್ಥಿಸಿದರು.